ನ್ಯಾಯಾಲಯದಲ್ಲಿ ಅನುಕೂಲವಾಗುವಂತೆ ತೀರ್ಪು ಬಂದಿಲ್ಲ ಎಂಬ ಅಸಮಾಧಾನ ಅತಿರೇಕಕ್ಕೆ ಹೋದರೆ, ಪರಿಣಾಮ ಏನಾಗುತ್ತದೆ ಎನ್ನುವುದಕ್ಕೆ ಝಾರ್ಖಂಡ್‌ನ ಧನ್‌ಬಾದ್ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆ ಪ್ರಕರಣದಿಂದ ವೇದ್ಯವಾಗುತ್ತದೆ. ಅದಕ್ಕೆ ಪೂರಕವಾಗಿ ಉತ್ತರ ಪ್ರದೇಶದ ಫತೇಪುರ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ಕೋರ್ಟ್ ನಲ್ಲಿ ಪೋಸ್ಕೋ ಪ್ರಕರಣಗಳ ಕೋರ್ಟ್‌ನ ನ್ಯಾಯಾಧೀಶ ಮೊಹಮ್ಮದ್ ಅಹ್ಮದ್ ಖಾನ್ ಪ್ರಯಾಣಿಸುತ್ತಿದ್ದ ಕಾರ್‌ಗೆ ಟೊಯೊಟಾ ಇನೋವಾವನ್ನು ಹಲವು ಬಾರಿ ಢಿಕ್ಕಿ ಹೊಡೆಸಿ ಕೊಲ್ಲುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗೆ ಇನ್ನೂ ವಿಶ್ವಾಸ ಉಳಿದಿದೆ. ಅಲ್ಲಿ ಕೆಲಸ ಮಾಡುವ ನ್ಯಾಯಾಧೀಶರು ಮತ್ತು ಸಂಬಂಧಿತ ಅಧಿಕಾರಿಗಳ ಮೇಲೆ ಹಲ್ಲೆ, ಹತ್ಯೆ ಮಾಡುವುದು ತೀರಾ ಖಂಡನಾರ್ಹವೇ ಆಗಿದೆ. ಸದ್ಯ ಬೆಳಕಿಗೆ ಬಂದು ಸುದ್ದಿಯಾಗಿರುವುದು ಧನ್‌ಬಾದ್ ಮತ್ತು ಫತೇಪುರ್‌ನ ಘಟನೆಗಳು ಉತ್ತಮ ವ್ಯವಸ್ಥೆಗೆ ಹೇಳಿಸಿದ್ದಂತೂ ಅಲ್ಲ. ಇಂಥ ಕಿಡಿಗೇಡಿ ಕೃತ್ಯಗಳನ್ನು ಮರುಕಳಿಸದಂತೆ ಮಾಡಲು ಆಯಾ ರಾಜ್ಯ ಸರಕಾರಗಳು ಮತ್ತು ನ್ಯಾಯಾಂಗ ವ್ಯವಸ್ಥೆ ಕ್ಷಿಪ್ರವಾಗಿ ಕ್ರಮ ಕೈಗೊಳ್ಳಬೇಕಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸ್ವಯಂ ಪ್ರೇರಿತರಾಗಿ ಈ ಘಟನೆಯನ್ನು ವಿಚಾರಣೆ ನಡೆಸಲು ತೀರ್ಮಾನಿಸಿದ್ದು ಸ್ವಾಗತಾರ್ಹವೇ. ಒಂದು ವಾರದ ಒಳಗಾಗಿ ಘಟನೆಯ ಬಗ್ಗೆ ವರದಿ ಸಲ್ಲಿಸಲು ಝಾರ್ಖಂಡ್ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ. ವರದಿ ಪರಿಶೀಲನೆ ಬಳಿಕ ವಿಚಾರಣೆ ನಡೆಸಲಾಗುತ್ತದೆ ಎಂದು ಮುಖ್ಯ ನ್ಯಾಯ ಮೂರ್ತಿಗಳು ಹೇಳಿದ್ದಾರೆ.
ಯಾವ ಕಾರಣಕ್ಕಾಗಿ ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆ ನಡೆದಿದೆ ಎನ್ನುವುದು ಖಚಿತವಾಗಿಲ್ಲ. ಇಬ್ಬರನ್ನು ಬಂಧಿಸಲಾಗಿದ್ದರೂ ಅವರೇ ಈ ಕೃತ್ಯವೆಸಗಿದ್ದಾರೆಯೋ ಇಲ್ಲವೋ ಎನ್ನುವುದು ಸದ್ಯಕ್ಕೆ ನಿಗೂಢವೇ ಆಗಿದೆ. ಹತ್ಯೆಗೀಡಾಗಿರುವ ನ್ಯಾಯಾಧೀಶರು ಹಾಲಿ ತಿಂಗಳಲ್ಲಿ ಇದುವರೆಗೆ 36 ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ.
ಆ ಪೈಕಿ 34 ಜಾಮೀನು ಅಥವಾ ನಿರೀಕ್ಷಣ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳಾಗಿದ್ದವು. ಅದರಲ್ಲಿ ಕೆಲವು ಕಲ್ಲಿದ್ದಲು ಕಳ್ಳಸಾಗಣೆಯ ಪ್ರಕರಣ, ಕೊಲೆಯ 6 ಪ್ರಕರಣಗಳಿದ್ದವು. ಝಾರ್ಖಂಡ್‌ನ ಶಾಸಕರೊಬ್ಬರ ನಿಕಟವರ್ತಿಯೊಬ್ಬರ ಕೊಲೆ ಪ್ರಕರಣ ವಿಚಾರಣೆಯನ್ನೂ ಅವರು ನಡೆಸಿದ್ದರು.
ಫತೇಪುರ ಜಿಲ್ಲಾ ನ್ಯಾಯಾಧೀಶ ಮೊಹಮ್ಮದ್ ಅಹ್ಮದ್ ಖಾನ್ ಹತ್ಯೆ ಯತ್ನ ಕೂಡ ಕಳವಳಕಾರಿ. ಅವರು ದೂರಿನಲ್ಲಿ ಉಲ್ಲೇಖೀಸಿದ ಪ್ರಕಾರ 2020ರ ಡಿಸೆಂಬರ್‌ನಲ್ಲಿ ಯುವಕನಿಗೆ ಜಾಮೀನು ನೀಡದೇ ಇದ್ದ ಕಾರಣಕ್ಕೆ ಬೆದರಿಕೆಯ ಕರೆಗಳೂ ಬರುತ್ತಿವೆ ಎಂದು ಹೇಳಿದ್ದರು. ತಮಗೆ ಅನುಕೂಲವಾಗಿ ತೀರ್ಪು ನೀಡಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಕೋರ್ಟ್ ನ್ಯಾಯಾಧೀಶರನ್ನು ಕೊಲ್ಲುವವರೆಗೆ ಹೋಗುತ್ತಾರೆ ಎಂದರೆ ಅದಕ್ಕೆ ಕ್ಷಿಪ್ರಾತಿ ಕ್ಷಿಪ್ರವಾಗಿ ಪೂರ್ಣ ವಿರಾಮ ಹಾಕಲೇ ಬೇಕು.
ನ್ಯಾಯ ದೇವತೆಯ ಪ್ರತಿನಿಧಿ ಎಂದರೆ ನ್ಯಾಯಾಧೀಶರು ಎಂಬುದು ನಮ್ಮ ದೇಶದಲ್ಲಿನ ನಂಬಿಕೆ. ಅಂಥ ನಂಬಿಕೆಯ ಮೇಲೆಯೇ ಘಾಸಿಗೊಳಿಸುವಂಥ 2 ಘಟನೆಗಳು ಸಂಭವಿಸಿವೆ. ಅದನ್ನು ಎಸಗಿದವರು ಕೂಡಲೇ ಕಾನೂನಿನ ಅನ್ವಯ ಶಿಕ್ಷೆಗೆ ಒಳಗಾಗಲಿ ಎನ್ನುವುದೇ ಆಶಯ. ಹಾಗೆಯೇ ನ್ಯಾಯ ಸ್ಥಾನದಲ್ಲಿರುವವರಿಗೆ ಗರಿಷ್ಠ ಮಟ್ಟದ ಭದ್ರತೆ ಕೊಡಬೇಕಾದದ್ದೂ ಆಡಳಿತದಲ್ಲಿರುವವರ ಜವಾಬ್ದಾರಿ ಕೂಡ.