Advertisement

ಜು. 14,15ರಂದು ಬಿಜೆಪಿ ಹಿರಿಯ ನಾಯಕರ ನೇತೃತ್ವದಲ್ಲಿ ಗೌಪ್ಯ ಸಭೆ

12:07 AM Jul 09, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಿದ್ಧತೆ ಹಾಗೂ ಪ್ರಸ್ತುತ ಸರಕಾರದ ಕಾರ್ಯವೈಖರಿ ಕುರಿತು ಚರ್ಚಿಸಲು ಜುಲೈ 14, 15ರಂದು ಬಿಜೆಪಿ ಹಿರಿಯ ನಾಯಕರ ಸಭೆ ನಡೆಯಲಿದೆ.

Advertisement

ಬೆಂಗಳೂರಿನ ಹೊರ ವಲಯದಲ್ಲಿ ನಡೆಯುವ ಗೌಪ್ಯ ಸಭೆಗೆ ಬಿಜೆಪಿಯ ರಾಷ್ಟ್ರೀಯ ನಾಯಕರು ಆಗಮಿಸಲಿದ್ದು, ಆದರೆ ಯಾರು ಭಾಗವಹಿಸುತ್ತಾರೆ ಎಂಬುದನ್ನೂ ಗೌಪ್ಯವಾಗಿಡಲಾಗಿದೆ.

ಸರಕಾರದ ಕಾರ್ಯವೈಖರಿ ಚರ್ಚೆ
ಮುಂದಿನ 10 ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ? ಸಚಿವರು ತಮ್ಮ ಇಲಾಖೆಗಳಿಗೆ ಸಂಬಂಧಿಸಿ ಏನೆಲ್ಲ ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ? ಉಸ್ತುವಾರಿ ನೀಡಿರುವ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕ ಹಾಗೂ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸುವಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ ಎನ್ನುವ ಕುರಿತು ಮೌಲ್ಯಮಾಪನ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಿಷನ್‌ ದಕ್ಷಿಣ್‌ ಕಾರ್ಯತಂತ್ರ
ಪ್ರಮುಖವಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು, ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿಯ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ವರಿಷ್ಠರು ಕೆಲವು ಸೂಚನೆ ನೀಡಿದ್ದು, ಅದನ್ನು ರಾಜ್ಯದಲ್ಲಿ ಜಾರಿಗೊಳಿಸುವ ಕುರಿತೂ ಚರ್ಚೆಯಾಗುವ ಸಾಧ್ಯತೆ ಇದೆ.

ಚುನಾವಣೆ ನೀಲನಕ್ಷೆ
ಚುನಾವಣೆಗೆ ಈಗಿನಿಂದಲೇ ಯಾವ ರೀತಿಯ ಕಾರ್ಯತಂತ್ರ ರೂಪಿಸುವುದು, ನರೇಂದ್ರ ಮೋದಿ, ಅಮಿತ್‌ ಶಾ ಹಾಗೂ ಯೋಗಿ ಆದಿತ್ಯನಾಥ ಅವರು ರಾಜ್ಯದಲ್ಲಿ ಯಾವ ಸಂದರ್ಭದಲ್ಲಿ ಪ್ರವಾಸ ಮಾಡಬೇಕು ಮುಂತಾದವುಗಳ ಬಗ್ಗೆಯೂ ಚರ್ಚೆಯಾಗಲಿದೆ.

Advertisement

ಪ್ರಸ್ತುತ ವಿದ್ಯಮಾನಗಳ ಚರ್ಚೆ
ಪ್ರಸ್ತುತ ರಾಜ್ಯದಲ್ಲಿ ಹಿಜಾಬ್‌ನಿಂದ ಹಿಡಿದು ಆಝಾನ್‌ವರೆಗಿನ ಸಂಘರ್ಷದಲ್ಲಿ ಸರಕಾರ ನಡೆದುಕೊಂಡ ರೀತಿ, ಕಾಂಗ್ರೆಸ್‌ನ ಆರೋಪಗಳಿಗೆ ಪಕ್ಷದ ನಾಯಕರಿಂದ ಪ್ರತ್ಯುತ್ತರ ನೀಡಿರುವ ಬಗ್ಗೆಯೂ ಚರ್ಚಿಸುವ ಮಾಹಿತಿ ಲಭ್ಯವಾಗಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ದರ್ಜೆಯ ಪೊಲೀಸ್‌ ಅಧಿಕಾರಿ ಬಂಧನವಾಗಿದ್ದು, ಲಂಚ ಪ್ರಕರಣಲ್ಲಿ ಜಿಲ್ಲಾಧಿಕಾರಿ ಬಂಧನ, ಎಸಿಬಿ ಕಾರ್ಯವೈಖರಿ ಕುರಿತು ಹೈಕೋರ್ಟ್‌ ನ್ಯಾಯಮೂರ್ತಿಗಳ ಅಭಿಪ್ರಾಯಗಳ ಕುರಿತೂ ಚರ್ಚೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next