ಕಾಗವಾಡ: ಯಮ ಸಲ್ಲೇಖನ ವ್ರತದಿಂದ ಸಾಧು ಸಮಾಧಿ ಮರಣ ಹೊಂದಿದ “ಜಂಗಲ್‌ವಾಲೆ ಬಾಬಾ’ ಖ್ಯಾತಿಯ ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹಾರಾಜರ ಪಾರ್ಥಿವ ಶರೀರ ಅವರ ಸ್ವಗ್ರಾಮ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜುಗೂಳದಲ್ಲಿ ಶನಿವಾರ ಪಂಚಭೂತಗಳಲ್ಲಿ ಲೀನವಾಯಿತು.
ಇದಕ್ಕೂ ಮುನ್ನ ಮಹಾರಾಜರ ಪಾರ್ಥಿವ ಶರೀರವನ್ನು ಪುಷ್ಪಕ ರಥದಲ್ಲಿ ಗಜ, ಕುದುರೆ, ಸಹವಾದ್ಯದೊಂದಿಗೆ ಗ್ರಾಮದ ಪ್ರಮುಖ ಮಾರ್ಗಗಳ ಮುಖಾಂತರ ಸ್ವಾಮೀಜಿಯವರ ಜನ್ಮ ಸ್ಥಾನ ಮೋಳೆ ಬಂಧುಗಳ ತೋಟದವರೆಗೆ ತೆಗೆದುಕೊಂಡು ಹೋಗಲಾಯಿತು. ಈ ವೇಳೆ ಸಾವಿರಾರು ಮಂದಿ ಶ್ರಾವಕ- ಶ್ರಾವಕಿಯರು ಪಾಲ್ಗೊಂಡಿದ್ದರು.
ಅಂತ್ಯಸಂಸ್ಕಾರದ ಸಮಯದಲ್ಲಿ ನಾಂದಣಿ ಜಿನಸೇನ ಭಟ್ಟಾರಕ ಮಹಾ ರಾಜರು, ಕಾರ್ಕಳ ಶ್ರೀ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಆಚಾರ್ಯ ಸೂರ್ಯ ಸಾಗರ, ಸುಮತಿ ಸಾಗರ, ಸಮರ್ಪಣ ಸಾಗರ, ಮೋಕ್ಷ ಸಾಗರ, ಅಜೀತಸೇನ ಮುನಿ ಮಹಾರಾಜರು, ಪ್ರಸಂಗ ಸಾಗರ, ಜ್ಞಾನಭೂಷಣ ಮುನಿ ಮಹಾರಾಜರು ವಿಧಿ ಮಂತ್ರೋಪಚಾರ ಮಾಡಿದರು.
ನವದೆಹಲಿಯ ಪವನ ಜೈನ, ನವೀನ ಜೈನ, ಅರುಣ ಜೈನ (ಕಟೋಲೆ), ರಾಜೇಂದ್ರ ಜೈನ ಕುಟುಂಬದವರು ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟರು. ಕೊನೆಗೆ, ಚಂದನದ ಕಟ್ಟಿಗೆಗಳು, ಕೊಬ್ಬರಿ, ಕರ್ಪೂರ, ಹಾಲು, ತುಪ್ಪ, ಖಾರಿಕ, ಕಶಾಯ ಬಳಸಿ ಅಭಿಷೇಕ ಮಾಡಲಾ ಯಿತು. ನಂತರ, ರಾಜಸ್ತಾನ ಕೋಟಾದ ಉದ್ಯಮಿಗಳಾದ ವಿನೋದ ಜೈನ ಹಾಗೂ ಅಭಿಷೇಕ ಜೈನ ಕುಟುಂಬದವರು ಅಗ್ನಿ ಸ್ಪರ್ಶ ಮಾಡಿದರು.
ಜುಗೂಳ ಗ್ರಾಮದ ಜೈನ ಸಮಾಜದ ಅಧ್ಯಕ್ಷ ಶ್ರೇಣಿಕ ಅಕ್ಕೋಳೆ, ಅರುಣ ಗಣೇಶವಾಡಿ ಮತ್ತು ಸ್ವಾಮೀಜಿಯವರ ಮೋಳೆ ಪರಿವಾರದ ಸದಸ್ಯರಿಂದ ಪಾರ್ಥಿವ ಶರೀರಕ್ಕೆ ಅಭಿಷೇಕ ನೆರವೇರಿಸಲಾಯಿತು. ಪ್ರಕಾಶ ಮೋದಿ, ಸುಮನಲತಾ ಮೋದಿ ಅವರು ಭೂಮಿಶುದ್ಧಿ ಮಾಡಿದರು.
ಚಿನ್ಮಯ ಆಸ್ಪತ್ರೆ ಸ್ಥಾಪನೆ: ಈ ನಡುವೆ, ಜುಗೂಳ ಸಮಾಜ ಸಂಘಟನೆ ಹಾಗೂ ದಿಲ್ಲಿ ಉದ್ಯಮಿಗಳ ಸಮ್ಮುಖದಲ್ಲಿ ಚಿನ್ಮಯಸಾಗರ ಟ್ರಸ್ಟ್ ಹೆಸರಿನಲ್ಲಿ ಚಿನ್ಮಯ ಆಸ್ಪತ್ರೆ ನಿರ್ಮಾಣದ ಘೋಷಣೆ ಮಾಡಲಾಯಿತು. ಇದಕ್ಕೆ ಸುಮಾರು ಒಂದು ಕೋಟಿ ರೂ.ವೆಚ್ಚವಾಗುತ್ತದೆ ಎಂದು ಹೇಳಿದಾಗ ಅನೇಕ ಉದ್ಯಮಿಗಳು ಧನಸಹಾಯದ ಭರವಸೆ ನೀಡಿದರು. ಮೊದಲನೇ ಪುಣ್ಯತಿಥಿಯನ್ನು ಆಸ್ಪತ್ರೆ ಭವನದಲ್ಲಿ ಮಾಡುವ ಬಗ್ಗೆ ಆಚಾರ್ಯ ಚಂದ್ರಪ್ರಭು ಮುನಿ ಮಹಾರಾಜರು ಹಾಗೂ ಸೌರಭಸೇನ ಭಟ್ಟಾರಕ ಮಹಾರಾಜರು ಘೋಷಣೆ ಮಾಡಿದರು.