“ಈಸಿನಿಮಾಗೆ ಇಂಥಾ ಪ್ರಶ್ನೆಗಳು ಬರಲಿ ಅಂತಾನೇ ಈ ಟೈಟಲ್ ಇಟ್ಟಿದ್ದೀವಿ ಸಾರ್…’
ಹೀಗಂತ, ಅದೇನೋ ಸಾಧನೆ ಮಾಡಿದಂಗೆ ಗಟ್ಟಿಯಾಗಿ ಹೇಳಿಕೊಂಡರು ಹೀರೋ ಕಮ್ ಕಥೆಗಾರ ಜಗದೀಶ್ ಪವಾರ್. ಅವರು ಹೇಳಿಕೊಂಡಿದ್ದು ಚೊಚ್ಚಲ ನಾಯಕತ್ವದ “ಥರ್ಡ್ ಕ್ಲಾಸ್’ ಚಿತ್ರದ ಬಗ್ಗೆ. ಎಲ್ಲಾ ಸರಿ, ನಿಮ್ಮ ಸಿನಿಮಾದ ಈ ಶೀರ್ಷಿಕೆ ಎಷ್ಟರಮಟ್ಟಿಗೆ ಸರಿ? ಎಂಬ ಪತ್ರಕರ್ತರ ಪ್ರಶ್ನೆಗೆ, ಮೇಲಿನಂತೆ ಉತ್ತರಿಸಿದರು ಜಗದೀಶ್ ಪವಾರ್.
“ಜನರಿಗೆ ನಮ್ಮ ಈ ಸಿನಿಮಾ ಆರಂಭದಲ್ಲೇ ಸುದ್ದಿಯಾಗಬೇಕು, ಎಲ್ಲರೂ ಆ ಸಿನಿಮಾ ಬಗ್ಗೆ ಮಾತಾಡುವಂತಾಗಬೇಕಾದರೆ, ವಿಶೇಷತೆಗಳಿರಬೇಕು. ಹಾಗಾಗಿ ಇಲ್ಲಿ “ಥರ್ಡ್ ಕ್ಲಾಸ್’ ಅಂತ ಟೈಟಲ್ ಇಟ್ಟಿದ್ದೇವೆ. “ಹಣೆ ಬರಹಕ್ಕೆ ಹೊಣೆ’ ಎಂಬ ಅಡಿಬರಹವೂ
ಇದೆ. ಆ ಶೀರ್ಷಿಕೆ ಇಟ್ಟಿದ್ದಕ್ಕೇ ಇಷ್ಟೊಂದು ಪ್ರಶ್ನೆಗಳು ಬರುತ್ತಿವೆ. ಇಲ್ಲದಿದ್ದರೆ ಯಾರೂ ಕೇಳುತ್ತಿರಲಿಲ್ಲ’ ಅಂತ ಮತ್ತೆ ಗೆದ್ದವರಂತೆ ಮಾತು ಹರಿಬಿಟ್ಟರು. ಎಲ್ಲಾ ಸರಿ, “ಥರ್ಡ್ ಕ್ಲಾಸ್’ ಶೀರ್ಷಿಕೆ ನೋಡಿ ಫ್ಯಾಮಿಲಿ ಆಡಿಯನ್ಸ್ ಬರ್ತಾರಾ? ಎಂಬ ಪ್ರಶ್ನೆಗೆ, “ನೋಡೋಣ ಇಂಥದ್ದೊಂದು ಟೈಟಲ್ ಇಟ್ಟು ರಿಸ್ಕ್ ಮಾಡ್ಕೊಂಡಿದ್ದೇವೆ ಅಂತನಿಸಿಲ್ಲ. ಇಲ್ಲಿ ಟೈಟಲ್ ಮಾತ್ರ ಹೀಗಿದೆ. ಒಳಗೆ ಒಂದೊಳ್ಳೆಯ ಸಂದೇಶವಿದೆ. ಅದು ಸಿನಿಮಾ ನೋಡಿದ ಮೇಲೆ ಶೀರ್ಷಿಕೆ ಇಟ್ಟಿದ್ದರ ಅರ್ಥ ತಿಳಿಯುತ್ತೆ’ ಅಂತ ಸುಮ್ಮನಾದರು.
ಜಗದೀಶ್ ಪವಾರ್ ಇಲ್ಲಿ ಅಪ್ಪ, ಅಮ್ಮನ ಪ್ರೀತಿ ಕಾಣದ ಅನಾಥ ಮತ್ತು ಅವಿದ್ಯಾವಂತನಾಗಿ ಕಾಣಿಸಿಕೊಂಡಿದ್ದಾರಂತೆ. ಒಂದು ಕಾರು ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ನಾಯಕ, ಫಸ್ಟ್‌ಕ್ಲಾಸ್ ಹುಡುಗಿ ಜತೆ ಪ್ರೀತಿ ಚಿಗುರಿ ಆಮೇಲೆ ಏನಾಗುತ್ತೆ ಅನ್ನೋದನ್ನು ಇಲ್ಲಿ ಹೇಳಲಾಗಿದೆಯಂತೆ. ಶೀರ್ಷಿಕೆ ಹೀಗಿದ್ದರೂ, ಸಿನಿಮಾದೊಳಗಿರುವ ಅಂಶಗಳು ಫಸ್ಟ್‌ಕ್ಲಾಸ್ ಎಂಬುದು ಅವರ ಮಾತು. ಅಶೋಕ್ ದೇವ್ ಈ ಚಿತ್ರದ ನಿರ್ದೇಶಕರು. ಗೆಳೆಯರೊಬ್ಬರಿಂದ ಈ ಚಿತ್ರ ನಿರ್ದೇಶಿಸುವ ಅವಕಾಶ ಅವರಿಗೆ ಸಿಕ್ಕಿತಂತೆ. “ಥರ್ಡ್ ಕ್ಲಾಸ್’ ಶೀರ್ಷಿಕೆ ಯಾಕೆ ಇಟ್ಟಿದ್ದೇವೆ ಅನ್ನುವುದಕ್ಕೆ ಸಿನಿಮಾದಲ್ಲಿ ಉತ್ತರವಿದೆ. ಇಲ್ಲಿ ಪ್ರೀತಿ, ದ್ವೇಷ, ಸೆಂಟಿಮೆಂಟ್ ಜತೆಗೆ ಒಂದು ಸಂದೇಶವೂ ಇದೆ. ಇಲ್ಲಿ ಇಬ್ಬರು ಹೀರೋಗಳಿದ್ದಾರೆ. ಅವರಿಗಿಬ್ಬರು ನಾಯಕಿಯರಿದ್ದಾರೆ. ಸದ್ಯಕ್ಕೆ ಚಿತ್ರದ ಎರಡು ಹಾಡುಗಳು ಬಾಕಿ ಇದೆ ಎಂಬುದು ನಿರ್ದೇಶಕರ ಮಾತು. ನಿರ್ಮಾಪಕ ಶಶಿ ನಾಯ್ಕ ಅವರಿಗೆ ಇದು ಮೊದಲ ಅನುಭವ. ಅವರ ಜತೆಗೆ ಚಂದ್ರಕಲಾ ಬಾಯಿ ಕೂಡ ನಿರ್ಮಾನದಲ್ಲಿಸಾಥ್ ಕೊಟ್ಟಿದ್ದಾರೆ. ರೂಪಿಕಾ ಇಲ್ಲಿ ಗೃಹ ಮಂತ್ರಿ ಮಗಳಾಗಿ ನಟಿಸಿದ್ದಾರೆ. ಮೊದಲು ಅವರಿಗೂ ಈ ಶೀರ್ಷಿಕೆ ಕೇಳಿದಾಗ, ಯಾಕೆ ಇಂಥಾ ಶೀರ್ಷಿಕೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿದರಂತೆ. ಕೊನೆಗೆ ಕಥೆ ಕೇಳಿದಾಗ, ಅದೇ ಸೂಕ್ತವೆನಿಸಿತಂತೆ. ಫಸ್ಟ್ ಕ್ಲಾಸ್, ಮಿಡ್ಲ್ ಕ್ಲಾಸ್ ಮತ್ತು ಥರ್ಡ್ ಕ್ಲಾಸ್ ಜೀವನ ಕುರಿತ ಕಥೆ ಇಲ್ಲಿದೆ. ಸಿನಿಮಾ ನೋಡಿದವರಿಗೆ ಮಾತ್ರ ಈ ಚಿತ್ರದ ಶೀರ್ಷಿಕೆ ಇಟ್ಟಿದ್ದೇಕೆ ಅನ್ನೋದು ಗೊತ್ತಾಗುತ್ತೆ ಅಂದರು ರೂಪಿಕಾ. ಸಂಗೀತಾ ಅವರಿಲ್ಲಿ ನಾಯಕಿಯ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲರಂತೆ ಅವರೂ ಸಹ ಈ ಶೀರ್ಷಿಕೆ ಬಗ್ಗೆ ಪ್ರಶ್ನಿಸಿದ್ದುಂಟಂತೆ. ಸಿನಿಮಾ ಥರ್ಡ್ ಕ್ಲಾಸ್ ಎಂದಿದ್ದರೂ, ಮಾಡಿರೋರೆಲ್ಲರೂ ಫಸ್ಟ್‌ಕ್ಲಾಸ್ ಮಂದಿ ಅಂದರು ಅವರು.
ಹಾಸ್ಯ ನಟ ಪವನ್‌ಕುಮಾರ್ ಯಥಾ ಪ್ರಕಾರ ಇಲ್ಲಿ ನಗಿಸುವ ಕಾರ್ಯ ಮಾಡಿದ್ದಾರಂತೆ. ಅವರಿಗೆ ಚಿತ್ರದ “ಗೆಧ್ದೋನ್ ಕಣ್‌ಗೆ ಸೋತೋನ್ ಥರ್ಡ್ ಕ್ಲಾಸ್, ಸೋತೋನ್ ಕಣ್‌ಗೆ ಗೆಧ್ದೋನ್ ಥರ್ಡ್ ಕ್ಲಾಸ್, ಶ್ರೀಮಂತನ ಕಣ್‌ಗೆ ಬಡವ ಥರ್ಡ್‌ಕ್ಲಾಸ್, ಬಡವನ ಕಣ್‌ಗೆ ಶ್ರೀಮಂತ ಥರ್ಡ್ ಕ್ಲಾಸ್’ ಈ ಹಾಡು ಇಷ್ಟ ಅಂತ ಹೇಳುವುದನ್ನು ಮರೆಯಲಿಲ್ಲ ಅವರು. ಉಳಿದಂತೆ ರಾಜ್ ಉದಯ್, ಮಾಸ್‌ಮಾದ ಇತರರು ಇದ್ದರು.