Advertisement

ಹಿರಿ-ಕಿರಿಯರ ದೈತ್ಯ ಸಮರ

06:00 AM Jun 08, 2018 | |

ಮಾಸ್ಕೊ: ವಿಶ್ವಕಪ್‌ ಫ‌ುಟ್‌ಬಾಲ್‌ ಎನ್ನುವುದು ಅನುಭವಿ ಹಾಗೂ ತರುಣ ಆಟಗಾರರನ್ನೊಳಗೊಂಡ ದೈತ್ಯ ಸಮರ. ಸಾಮಾನ್ಯವಾಗಿ ವಿಶ್ವಕಪ್‌ನಲ್ಲಿ ಅನುಭವಿಗಳೇ ಸ್ಟಾರ್‌ಗಳು. ಕೆಲವೇ ಸಂಖ್ಯೆಯ ಯುವ ಆಟಗಾರರು ದಿಢೀರನೇ ಬೆಳಕಿಗೆ ಬರಲು ಇದೊಂದು ವೇದಿಕೆಯೂ ಹೌದು. ಈ ಬಾರಿಯ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಅತೀ ಕಿರಿಯರ ತಂಡವೆಂಬ ಹೆಗ್ಗಳಿಕೆ ನೈಜೀರಿಯಾಕ್ಕೆ ಸಂದಿದೆ. ಇಲ್ಲಿನ ಆಟಗಾರರ ಸರಾಸರಿ ವಯಸ್ಸು 25.9. ಅನಂತರದ ಸ್ಥಾನ ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ಗೆ ಸಲ್ಲುತ್ತದೆ. ಈ ಎರಡೂ ತಂಡಗಳ ಆಟಗಾರರ ಸರಾಸರಿ ವಯಸ್ಸು 26 ವರ್ಷ. ಈ ಮೂವರಲ್ಲಿ ನೈಜೀರಿಯಾಕ್ಕೆ ಹೋಲಿಸಿದರೆ ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ ತಂಡಗಳು ಫೇವರಿಟ್‌ ಆಗಿವೆ.

Advertisement

ಫ್ರಾನ್ಸ್‌ ಅನುಭವಿಗಳ ತಂಡ
ಫ್ರಾನ್ಸ್‌ ತಂಡ 26ರ ಸರಾಸರಿ ವಯಸ್ಸಿನ ಫ‌ುಟ್ಬಾಲಿಗರನ್ನು ಹೊಂದಿದ್ದರೂ ಅನುಭವದ ಲೆಕ್ಕಾಚಾರದಲ್ಲಿ ಬಹಳ ಮೇಲಿದೆ. ಇಲ್ಲಿನ 6 ಮಂದಿ ಆಟಗಾರರು 40ಕ್ಕೂ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಫ್ರಾನ್ಸ್‌ಗೆ ಹೋಲಿಸಿದರೆ ಇಂಗ್ಲೆಂಡ್‌ ತಂಡದಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತದೆ. ಇಲ್ಲಿ 40ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಆಟಗಾರ ಕೇವಲ ಓರ್ವ ಮಾತ್ರ. 

ಹಿರಿಯರ ತಂಡಗಳು
ಕೋಸ್ಟಾರಿಕಾ, ಮೆಕ್ಸಿಕೊ ಮತ್ತು ಇದೇ ಮೊದಲ ಸಲ ಆಡ ಲಿಳಿದಿರುವ ಪನಾಮ ಈ ಕೂಟದ ಅತ್ಯಂತ ಹಿರಿಯರ ತಂಡ ಗಳಾಗಿ ಗುರುತಿಸಲ್ಪಟ್ಟಿವೆ. ಇಲ್ಲಿನ ಆಟಗಾರರ ಅನುಭವವೂ ಅಧಿಕ. ಪನಾಮವಂತೂ 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ 6 ಆಟಗಾರರನ್ನು ಹೊಂದಿದೆ!

ಕಿರಿಯ ಗೋಲ್‌ಕೀಪರ್‌
ಕೂಟದ ಅತೀ ಕಿರಿಯ ಗೋಲ್‌ಕೀಪರ್‌ ಎಂಬ ಹೆಗ್ಗಳಿಕೆ ನೈಜೀರಿಯಾದ ಫ್ರಾನ್ಸಿಸ್‌ ಉಜೋಹೊ ಅವರಿಗೆ ಸಲ್ಲುತ್ತದೆ. ಉಜೋಹೊ ವಯಸ್ಸು 19 ವರ್ಷ. ಹಾಗೆಯೇ ಕೂಟದ ಅತ್ಯಂತ ಕಿರಿಯ ನಾಯಕನೆಂಬ ಹಿರಿಮೆ ಇಂಗ್ಲೆಂಡಿನ ಹ್ಯಾರಿ ಕೇನ್‌ ಅವರದು. ವಯಸ್ಸು 24 ವರ್ಷ. 27.9 ವರ್ಷದ‌ ಸರಾಸರಿ ಹೊಂದಿರುವ “ರೆಡ್‌ ಡೆವಿಲ್ಸ್‌’ ಖ್ಯಾತಿಯ ಬೆಲ್ಜಿಯಂ ಅತ್ಯಂತ ಅನುಭವಿಗಳ ತಂಡವೆಂದು ಗುರುತಿಸಲ್ಪಟ್ಟಿದೆ. ಕಾರಣ, ಇಲ್ಲಿ 50ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ 12 ಆಟಗಾರರಿದ್ದಾರೆ!

ಅರ್ಜಾನಿ ವಯಸ್ಸು 19 ವರ್ಷ
ಆಸ್ಟ್ರೇಲಿಯದ ಡೇನಿಯಲ್‌ ಅರ್ಜಾನಿ ಈ ಕೂಟದ ಅತೀ ಕಿರಿಯ ಆಟಗಾರ. ವಯಸ್ಸು 19 ವರ್ಷ. ಹಾಗೆಯೇ ಈಜಿಪ್ಟ್ನ ಎಸ್ಸಾಮ್‌ ಎಲ್‌-ಹದಾರಿ 45ರ ಹರೆಯದ ಅತೀ ಹಿರಿಯ ಫ‌ುಟ್ಬಾಲಿಗ. ಎಲ್‌-ಹದಾರಿ 40 ವರ್ಷ ದಾಟಿದ ಈ ಕೂಟದ ಏಕೈಕ ಆಟಗಾರ. ಅನಂತರದ ಸ್ಥಾನ ಮೆಕ್ಸಿಕೋದ ರಫೆಲ್‌ ಮಾಕ್ವೆìಜ್‌ ಅವರದು. 39ರ ಹರೆಯದ ಮಾಕ್ವೆìಜ್‌ ಪಾಲಿಗೆ ಇದು 5ನೇ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿ. ರಶ್ಯದ ಸರ್ಗೆಯಿ ಇಗ್ನಾಶೆವಿಕ್‌ ಮತ್ತು ಆಸ್ಟ್ರೇಲಿಯದ ಟಿಮ್‌ ಕಾಹಿಲ್‌ 1970ರಲ್ಲಿ ಹುಟ್ಟಿದ ಇಬ್ಬರು ಆಟಗಾರರಾಗಿದ್ದಾರೆ.

Advertisement

ಗೋಲುವೀರರು
ವಿಶ್ವಕಪ್‌ ಗೋಲುವೀರರೆಂದೊಡನೆ ನೆನಪಾಗುವವರು ಜರ್ಮನಿಯ ಮಿರೋಸ್ಲಾವ್‌ ಕೋಲ್ಸ್‌. ವಿಶ್ವಕಪ್‌ನಲ್ಲಿ ಸರ್ವಾಧಿಕ 16 ಗೋಲು ಹೊಡೆದ ದಾಖಲೆ ಇವರದ್ದು. ರೊನಾಲ್ಡೊ (15), ಗೆರ್ಡ್‌ ಮುಲ್ಲರ್‌ (14) ಅನಂತರದ ಸ್ಥಾನದಲ್ಲಿದ್ದಾರೆ.

ಫ್ರಾನ್ಸ್‌ನ ಜಸ್ಟ್‌ ಫಾಂಟೇನ್‌ ಒಂದೇ ಕೂಟದಲ್ಲಿ ಅತೀ ಹೆಚ್ಚು 13 ಗೋಲು ಸಿಡಿಸಿದ ದಾಖಲೆ ಹೊಂದಿದ್ದಾರೆ. ಇವು 1958ರ ಕೂಟದ 6 ಪಂದ್ಯಗಳಲ್ಲಿ ದಾಖಲಾಗಿದ್ದವು.

ವಿಶ್ವಕಪ್‌ನ ಅತೀ ಹೆಚ್ಚಿನ ಹ್ಯಾಟ್ರಿಕ್‌ ಸಾಧಕ‌ರೆಂದರೆ ಸ್ಯಾಂಡರ್‌ ಕೋಕ್ಸಿಸ್‌ (ಹಂಗೇರಿ, 1954), ಜಸ್ಟ್‌ ಫಾಂಟೇನ್‌ (ಫ್ರಾನ್ಸ್‌, 1958), ಗೆರ್ಡ್‌ ಮುಲ್ಲರ್‌ (ಪಶ್ಚಿಮ ಜರ್ಮನಿ, 1970), ಗ್ಯಾಬ್ರಿಯಲ್‌ ಬಟಿಸ್ಟುಟ (ಆರ್ಜೆಂಟೀನಾ, 1994 ಹಾಗೂ 1998). ಇವರು ತಲಾ 2 ಸಲ ಹ್ಯಾಟ್ರಿಕ್‌ ಸಿಡಿಸಿದ್ದಾರೆ.

ವಿಶ್ವಕಪ್‌ ಕೂಟದ ಅತೀ ವೇಗದ ಹ್ಯಾಟ್ರಿಕ್‌ ಹೀರೋ ಹಂಗೇರಿಯ ಲಾಜೊÉ ಕಿಸ್‌. 1982ರ ಎಲ್‌ ಸಾಲ್ವೋಡರ್‌ ವಿರುದ್ಧದ ಪಂದ್ಯದಲ್ಲಿ ಕಿಸ್‌ ಕೇವಲ 8 ನಿಮಿಷಗಳ ಅವಧಿಯಲ್ಲಿ ಈ ಸಾಧನೆ ಮಾಡಿದ್ದರು (69ನೇ, 72ನೇ ಹಾಗೂ 76ನೇ ನಿಮಿಷ).

ವಿಶ್ವಕಪ್‌ನಲ್ಲಿ ಗೋಲು ಸಿಡಿಸಿದ ಅತೀ ಕಿರಿಯ ಆಟಗಾರನೆಂಬ ಹೆಗ್ಗಳಿಕೆ ಪೀಲೆ ಹೆಸರಲ್ಲಿದೆ. 1958ರ ಕೂಟದ ವೇಲ್ಸ್‌ ಎದುರಿನ ಪಂದ್ಯದಲ್ಲಿ ಗೋಲು ಬಾರಿಸುವಾಗ ಪೀಲೆ ವಯಸ್ಸು ಕೇವಲ 17 ವರ್ಷ, 7 ತಿಂಗಳು, 27 ದಿನ!

ಕೂಟದ ಅತೀ ವೇಗದ ಗೋಲು (ಫಾಸ್ಟೆಸ್ಟ್‌ ಗೋಲು) ಟರ್ಕಿಯ ಹಕಾನ್‌ ಸುಕುರ್‌ ಅವರಿಂದ ದಾಖಲಾಗಿದೆ. 2002ರ ದಕ್ಷಿಣ ಕೊರಿಯ ವಿರುದ್ಧ ಅವರು ಪಂದ್ಯ ಆರಂಭಗೊಂಡ ಕೇವಲ 11 ನಿಮಿಷಗಳಲ್ಲಿ ಗೋಲು ಹೊಡೆದಿದ್ದರು.

ಪೆನಾಲ್ಟಿ ಕಾರ್ನರ್‌ ವೀಕ್ಷಕರ ದಾಖಲೆ
ವಿಶ್ವದಲ್ಲಿ ಅತೀ ಹೆಚ್ಚು ವೀಕ್ಷಣೆಗೊಳಗಾಗುವ ಪಂದ್ಯಾವಳಿ ಯಾವುದು ಎಂಬುದಕ್ಕೆ ಉತ್ತರ “ಫಿಫಾ ವಿಶ್ವಕಪ್‌’. ವಿಶ್ವದ ಅರ್ಧದಷ್ಟು ಮಂದಿ ಈ ಕಾಲ್ಚೆಂಡಿನ ಸಮರವನ್ನು ವೀಕ್ಷಿಸುತ್ತಾರೆ ಎನ್ನುತ್ತದೆ ಸಮೀಕ್ಷೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ 2010ರ ವಿಶ್ವಕಪ್‌ ಪಂದ್ಯಾವಳಿಯನ್ನು ವಿಶ್ವಾದ್ಯಂತ 3.2 ಬಿಲಿಯನ್‌ ಮಂದಿ (ಅಂದರೆ ವಿಶ್ವ ಜನಸಂಖ್ಯೆಯ ಶೇ. 46) ಕನಿಷ್ಠ ಒಂದು ನಿಮಿಷ ವಾದರೂ ವೀಕ್ಷಿಸಿದ್ದರು. ಇದು ಕ್ರೀಡಾ ಇತಿಹಾಸದಲ್ಲೇ ದಾಖಲೆಯಾಗಿದೆ ಎಂದು ಫಿಫಾ ಹೇಳಿದೆ.

ವಿಶ್ವದ ಶೇ. 46ರಷ್ಟು ಮಂದಿಯನ್ನು ಒಗ್ಗೂಡಿಸುವ ಅಮೋಘ ಶಕ್ತಿ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟಕ್ಕಲ್ಲದೇ ಬೇರೆ ಯಾವುದಕ್ಕೂ ಇಲ್ಲ ಎಂದು ಫಿಫಾ ಹೆಮ್ಮೆಯಿಂದ ಹೇಳಿ ಕೊಳ್ಳುವುದು ಅತಿಶಯೋಕಿತ್ತಯಲ್ಲ. ಅಂದಿನ ಕೂಟವನ್ನು 2 ಬಿಲಿಯದಷ್ಟು ಮಂದಿ (ವಿಶ್ವದ ಶೇ. 29) ಪಂದ್ಯಾವಳಿಯನ್ನು ಕನಿಷ್ಠ ಅರ್ಧ ಗಂಟೆ ಕಾಲ ಕುಳಿತು ನೋಡಿದ್ದರು. 

ಆದರೆ 2014ರ “ಸೂಪರ್‌ ಬೌಲ್‌’ ಫ‌ುಟ್‌ಬಾಲ್‌ ಪಂದ್ಯಾವಳಿ ಇದಕ್ಕೊಂದು ಅಪವಾದವೆನಿಸಿದ್ದು ಇಲ್ಲಿ ಉಲ್ಲೇಖನೀಯ. ಕೇವಲ ಅಮೆರಿಕಕ್ಕೆ ಸೀಮಿತವಾದ “ಸೂಪರ್‌ ಬೌಲ್‌’ ಫ‌ುಟ್‌ಬಾಲ್‌ ಕೂಡ ವೀಕ್ಷಕರನ್ನು ಸೆಳೆಯಲು ಹಿಂದೆ ಬಿದ್ದಿಲ್ಲ. 2014ರ ಫೈನಲ್‌ ಪಂದ್ಯವನ್ನು 111.5 ಮಿಲಿಯನ್‌ ವೀಕ್ಷಕರು ನೋಡಿದ್ದರು. ಅಂದಹಾಗೆ ಇದು 2010ರ ಫಿಫಾ ವಿಶ್ವಕಪ್‌ ಫೈನಲ್‌ ದಾಖಲೆಯನ್ನು ಮೀರಿಸಿದೆ. ಅಂದಿನ ಸ್ಪೇನ್‌ ಗೆಲುವನ್ನು ವೀಕ್ಷಿಸಿದವರ ಸಂಖ್ಯೆ 909 ಮಿಲಿಯನ್‌. ಮಾಸ್ಕೋದಲ್ಲಿ ವೀಕ್ಷಕರಿಂದ ಎಂತೆಂಥ ದಾಖಲೆ ನಿರ್ಮಾಣವಾದೀತೆಂಬ ನಿರೀಕ್ಷೆ ಸಹಜ.

Advertisement

Udayavani is now on Telegram. Click here to join our channel and stay updated with the latest news.

Next