Advertisement

Lockdown ಕಾರಣದಿಂದ 1200 ಕಿಲೋಮೀಟರ್ ಸೈಕಲ್ ತುಳಿದ ಬಾಲಕಿಗೆ ಸೈಕ್ಲಿಂಗ್ ಫೆಡರೇಷನ್ ಆಹ್ವಾನ!

11:26 PM May 21, 2020 | Hari Prasad |

ನವದೆಹಲಿ: ಕೋವಿಡ್ ಕಾರಣದಿಂದ ದೇಶಾದ್ಯಂತ ವಿಧಿಸಲಾಗಿರುವ ಲಾಕ್ ಡೌನ್ ಪರಿಸ್ಥಿತಿ ವಲಸೆ ಕಾರ್ಮಿಕರು ಸೇರಿದಂತೆ ಹಲವರ ಪಾಲಿಗೆ ಕಠಿಣ ಪರಿಸ್ಥಿತಿಯನ್ನು ತಂದೊಡ್ಡಿದೆ.

Advertisement

ಉತ್ತಮ ಜೀವನ ರೂಪಿಸಿಕೊಳ್ಳಲು ಹಾಗೂ ಹಳ್ಳಿಗಳಲ್ಲಿ ಸರಿಯಾದ ಕೆಲಸ ಕಾರ್ಯಗಳಿಲ್ಲದೆ ಪಟ್ಟಣಕ್ಕೆ ವಲಸೆ ಬಂದಿದ್ದವರೆಲ್ಲಾ ಇದೀಗ ಲಾಕ್ ಡೌನ ಪರಿಸ್ಥಿತಿಯಿಂದ ನಲುಗಿ ಹೋಗಿದ್ದಾರೆ.

ಇತ್ತ ನಗರಗಳಲ್ಲಿ ಕೆಲಸ ಕಾರ್ಯಗಳಿಲ್ಲದೇ, ಅತ್ತ ತಮ್ಮ ಊರುಗಳಿಗೆ ತೆರಳಲು ಸಾದ್ಯವಾಗದೇ ಹೆಚ್ಚಿನವರು ಕಾಲ್ನಡಿಗೆಳಲ್ಲಿ ಇನ್ನು ಕೆಲವರು ಸೈಕಲ್ ಗಳಲ್ಲಿ ತಮ್ಮ ಊರು ಸೇರುತ್ತಿರುವಂತಹ ಘಟನೆಗಳು ಪ್ರತೀನಿತ್ಯವೆಂಬಂತೆ ವರದಿಯಾಗುತ್ತಿವೆ.

ಈ ನಡುವೆ ಕಳೆದ ಕೆಲವು ದಿನಗಳ ಹಿಂದೆ ತನ್ನ ಅಶಕ್ತ ತಂದೆಯನ್ನು ಹಿಂದೆ ಕೂರಿಸಿಕೊಂಡು 1200 ಕಿಲೋಮೀಟರ್ ದೂರ ಸೈಕಲ್ ತುಳಿಯುತ್ತಾ ತನ್ನೂರಿಗೆ ಸೇರಿಕೊಂಡಿದ್ದ ಜ್ಯೋತಿ ಕುಮಾರಿ ಎಂಬ ಯುವತಿ ಮಾದ್ಯಮಗಳಲ್ಲಿ ಭಾರೀ ಸುದ್ದಿ ಮಾಡಿದ್ದಳು.

ಗುರ್ಗಾಂವ್ ನಲ್ಲಿ ತನ್ನ ತಂದೆಯ ಜೊತೆಗಿದ್ದ ಜ್ಯೋತಿ ಕುಮಾರಿ ಲಾಕ್ ಡೌನ್ ಕಾರಣದಿಂದ ಸಂಕಷ್ಟಕ್ಕೊಳಗಾಗಿ ಬಿಹಾರದಲ್ಲಿರುವ ತನ್ನ ಸ್ವಂತ ಊರಿಗೆ ತೆರಳುವ ನಿರ್ಧಾರವನ್ನು ಮಾಡಿದ್ದಳು. ಅದೂ ಕೂಡ ಸೈಕಲ್ ಮೂಲಕವೇ ತನ್ನ ಪ್ರಯಾಣವನ್ನು ಆಕೆ ಪ್ರಾರಂಭಿಸಿದ್ದಳು.

Advertisement

ಹಾಗೂ 1200 ಕಿಲೋವೀಟರ್ ದೂರವನ್ನು ಕೇವಲ ಏಳು ದಿನಗಳಲ್ಲಿ ಕ್ರಮಿಸಿ ಅಚ್ಚರಿ ಮೂಡಿಸಿದ್ದಳು. ಜ್ಯೋತಿ ಕುಮಾರಿಯ ಈ ಪರಿಶ್ರಮಕ್ಕೆ ಸರಿಯಾದ ಪುರಸ್ಕಾರವೊಂದು ಆಕೆಯನ್ನು ಇದೀಗ ಅರಸಿ ಬಂದಿದೆ.

ಭಾರತೀಯ ಸೈಕ್ಲಿಂಗ್ ಫೆಡರೇಶನ್ ಇದೀಗ ಜ್ಯೋತಿ ಕುಮಾರಿಯನ್ನು ಮುಂದಿನ ತಿಂಗಳು ಅರ್ಹತಾ ಪರೀಕ್ಷೆಗೆ ಆಹ್ವಾನಿಸಿದೆ. ಒಂದು ವೇಳೆ ಜ್ಯೋತಿ ಕುಮಾರಿ ಈ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡರೆ ಆಕೆಯನ್ನು ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣ ಸಮುಚ್ಛಯದಲ್ಲಿರುವ ಸ್ಟೇಟ್ ಆಫ್ ದಿ ಆರ್ಟ್ ರಾಷ್ಟ್ರೀಯ ಸೈಕ್ಲಿಂಗ್ ಆಕಾಡೆಮಿಯಲ್ಲಿ ಟ್ರೈನಿಯಾಗಿ ಸೇರಿಸಿಕೊಳ್ಳಲಾಗುವುದು.

ಈ ವಿಚಾರವನ್ನು ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷರಾಗಿರುವ ಓಂಕಾರ್ ಸಿಂಗ್ ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಲಾಕ್ ಡೌನ್ ಪರಿಸ್ಥಿತಿ ದೇಶಕ್ಕೊಂದು ಅಪರೂಪದ ಸೈಕ್ಲಿಂಗ್ ಪ್ರತಿಭೆಯನ್ನು ಒದಗಿಸಿಕೊಟ್ಟಿದೆ.

ಜ್ಯೋತಿ ಕುಮಾರಿ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು ಲಾಕ್ ಡೌನ್ ಮುಕ್ತಾಯಗೊಂಡ ಬಳಿಕ ಆಕೆಯನ್ನು ನಾವು ದೆಹಲಿಗೆ ಕರೆಸಿಕೊಳ್ಳಲಿದ್ದೇವೆ. ಮತ್ತು ಇದಕ್ಕೆ ತಗಲುವ ಎಲ್ಲಾ ವೆಚ್ಚಗಳನ್ನು ಅಕಾಡೆಮಿಯೇ ಭರಿಸಲಿದೆ ಎಂದು ಸಿಂಗ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಸವಾಲನ್ನು ಎದುರಿಸಿ ಜ್ಯೋತಿ ಕುಮಾರಿ ಎಂಬ ಹೈಸ್ಕೂಲ್ ಬಾಲಕಿ ಮುಂಬರುವ ದಿನಗಳಲ್ಲಿ ಓರ್ವ ಪ್ರತಿಭಾವಂತೆ ಸೈಕಲ್ ಪಟುವಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಳೇ ಎಂಬುದನ್ನು ಕಾದು ನೋಡಬೇಕಾಗಿದೆ.

ಜ್ಯೋತಿ ಕುಮಾರಿಯ ತಂದೆ ಗುರ್ಗಾಂವ್ ನಲ್ಲಿ ಆಟೋ ರಿಕ್ಷಾ ಓಡಿಸುವ ಕೆಲಸವನ್ನು ಮಾಡುತ್ತಿದ್ದರು ಹಾಗೂ ಈತ ಗಾಯಗೊಂಡಿದ್ದ ಕಾರಣ ತಾನು ಓಡಿಸುತ್ತಿದ್ದ ಆಟೋ ರಿಕ್ಷಾವನ್ನು ಅದರ ಮಾಲಿಕರಿಗೆ ಒಪ್ಪಿಸಬೇಕಾದ ಸ್ಥಿತಿ ಉಂಟಾಗಿತ್ತು ಮತ್ತು ಇದರಿಂದಾಗಿ ಇವರ ಆದಾಯದ ಮೂಲ ನಿಂತುಹೋಗಿತ್ತು.

ತಮ್ಮ ಕೈಯಲ್ಲಿದ್ದ ಅಲ್ಪ ಸ್ವಲ್ಪ ಹಣದಿಂದಲೇ ಸೈಕಲ್ ಒಂದನ್ನು ಖರೀದಿಸಿ ಗಾಯಾಳು ತಂದೆಯೊಂದಿಗೆ ಮೇ 10ರಂದು ತನ್ನೂರಿಗೆ ಪ್ರಯಾಣ ಪ್ರಾರಂಭಿಸಿದ್ದ ಜ್ಯೋತಿ ಕುಮಾರಿ ಮೇ 16ರಂದು ತನ್ನ ಊರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next