ನವದೆಹಲಿ: ರೈತರ ದೀರ್ಘಕಾಲದ ಪ್ರತಿಭಟನೆಯ ನಂತರ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ರೀತಿಯಲ್ಲೇ ಸೇನಾ ನೇಮಕಾತಿಯ ಅಗ್ನಿಪಥ್ ಯೋಜನೆಯನ್ನೂ ಹಿಂಪಡೆಯಲಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ (ಜೂನ್ 18) ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಉಪಕರಣ ಖರೀದಿಗೆ 5 ಲಕ್ಷ ರೂಗಳ ಸಹಾಯಧನ
ಕಳೆದ ವರ್ಷ ವಿವಾದಿತ ಮೂರು ಕೃಷಿ ಕಾಯ್ದೆಯನ್ನು ಹಿಂಪಡೆದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರೈತರಲ್ಲಿ ಕ್ಷಮೆಯಾಚಿಸಿದ್ದು, ಇದೀಗ ಪ್ರಧಾನಿಯವರು ದೇಶದ ಯುವಕರಲ್ಲಿ ಎರಡನೇ ಬಾರಿ ಕ್ಷಮೆಯಾಚಿಸಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಎಂಟು ವರ್ಷಗಳಿಂದ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರ ದೇಶದ ಯೋಧರ ಮತ್ತು ರೈತರ ಮೌಲ್ಯಗಳಿಗೆ ಅಪಮಾನ ಮಾಡಿದೆ. ವಿವಾದಿತ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಈ ಹಿಂದೆಯೂ ಹೇಳಿದ್ದೆ. ಅದೇ ರೀತಿ ಮಾಫಿವೀರ್ ಆಗುವ ಮೂಲಕ ದೇಶದ ಯುವಕರ ಬೇಡಿಕೆಯನ್ನು ಒಪ್ಪಿಕೊಂಡು ಅಗ್ನಿಪಥ್ ಯೋಜನೆಯನ್ನೂ ಹಿಂಪಡೆಯಬೇಕಾಗುತ್ತದೆ ಎಂದು ರಾಹುಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಅಗ್ನಿಪಥ್ ಯೋಜನೆಯಡಿ ಸೇನೆಗೆ ನೇಮಕವಾಗುವವರನ್ನು ಅಗ್ನಿವೀರರು ಎಂದು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ನಂತರ ರಾಹುಲ್ ಮಾಫಿವೀರ್ ಶಬ್ದವನ್ನು ಬಳಕೆ ಮಾಡಿರುವುದಾಗಿ ವರದಿ ತಿಳಿಸಿದೆ.
ಕೇಂದ್ರ ಸರ್ಕಾರ ಘೋಷಿಸಿರುವ ನೂತನ ಅಗ್ನಿಪಥ್ ಯೋಜನೆಗೆ ಬಿಹಾರ, ಉತ್ತರಪ್ರದೇಶ, ಹರ್ಯಾಣ, ತೆಲಂಗಾಣ ಸೇರಿದಂತೆ ದೇಶದ ಹಲವೆಡೆ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ರಾಹುಲ್ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ವಿವರಿಸಿದೆ.