ಕೋಲ್ಕತ : ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗಿನ ಭೇಟಿಯ ಬಳಿಕ ಮುಷ್ಕರ ನಿರತ ಪಶ್ಚಿಮ ಬಂಗಾಲದ ಜೂನಿಯರ್ ವೈದ್ಯರು ಒಂದು ವಾರದಿಂದ ನಡೆಸುತ್ತಿದ್ದ ಮುಷ್ಕರವನ್ನು ಹಿಂಪಡೆದರು.
ರಾಜ್ಯದಲ್ಲಿನ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸುರಕ್ಷೆ ಮತ್ತು ಭದ್ರತೆಗಾಗಿ ಓರ್ವ ನೋಡಾಲ್ ಆಫೀಸರ್ ನೇಮಿಸುವಂತೆ ಸಿಎಂ ಮಮತಾ ಬ್ಯಾನರ್ಜಿ ಅವರು ನಿರ್ದೇಶ ನೀಡಿದರು.
ವೈದ್ಯರ ಮುಷ್ಕರ ಹಿಂದೆಗೆತದ ಔಪಚಾರಿಕ ಪ್ರಕಟನೆಯನ್ನು ಎನ್‌ಆರ್‌ಎಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಈಗಿನ್ನು ಶೀಘ್ರವೇ ಮಾಡಲಿದೆ.
“ನಾವು ಮೊದಲು ಎನ್‌ಆರ್‌ಎಸ್ ಹಾಸ್ಪಿಟಲ್ ಮೆಡಿಕಲ್ ಕಾಲೇಜಿಗೆ ಹೋಗುವೆವು; ಬಳಿಕ ಮುಷ್ಕರ ಹಿಂದೆಗೆತದ ಬಗ್ಗೆ ಘೋಷಣೆ ಮಾಡುವೆವು; ಸಿಎಂ ಮಮತಾ ಬ್ಯಾನರ್ಜಿ ಅವರ ಉದ್ದೇಶಿತ ಕ್ರಮದಿಂದ (ನೋಡಾಲ್ ಅಧಿಕಾರಿ ನೇಮಕಾತಿ) ನಾವು ತೃಪ್ತರಾಗಿದ್ದೇವೆ’ ಎಂದು ವೈದ್ಯರ ನಿಯೋಗ ಹೇಳಿತು.
ವೈದ್ಯರ ಮುಷ್ಕರದಿಂದ ತೀವ್ರ ಒತ್ತಡಕ್ಕೆ ಗುರಿಯಾಗಿದ್ದ ಸಿಎಂ ಮಮತಾ ಬ್ಯಾನರ್ಜಿ ಅವರು 31 ಪ್ರತಿನಿಧಿಗಳನ್ನು ಒಳಗೊಂಡ ಜೂನಿಯರ್ ಡಾಕ್ಟರ್‌ಗಳ ನಿಯೋಗವನ್ನು ಇಂದು ಮಧ್ಯಾಹ್ನ ಭೇಟಿಯಾದರು.
ವೈದ್ಯರ ನಿಯೋಗದೊಂದಿಗಿನ ಸಭೆಯಲ್ಲಿ ಕೋಲ್ಕತ ಪೊಲೀಸ್ ಕಮಿಷನರ್ ಅನುಜ್ ಶರ್ಮಾ, ಚೀಫ್ ಸೆಕ್ರೆಟರಿ ರಾಜೀವ್ ಸಿನ್ಹಾ, ಪಶ್ಚಿಮ ಬಂಗಾಲ ಆರೋಗ್ಯ ಕಾರ್ಯದರ್ಶಿ, ಸಹಾಯಕ ಸಚಿವೆ, ಚಂದ್ರಿಮಾ ಭಟ್ಟಾಚಾರ್ಯ ಮತ್ತು ರಾಜ್ಯದ ಇತರ ಪ್ರಮುಖ ಸರಕಾರಿ ಅಧಿಕಾರಿಗಲು ಹಾಗೂ ಮಾಧ್ಯಮ ಪ್ರತಿನಿಧಿಗಳು ಹಾಜರಿದ್ದರು.