ನವದೆಹಲಿ/ಪಾಟ್ನಾ: ಬಿಹಾರ ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್(31ವರ್ಷ) ವಿರುದ್ಧ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ಟಾಂಗ್ ನೀಡಿದ್ದು, “ಜಂಗಲ್ ರಾಜ್ ಕಾ ಯುವರಾಜ್” ಎಂಬುದಾಗಿ ವಾಗ್ದಾಳಿ ನಡೆಸಿದ್ದಾರೆ.
ಮುಜಾಫರೂರ್ ನಲ್ಲಿ ಎರಡನೇ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ತೇಜಸ್ವಿ ಯಾದವ್ ಪೋಷಕರಾದ ಲಾಲೂ ಮತ್ತು ರಾಬ್ರಿ ದೇವಿ 15 ವರ್ಷಗಳ ಕಾಲ ಆಡಳಿತ ನಡೆಸಿದ್ದನ್ನು ನೆನಪಿಸಿ, ಇವರ ಆಡಳಿತಾವಧಿಯಲ್ಲಿ ರಾಜ್ಯವನ್ನು ಕಗ್ಗತ್ತಲಿನಲ್ಲಿಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಹೇಳಿದರು.
ಹಿಂದಿನ (ಅಪರಾಧ) ದಾಖಲೆಯಿಂದಾಗಿ ಯುವರಾಜ್ ಆಫ್ ಜಂಗಲ್ ರಾಜ್ ನಿಂದ ಬಿಹಾರದ ಜನರು ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ನನಗಿಂತ ಹೆಚ್ಚಾಗಿ ಬಿಹಾರದ ಜನರಿಗೆ ಅವರ ದಾಖಲೆಯ ಬಗ್ಗೆ ತಿಳಿದಿದೆ ಎಂದು ತೇಜಸ್ವಿ ಯಾದವ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಭಾರತೀಯ ವಾಯುಪಡೆಗೆ ಮತ್ತಷ್ಟು ಆನೆಬಲ: ನ.5ರಂದು ಮತ್ತೆ 3 ರಫೇಲ್ ಭಾರತಕ್ಕೆ ಆಗಮನ
ಸಾರ್ವಜನಿಕ ವಲಯದಲ್ಲಿನ ಉದ್ಯೋಗದ ಬಗ್ಗೆ ಜನರು ಮರೆತೇಬಿಟ್ಟಿದ್ದರು. ಉದ್ಯೋಗ ನೀಡುವ ಖಾಸಗಿ ಕಂಪನಿಗಳು ಕೂಡಾ ಬಾಗಿಲು ಮುಚ್ಚಿ ಪಲಾಯನ ಮಾಡಿರುವುದಾಗಿ ಪ್ರಧಾನಿ ಮೋದಿ ಆರೋಪಿಸಿದ್ದು, ತೇಜಸ್ವಿ ಯಾದವ್ ಅವರ ಹತ್ತು ಲಕ್ಷ ಉದ್ಯೋಗ ಭರವಸೆ ಕುರಿತು ನೇರವಾಗಿ ಟಾಂಗ್ ನೀಡಿರುವುದಾಗಿ ವರದಿ ತಿಳಿಸಿದೆ.