ಉಡುಪಿ: ರಾಣೆಬೆನ್ನೂರಿನಲ್ಲಿ ಬೆಳಗಾವಿ ಮೂಲದ ಅಪ್ರಾಪ್ತ ವಯಸ್ಕ ಯುವತಿಯನ್ನು ಅತ್ಯಾಚಾರಗೈದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ ಮೂವರು ಚಾಲಕ/ನಿರ್ವಾಹಕರನ್ನು ಉಡುಪಿ ಪೊಲೀಸರು ರಾಣೆಬೆನ್ನೂರಿನ ಹಿರೇಕೆರೂರಿನಲ್ಲಿ ಬಂಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಮೂವರಿಗೂ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಚಾಲಕ/ನಿರ್ವಾಹಕರಾದ ಹಾವೇರಿ ರಾಣೆಬೆನ್ನೂರಿನ ಬನಶಂಕರಿ ನಗರದ ರಾಘವೇಂದ್ರ ಪ್ರಭಾಕರ ಬಡಿಗೇರ ಯಾನೆ ರಾಘು ಯಾನೆ ಆನೆ ರಾಘು (35), ಹಿರೇಕೆರೂರಿನ ಯುವರಾಜ್ ಕಟ್ಟೆಕಾರ್ (35) ಮತ್ತು ಹಿರೇಕೆರೂರು ಒಡೆಯರ ಹಳ್ಳಿಯ ವೀರಯ್ಯ ಆರ್. ಹಿರೇಮಠ (41) ಆರೋಪಿಗಳು.
ಘಟನೆ ಹಿನ್ನೆಲೆ: ಮೂಲತಃ ಬೆಳಗಾವಿಯವಳಾದ ಅಪ್ರಾಪ್ತ ವಯಸ್ಕ ಯುವತಿಯು ಪೋಷಕರೊಂದಿಗೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ವಾಸ್ತವ್ಯವಿದ್ದರು. ಅವರು ಜು. 5ರಂದು ಕಾಣೆಯಾಗಿದ್ದರು. ಈ ಬಗ್ಗೆ ಉಡುಪಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜು. 6ರಂದು ಕಾರ್ಯಾಚರಣೆಗೆ ಇಳಿದ ಪೊಲೀಸರ ವಿಶೇಷ ತಂಡವು ಜು. 8ರಂದು ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಿಂದ ಬಾಲಕಿಯನ್ನು ಕರೆದುಕೊಂಡು ಬಂದು ಮಹಿಳಾ ಪಿಎಸ್‌ಐ ಮುಂದೆ ಹಾಜರುಪಡಿಸಿದ್ದರು.
ನೊಂದ ಬಾಲಕಿಯು ತಾನು ರಾಜು ಬಳಿಗಾರ್‌ನನ್ನು ನೋಡಲು ಜು. 5ರಂದು ಹೋಗಿದ್ದು, ಆತನ ಮನೆಯವರು ಆಕ್ಷೇಪಿಸಿ ಹಲಗೇರಿ ಬಸ್ ನಿಲ್ದಾಣದಿಂದ ಊರಿಗೆ ಹೋಗಲು ರಾಣೆಬೆನ್ನೂರು ಬಸ್ ನಿಲ್ದಾಣಕ್ಕೆ ಬಿಟ್ಟು ಬಂದಿದ್ದರು. ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಕೆಸ್ಸಾರ್ಟಿಸಿ ಬಸ್ಸಿನಲ್ಲಿ ಮಧ್ಯರಾತ್ರಿ ಮೂವರು ವ್ಯಕ್ತಿಗಳು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನುವ ಹೇಳಿಕೆ ನೀಡಿದ್ದರು. ಅದರಂತೆ ಮತ್ತೆ ಕಾರ್ಯಪ್ರವೃತ್ತರಾದ ಪೊಲೀಸರ ತಂಡವು ಎಲ್ಲ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳನ್ನು ಹಿರಿಯಡಕ ಸಬ್‌ಜೈಲಿನಲ್ಲಿ ಇರಿಸಲಾಗಿದೆ.
ಎಸ್‌ಪಿ ಕೆ.ಟಿ. ಬಾಲಕೃಷ್ಣ, ಡಿವೈಎಸ್‌ಪಿ ಎಸ್.ಜೆ. ಕುಮಾರಸ್ವಾಮಿ ಮಾರ್ಗದರ್ಶನ, ಉಡುಪಿ ಸಿಪಿಐ ನವೀನ್‌ಚಂದ್ರ ಜೋಗಿ, ಮಹಿಳಾ ಠಾಣೆ ಪ್ರಭಾರ ಪಿಎಸ್‌ಐ ಕಲ್ಪನಾ ಬಿ., ಎಎಸ್‌ಐ ವಿಜಯ, ಸಿಬಂದಿ ಉಮೇಶ್, ಜೀವನ್, ಅರುಣ್, ಬಾಲಕೃಷ್ಣ ಇಮ್ರಾನ್, ಜ್ಯೋತಿ ನಾಯಕ್, ಸುಮನಾ, ಮಾಲತಿ, ಶ್ರುತಿ, ಮಹಾಬಲೇಶ್ವರ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅಮಾನತು: ಮೂವರು ಆರೋಪಿಗಳನ್ನು ಕೆಎಸ್‌ಆರ್‌ಟಿಸಿ ಅಮಾನತು ಮಾಡಿದೆ. ಅವರ ವಿರುದ್ಧ ಕ್ರಮಕ್ಕೆ ಸಚಿವೆ ಉಮಾಶ್ರೀ ಆಗ್ರಹಿಸಿದ್ದರು.