Advertisement

ಜಸ್ಟ್‌ ಪಾಸ್‌ ಆಗುವವರ ಕಥೆ

12:30 AM Jan 18, 2019 | Team Udayavani |

ಪರೀಕ್ಷೆಯಲ್ಲಿ ಅನುತ್ತಿರ್ಣರಾದ ವಿದ್ಯಾರ್ಥಿಗಳು ಖನ್ನತೆಗೆ ಒಳಗಾಗುವುದು, ಆತ್ಮಹತ್ಯೆಗೆ ಮುಂದಾಗುವುದು, ಇಂತಹ ಸುದ್ದಿಗಳನ್ನು ಆಗಾಗ್ಗೆ  ಪ್ರತಿಕೆಗಳಲ್ಲಿ, ಮಾಧ್ಯಮಗಳಲ್ಲಿ ನೋಡಿರುತ್ತೀರಿ. ಪ್ರತಿಬಾರಿ ಶೈಕ್ಷಣಿಕ ವರ್ಷಾಂತ್ಯಕ್ಕೆ, ಫ‌ಲಿತಾಂಶಗಳು ಪ್ರಕಟವಾಗುವ ವೇಳೆಗೆ ಇಂತಹ ಸುದ್ದಿಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿರುತ್ತವೆ. ಈ ಬಗ್ಗೆ ಸರ್ಕಾರ, ಸಂಘ-ಸಂಸ್ಥೆಗಳು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದರೂ, ಆತ್ಮಹತ್ಯೆ ಮಾಡಿಕೊಳ್ಳುವ, ಖನ್ನತೆಗೆ ಒಳಗಾಗುವ  ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಈಗ ಇದೇ ವಿಷಯವನ್ನು ಇಟ್ಟುಕೊಂಡು ಇಲ್ಲೊಂದು ಸಿನಿಮಾಸಕ್ತರ ತಂಡ, ಇದನ್ನು ಸಿನಿಮಾವಾಗಿ ತೆರೆಮೇಲೆ ತರುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಸಪ್ಲೆಮೆಂಟರಿ’.

Advertisement

ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವವಿರುವ ತುಮಕೂರು ವಿಶ್ವವಿದ್ಯಾಲಯದ ಪ್ರೊಫೆಸರ್‌, ಡಾ. ದೇವರಾಜ್‌.ಎಸ್‌, “ಸಪ್ಲೆಮೆಂಟರಿ’ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿದ್ದು ಅವುಗಳಿಗೂ ಸಾಹಿತ್ಯ ಮತ್ತು ಸಂಗೀತವನ್ನು ಡಾ. ದೇವರಾಜ್‌ ಅವರೇ ನೀಡಿದ್ದಾರೆ. 

ಇನ್ನು “ಸಪ್ಲೆಮೆಂಟರಿ’ ಚಿತ್ರಕ್ಕೆ “ಜಸ್ಟ್‌ ಪಾಸ್‌ ಮಗಾ’ ಎಂದು ಅಡಿಬರಹವಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಡಾ. ದೇವರಾಜ್‌, “ಇದೊಂದು ಶಿಕ್ಷಣ ವಿಷಯಕ್ಕೆ ಸಂಬಂಧಿಸಿದ ಚಿತ್ರ. ಇಂದಿನ ಗುರು-ಶಿಷ್ಯರ ಸಂಬಂಧ, ಶಿಕ್ಷಣದ ವ್ಯವಸ್ಥೆ ಮೊದಲಾದ ಸಂಗತಿಗಳು ಚಿತ್ರದಲ್ಲಿವೆ. ಪರೀಕ್ಷೆಯಲ್ಲಿ ಅನುತ್ತಿìಣರಾದಾಗ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ ಎಂಬ ಸಂದೇಶ ಕೂಡ ಚಿತ್ರದಲ್ಲಿದೆ. ಈ ಚಿತ್ರದ ಕಥೆಯಲ್ಲಿ ಪರೀಕ್ಷೆ ಅಥವಾ ಬದುಕು ಯಾವುದು ಎಂಬುದನ್ನು ಹೇಳಲಾಗಿದೆ. ಪ್ರತಿಯೊಬ್ಬರ ಜೀವನದಲ್ಲೂ ಎರಡು ರೀತಿಯ ಪರೀಕ್ಷೆಗಳು ಬರುತ್ತವೆ. ಮುಖ್ಯ ಪರೀಕ್ಷೆಯಲ್ಲಿ ಅನುತ್ತಿರ್ಣವಾದರೆ, ಮರಳಿ ಯತ್ನವ ಮಾಡು ಎನ್ನುವ ಹಾಗೆ ಸಪ್ಲಿಮೆಂಟ್‌ನಲ್ಲಿ ಪಾಸ್‌ ಆಗಬಹುದು. ಅದರಂತೆ ಬದುಕಿನಲ್ಲೂ ಸೋಲುಂಡರೆ ಎದೆಗುಂದಬಾರದು ಎಂಬ ಹಲವು ಅಂಶಗಳು ಚಿತ್ರದಲ್ಲಿವೆ. ಮನರಂಜನೆಯ ಮೂಲಕ ಒಂದೊಳ್ಳೆ ಸಂದೇಶವನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ’ ಎನ್ನುತ್ತಾರೆ. 

ಇನ್ನು ಈ ಚಿತ್ರದಲ್ಲಿ ಖುಷ್‌ ನಾಯಕನಾಗಿ, ಶ್ರದ್ಧಾ ಭಟ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಲೇಜಿನಲ್ಲಿದ್ದಾಗ ಗುರುಗಳಿಂದ ಬುದ್ದಿವಾದ ಹೇಳಿಕೊಂಡು, ಮುಂದೆ ಗುರುಗಳು ಆತ್ಮಹತ್ಯೆ ಮಾಡಿಕೊಳ್ಳುವಾಗ ಅವರಿಗೆ ಧೈರ್ಯ ತುಂಬುವ ಎರಡು ಶೇಡ್‌ನ‌ ಪಾತ್ರದಲ್ಲಿ ನಾಯಕ ಖುಷ್‌ ಕಾಣಿಸಿಕೊಂಡರೆ, ಕಾಲೇಜು ಹುಡುಗಿಯಿಂದ ಮಧ್ಯ ವಯಸ್ಕ ಮಹಿಳೆಯವರೆಗೆ ಶ್ರದ್ಧಾ ಭಟ್‌ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪ್ರೊಫೆಸರ್‌ ಪಾತ್ರದಲ್ಲಿ  ನಿರ್ಮಾಪಕ  ಮಹೇಂದ್ರ ಮುನೊಟ್‌ ಅಭಿನಯಿಸಿದ್ದಾರೆ. ಚಿತ್ರಕ್ಕೆ ಶಿವು ತುಮಕೂರು ಛಾಯಾಗ್ರಹಣವಿದೆ. ಚಿತ್ರವು ಮುಂಬರುವ ಜನವರಿ 25ರಂದು ತೆರೆ ಕಾಣುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next