ಮಂಗಳೂರು: ಪೆಟ್ರೋಲ್, ಡೀಸೆಲ್ ದರ ನಿತ್ಯ ಪರಿಷ್ಕರಣೆ ವಿರೋಧಿಸಿ ಜೂ. 16ರಂದು ರಾಜ್ಯಾದ್ಯಂತ ಪೆಟ್ರೋಲ್ ಬಂಕ್‌ಗಳು ಬಂದ್ ಆಗಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲೂ ಜೂ. 15ರ ಮಧ್ಯರಾತ್ರಿ 12 ಗಂಟೆಯಿಂದ ಜೂ. 16ರ ಮಧ್ಯರಾತ್ರಿ 12ರ ವರೆಗೆ ಬಂದ್ ಆಗಲಿವೆ.
ಉಭಯ ಜಿಲ್ಲೆಗಳಲ್ಲಿ ಸುಮಾರು 200 ಪೆಟ್ರೋಲ್ ಬಂಕ್‌ಗಳಿದ್ದು, ದಿನವೊಂದಕ್ಕೆ ಸರಾಸರಿ ಪ್ರತಿ ಬಂಕ್‌ಗಳಲ್ಲೂ 5,000ದಿಂದ 6,000 ಲೀಟರ್ ಪೆಟ್ರೋಲ್/ ಡೀಸೆಲ್ ಮಾರಾಟವಾಗುತ್ತದೆ. ಅಂದರೆ ಸರಿಸುಮಾರು 10 ಕೋ.ರೂ.ಗಳ ವ್ಯವಹಾರ ನಡೆಯುತ್ತದೆ. ಕರಾವಳಿ ಜಿಲ್ಲೆಯಲ್ಲಿ 6 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪೆಟ್ರೋಲ್ ಬಂಕ್ ಬಂದ್ ಆಗಲಿದೆ.ಕೆಲವೊಂದು ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳಿಗೆ ಗ್ಯಾಸ್ ತುಂಬಿಸುವ ವ್ಯವಸ್ಥೆಯೂ ಇದ್ದು, ಅದು ಕೂಡ ಬಂದ್ ಆಗಲಿದೆ.
ಜೂ. 16ರಂದು ಇಂಧನ ಅಲಭ್ಯವಾಗುವ ಹಿನ್ನೆಲೆಯಲ್ಲಿ ಜೂ. 15 ಹಾಗೂ ಜೂ. 17ರಂದು ಬಂಕ್‌ಗಳಲ್ಲಿ ದಟ್ಟಣೆ ಆಗುವ ಸಾಧ್ಯತೆ ಇದೆ.
ಸಚಿವರ ಭೇಟಿ: ಜೂ. 14ರಂದು ಹೊಸದಿಲ್ಲಿಯಲ್ಲಿ ರಾಜ್ಯ ಪೊಟ್ರೋಲಿಯಂ ಡೀಲರ್ಸ್ ಫೆಡರೇಶನ್ ಕೇಂದ್ರ ಪೆಟ್ರೋಲಿಯಂ ಸಚಿವರನ್ನು ಭೇಟಿ ಮಾಡಿ ಯೋಜನೆ ಕೈಬಿಡುವಂತೆ ಮನವಿ ಮಾಡಲಿದೆ. ಮನವಿಗೆ ಸಚಿವರು ಸ್ಪಂದಿಸಿದರೆ ಬಂದ್ ನಿರ್ಧಾರ ಹಿಂಪಡೆಯುವ ಸಾಧ್ಯತೆ ಇದೆ.
ಜೂ. 15ರಂದು ಇಂಧನ ತುಂಬಿಸಿಕೊಳ್ಳಲು ಬರುವವರ ಸಂಖ್ಯೆ ಹೆಚ್ಚಾಗಬಹುದಾದ್ದರಿಂದ ಹಾಗೂ ಬಂದ್‌ನ ಬಳಿಕ ಬಂಕ್‌ಗಳಿಗೆ ಜೂ. 17ರ ಮಧ್ಯಾಹ್ನ ಪೆಟ್ರೋಲ್/ಡೀಸೆಲ್ ಸ್ಟಾಕ್ ಬರುವುದರಿಂದ ಮುಂಚೆಯೇ ಹೆಚ್ಚುವರಿ ದಾಸ್ತಾನು ಇಟ್ಟುಕೊಳ್ಳುವಂತೆ ಪ್ರತಿ ಬಂಕ್‌ನವರಿಗೆ ತಿಳಿಸಲಾಗುವುದು ಎಂದು ದ.ಕ. ಹಾಗೂ ಉಡುಪಿ ಪೆಟ್ರೋಲ್ ಡೀಲರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಆನಂದ್ ಕಾರ್ನಾಡ್ ಉದಯವಾಣಿಗೆ ತಿಳಿಸಿದ್ದಾರೆ.