Advertisement

ಲಸಿಕೆ ಪಡೆಯಲು ಇಂದೇ ಕಡೇ ಅವಕಾಶ

03:29 AM Feb 25, 2021 | Team Udayavani |

ಜ.16ರಿಂದ ಆರಂಭವಾಗಿರುವ ಲಸಿಕಾ ಅಭಿಯಾನದ ಮೊದಲ ಹಂತಕ್ಕೆ ಗುರುವಾರ ಕಡೇ ದಿನ. ಇದುವರೆಗೆ ಲಸಿಕೆ ಪಡೆಯದೇ ಇರುವ ಆರೋಗ್ಯ ಕಾರ್ಯಕರ್ತರು ಬಂದು ಲಸಿಕೆ ಪಡೆಯಬಹುದು.

Advertisement

ಕರ್ನಾಟಕದಲ್ಲಿ ಒಟ್ಟು ಎರಡೂವರೆ ಲಕ್ಷಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರು ನಾನಾ ಕಾರಣಗಳಿಂದಾಗಿ ಲಸಿಕೆ ಪಡೆದಿಲ್ಲ. ಹೀಗಾಗಿ ಗುರುವಾರವಾದರೂ ಬಂದು ಪಡೆಯಬಹುದು ಎಂದು ಕಡೆಯ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ತಗ್ಗಿರಬಹುದು, ಆದರೆ ನಿರ್ಮೂಲನೆಯಾಗಿಲ್ಲ. ಇನ್ನೊಂದೆಡೆ ನೆರೆಯ ರಾಜ್ಯದಲ್ಲಿ ಎರಡನೇ ಅಲೆ ಉಂಟಾಗಿದ್ದು, ರಾಜ್ಯದಲ್ಲಿಯೂ ಅದರ ಭೀತಿ ಹೆಚ್ಚಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಕಳೆದ ವರ್ಷ (2020) ಜೂನ್‌-ಅಕ್ಟೋಬರ್‌ನಂತೆ ಸೋಂಕು ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಹೆಚ್ಚಾದರೆ ಸೋಂಕಿತರಿಗೆ ಚಿಕಿತ್ಸೆ ಮತ್ತು ಆರೈಕೆಯನ್ನು ಆರೋಗ್ಯ ಕಾರ್ಯಕರ್ತರೇ ನಿಗಾವಹಿಸಬೇಕಿದೆ. ಸೋಂಕಿನ ಹತೋಟಿಗೆ ಆಸ್ಪತ್ರೆ ಹೊರಗೂ ಶ್ರಮಿಸಬೇಕಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೂ ಲಸಿಕೆ ವಿತರಿಸುವ ಕಾರ್ಯವನ್ನು ಆರೋಗ್ಯ ಕಾರ್ಯಕರ್ತರೇ ಮಾಡಬೇಕಿದೆ. ಇಷ್ಟೆಲ್ಲ ಜವಾಬ್ದಾರಿ ಹೊಂದಿರುವವರ ಪೈಕಿ ಶೇ.40ರಷ್ಟು ಮಂದಿ ಲಸಿಕೆಯಿಂದ ದೂರ ಉಳಿ ದಿರುವುದು ಆತಂಕಕ್ಕೆ ಕಾರಣವಾಗಿದೆ.

ಹೋರಾಟಕ್ಕೆ ಸಿದ್ಧರಾಗಿ: ತಜ್ಞರ ಸಲಹೆ
ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ಅತ್ಯಂತ ಶಕ್ತಿಶಾಲಿ ಆಯುಧ. ಲಸಿಕೆ ಅತ್ಯಂತ ಸುರಕ್ಷವಾಗಿದೆ. ಇಂದಿಗೂ ಲಸಿಕೆ ಪಡೆಯದೇ ದೂರ ಉಳಿದ ಆರೋಗ್ಯ ಕಾರ್ಯಕರ್ತರು ಕೊನೆಯ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ಮುಂದಿನ ಕೊರೊನಾ ಹೋರಾಟಕ್ಕೆ ಸಿದ್ಧರಾಗಬೇಕು. ರೋಗಿಗಳ ಚಿಕಿತ್ಸೆ ಸೇರಿದಂತೆ ಆರೋಗ್ಯ ಚಟುವಟಿಕೆಯಲ್ಲಿರುವವರಿಗೆ ಸೋಂಕು ತಗಲುವ ಸಾಧ್ಯತೆ ಮೂರುಪಟ್ಟು ಹೆಚ್ಚಿರುತ್ತವೆ. ಹೀಗಾಗಿ ಲಸಿಕೆ ಪಡೆದು ತಮ್ಮನ್ನು ರಕ್ಷಿಸಿಕೊಳ್ಳು ವುದರೊಂದಿಗೆ ತಮ್ಮ ಕುಟುಂಬಸ್ಥರು, ಸ್ನೇಹಿತರನ್ನು ರಕ್ಷಿಸಿಕೊಳ್ಳಬೇಕು ಎಂದು ಲಸಿಕೆ ಪಡೆದಿರುವ ರಾಜ್ಯದ ಪ್ರಮುಖ ಆರೋಗ್ಯ ತಜ್ಞರಾದ ಕೊರೊನಾ ನಿಯಂತ್ರಣ ಸರಕಾರ ಸಲಹಾ ಸಮಿತಿ ಅಧ್ಯಕ್ಷ ಎಂ.ಕೆ.ಸುದರ್ಶನ್‌, ಮಣಿಪಾಲ್‌ ಆಸ್ಪತ್ರೆಗಳ ಅಧ್ಯಕ್ಷ ಡಾ| ಸುದರ್ಶನ್‌ ಬಲ್ಲಾಳ್‌, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ| ಸಿ.ಎನ್‌.ಮಂಜುನಾಥ್‌ ಸಲಹೆ ನೀಡಿದ್ದಾರೆ.

20 ಮಂದಿಗೆ ಅಡ್ಡ ಪರಿಣಾಮ
ರಾಜ್ಯದಲ್ಲಿ ಈ ವರೆಗೂ ಕೊರೊನಾ ಲಸಿಕೆ ಪಡೆದವರ ಪೈಕಿ 20 ಮಂದಿಗೆ ಮಾತ್ರ ಅಡ್ಡ ಪರಿಣಾಮ ಕಾಣಿಸಿ ಕೊಂಡಿದೆ. ಮೂರು ಮಂದಿ ಸಾವಿಗೀಡಾಗಿದ್ದಾರೆ. ಈ ಕುರಿತು ವೈದ್ಯಕೀಯ ತನಿಖೆ ನಡೆಸಿದ್ದು ಲಸಿಕೆಯಿಂದ ಸಾವಾಗಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

1.72 ಲಕ್ಷ ಮಂದಿ ಎರಡನೇ ಡೋಸ್‌
ಜ. 16ರಿಂದ ಲಸಿಕೆ ವಿತರಿಸುತ್ತಿದ್ದು, ಮೊದಲ ಡೋಸ್‌ ಪಡೆದ 28 ದಿನಗಳನ್ನು ಪೂರೈಸಿದವರಿಗೆ ಎರಡನೇ ಡೋಸ್‌ ನೀಡಲಾಗುತ್ತಿದೆ. ಎರಡನೇ ಡೋಸ್‌ ಪಡೆದು 15 ದಿನಗಳ ಅನಂತರ ರೋಗ ಪ್ರತಿಕಾಯಗಳು ಉತ್ಪತ್ತಿ ಯಾಗುತ್ತವೆ. ರಾಜ್ಯದಲ್ಲಿ ಫೆ.15ರಿಂದ ಎರಡನೇ ಡೋಸ್‌ ನೀಡಲಾಗುತ್ತಿದ್ದು, 1.72 ಲಕ್ಷ ಮಂದಿ ಪಡೆದು ಸಂಪೂರ್ಣ ಲಸಿಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಬರುತ್ತಿವೆ ಇನ್ನು 5 ಲಕ್ಷ ಡೋಸ್‌ ಕೊರೊನಾ ಲಸಿಕೆ
ಸದ್ಯ ರಾಜ್ಯದಲ್ಲಿ 15.5 ಲಕ್ಷ ಡೋಸ್‌ ಲಸಿಕೆ ಇದ್ದು, ಈವರೆಗೂ ಆರೋಗ್ಯ ಮತ್ತು ಮುಂಚೂಣಿ ಕಾರ್ಯ ಕರ್ತರಿಗೆ 7.5 ಲಕ್ಷ ಡೋಸ್‌ ಲಸಿಕೆ ಹಾಕಲಾಗಿದೆ. 40 ಸಾವಿರ ಡೋಸ್‌ (ಶೇ.6 ರಷ್ಟು) ವ್ಯರ್ಥವಾಗಿದೆ. ಬಾಕಿ ಎಂಟು ಲಕ್ಷ ಡೋಸ್‌ ಲಸಿಕೆಯು ಪ್ರಾದೇಶಿಕ ಮತ್ತು ಜಿಲ್ಲಾ ಶೀತಲೀಕರಣ ಉಗ್ರಾಣಗಳಲ್ಲಿ ಶೇಖರಿಸಲಾಗಿದೆ. ಇನ್ನು ಸಾರ್ವಜನಿಕರಿಗೆ ಲಸಿಕೆ ನೀಡಿಕೆ
ಆರಂಭವಾಗುತ್ತಿರುವ ಹಿನ್ನೆಲೆ ಕೇಂದ್ರವು 5.1 ಲಕ್ಷ ಡೋಸ್‌ ಕೊವಿಶೀಲ್ಡ್‌ ಲಸಿಕೆಯನ್ನು ಶೀಘ್ರದಲ್ಲಿಯೇ ಕಳುಹಿಸಲಿಕೊಡಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಲಸಿಕೆಗೂ ಸಾವಿಗೂ ಸಂಬಂಧವಿಲ್ಲ
ಇಡೀ ದೇಶದಲ್ಲಿ ಲಸಿಕೆ ಪಡೆದ ಸಂಬಂಧ ಯಾರೊಬ್ಬರೂ ಮೃತಪಟ್ಟಿಲ್ಲ ಎಂದು ಸಮಿತಿಯೊಂದು ಸ್ಪಷ್ಟಪಡಿಸಿದೆ. ಇದುವರೆಗೆ ಲಸಿಕೆ ಪಡೆದವರಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 12 ಕೇಸುಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಆದರೆ ಇದರಲ್ಲಿ ಯಾರೊಬ್ಬರೂ ಲಸಿಕೆ ಪಡೆದ ಕಾರಣಕ್ಕೆ ಮೃತರಾಗಿಲ್ಲ ಎಂದು ಈ ಸಮಿತಿ ಸ್ಪಷ್ಟವಾಗಿ ಹೇಳಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಹೈಪರ್‌ ಟೆನ್ಶನ್‌, ಮಧುಮೇಹ ಹೊಂದಿದ್ದಾರೆ. ಒಂದು ಪ್ರಕರಣದಲ್ಲಿ ಹೃದಯ ಸಮಸ್ಯೆ ಇದೆ. ಏಮ್ಸ್‌ನ ವೈದ್ಯರೊಬ್ಬರ ಸಾವಿಗೂ ಅವರ ನ್ಯೂರೋಲಾಜಿಕಲ್‌ ಸಮಸ್ಯೆಯೇ ಕಾರಣವಾಗಿದೆ ಎಂದೂ ಹೇಳಿದೆ.

ದೇಶಾದ್ಯಂತ ಶೇ.42ರಷ್ಟು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ
ದೇಶದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಸೇರಿ 1.23 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಇದು ಬುಧವಾರ ರಾತ್ರಿವರೆಗಿನ ಅಂಕಿ ಅಂಶ. ಇದರಲ್ಲಿ 1.08 ಕೋಟಿ ಮಂದಿಗೆ ಮೊದಲನೇ ಡೋಸ್‌ ನೀಡಲಾಗಿದ್ದರೆ, 14.81 ಲಕ್ಷ ಮಂದಿಗೆ ಎರಡನೇ ಡೋಸ್‌ ನೀಡಲಾಗಿದೆ.

ಅಂದರೆ, ಈಗಾಗಲೇ ನೋಂದಣಿಯಾಗಿರುವ ಶೇ.42ರಷ್ಟು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಒಟ್ಟು ಒಂಬತ್ತು ರಾಜ್ಯಗಳು ಶೇ.60ಕ್ಕಿಂತ ಹೆಚ್ಚು ಮಂದಿಗೆ ಲಸಿಕೆ ನೀಡಿವೆ.

ಇನ್ನು ಶೇ.62ರಷ್ಟು ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ. ಒಂದು ತಿಂಗಳ ಹಿಂದೆಯೇ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಕೆಲಸ ಶುರುವಾಗಿತ್ತು. ಅಂದರೆ ಇದುವರೆಗೆ 64.7 ಲಕ್ಷ ಆರೋಗ್ಯ ಕಾರ್ಯಕರ್ತರು ಮತ್ತು 41.1 ಲಕ್ಷ ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ. ಇದರಲ್ಲಿ 13.02 ಲಕ್ಷ ಮಂದಿ ಆರೋಗ್ಯ ಕಾರ್ಯಕರ್ತರು ಎರಡನೇ ಡೋಸ್‌ ಕೂಡ ಪಡೆದಿದ್ದಾರೆ.

ಕರ್ನಾಟಕದಲ್ಲಿ 7.55 ಲಕ್ಷ ಮಂದಿಗೆ ಲಸಿಕೆ : ಜ.16ರಂದು ಲಸಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇವರೆಗೆ ಮೊದಲ ಮತ್ತು ಎರಡನೇ ಡೋಸ್‌ ಸೇರಿ 7.7 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ 5.81 ಲಕ್ಷ ಮಂದಿಗೆ ಮೊದಲ ಡೋಸ್‌ ಹಾಗೂ 1.72 ಲಕ್ಷ ಮಂದಿಗೆ ಎರಡನೇ ಡೋಸ್‌ ನೀಡಲಾಗಿದೆ.

ನಾಲ್ಕನೇ ಸ್ಥಾನದಲ್ಲಿ ಭಾರತ: ಅತ್ತ ಜಗತ್ತಿನಾದ್ಯಂತವೂ ಕೊರೊನಾ ಲಸಿಕಾ ಪ್ರಕ್ರಿಯೆ ವೇಗವಾಗಿ ಸಾಗುತ್ತಿದೆ. ಸದ್ಯ ಅತೀಹೆಚ್ಚು ಲಸಿಕೆ ನೀಡಿದ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಆದರೆ ಪ್ರತೀ 100 ಮಂದಿಗೆ ಸುಮಾರು ಒಬ್ಬರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಅದೇ ಅಮೆರಿಕದಲ್ಲಿ ಪ್ರತೀ ನೂರು ಮಂದಿಗೆ 19, ಚೀನದಲ್ಲಿ ಇಬ್ಬರಿಗೆ, ಇಂಗ್ಲೆಂಡ್‌ ನಲ್ಲಿ 26 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಇಸ್ರೇಲ್‌ನಲ್ಲಿ ಪ್ರತೀ 100 ಮಂದಿಗೆ 81 ಮಂದಿಗೆ ಲಸಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next