ಲಾರ್ಡ್ಸ್: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಆ್ಯಶಸ್ ಟೆಸ್ಟ್ ಪಂದ್ಯದ ವೇಳೆ ಪ್ರತಿಭಟನಾಕಾರರು ಪಂದ್ಯಕ್ಕೆ ಅಡ್ಡಿ ಮಾಡಿದ ಘಟನೆ ನಡೆದಿದೆ. ಎರಡನೇ ಓವರ್ ಆರಂಭದ ವೇಳೆ ಪರಿಸರ ಪರ ಹೋರಾಟಗಾರರ ಗುಂಪು ಮೈದಾನಕ್ಕೆ ನುಗ್ಗಿದೆ.
ಜಸ್ಟ್ ಸ್ಟಾಪ್ ಆಯಿಲ್ ಸಂಘಟನೆಯ ಪ್ರತಿಭಟನಾಕಾರರಿಬ್ಬರು ಐತಿಹಾಸಿಕ ಲಾರ್ಡ್ಸ್ ಮೈದಾನಕ್ಕೆ ನುಗ್ಗಿ ಪಂದ್ಯಕ್ಕೆ ಅಡ್ಡಿಪಡಿಸಿದರು. ಅಲ್ಲದೆ ಆರೆಂಜ್ ಬಣ್ಣವನ್ನು ಎರಚಿದರು.
ಈ ವೇಳೆ ಇಂಗ್ಲೆಂಡ್ ವಿಕೆಟ್ ಕೀಪರ್ ಜಾನಿ ಬೆರಿಸ್ಟೋ ಪ್ರತಿಭಟನಾಕಾರರೊಬ್ಬರನ್ನು ಎತ್ತಿ ಹಿಡಿದು ಮೈದಾನದಿಂದ ಹೊರಗೆ ಕರೆದು ಹೋದರು. ಈ ವೇಳೆ ಜಾನಿ ಬೆರಿಸ್ಟೋ ಬಿಳಿ ಜೆರ್ಸಿಗೆ ಆರೆಂಜ್ ಬಣ್ಣ ಮೆತ್ತಿದ್ದು, ಅವರು ಬಟ್ಟೆ ಬದಲಾಯಿಸಿ ಮೈದಾನಕ್ಕೆ ಬಂದರು.
ಬ್ಯಾಟಿಂಗ್ ಆರಂಭಿಸಿದ ಡೇವಿಡ್ ವಾರ್ನರ್ ಅವರು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಜೊತೆಗೆ ಎರಡನೇ ಪ್ರತಿಭಟನಾಕಾರನನ್ನು ತಡೆದರು. ಆತ ನರ್ಸರಿ ಎಂಡ್ ನ ರನ್-ಅಪ್ ಬಳಿ ಫ್ಲೋರೊಸೆಂಟ್ ಪೌಡರ್ ಎಸೆದ. ಬಳಿಕ ಪಂದ್ಯ ಮತ್ತೆ ಆರಂಭವಾಯಿತು.
ಜಸ್ಟ್ ಸ್ಟಾಪ್ ಆಯಿಲ್ ಪ್ರತಿಭಟನಾಕಾರರು ಈ ವರ್ಷದ ಇಂಗ್ಲೆಂಡ್ ನಲ್ಲಿ ನಡೆದ ಹಲವು ಪ್ರಮುಖ ಕ್ರೀಡಾಕೂಟಗಳಲ್ಲಿ ಅಡ್ಡಿ ಪಡಿಸಿದ್ದರು. ಟ್ವಿಕನ್ಹ್ಯಾಮ್ ನಲ್ಲಿ ನಡೆದ ರಗ್ಬಿ ಪ್ರೀಮಿಯರ್ ಶಿಪ್ ಫೈನಲ್ ಪಂದ್ಯದ ವೇಳೆಯೂ ಇವರು ಮೈದಾನಕ್ಕೆ ನುಗ್ಗಿದ್ದರು.