ಹರ್ಯಾಣ: ನೂಹ್ ಜಿಲ್ಲೆಯಲ್ಲಿ ಧಾರ್ಮಿಕ ಮೆರವಣಿಗೆ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಉದ್ರಿಕ್ತ ಗುಂಪೊಂದು ಹೆಚ್ಚುವರಿ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಹಾಗೂ ಅವರ 3 ವರ್ಷದ ಮಗಳು ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ಹಚ್ಚಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ʼಗಗನʼದಲ್ಲಿ ʼಗಾಳಿಪಟʼ ಹಾರಿಸಿದ ಅನಂತ್ ನಾಗ್ ಸಿನಿ ಪಯಣಕ್ಕೆ 50ರ ಸಂಭ್ರಮ: ಶುಭಕೋರಿದ ನಟರು
ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಅಂಜಲಿ ಜೈನ್ ಹಾಗೂ ಆಕೆಯ ಮಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದಿಢೀರನೆ ಅಡ್ಡಗಟ್ಟಿದ ಗುಂಪು ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಿರುವುದಾಗಿ ನೂಹ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ವೇಳೆ ಜಡ್ಜ್ ಅಂಜಲಿ ಹಾಗೂ ಮಗಳು ನೂಹ್ ನ ಹಳೇ ಬಸ್ ನಿಲ್ದಾಣ ಸಮೀಪ ಇರುವ ಅಂಗಡಿಯೊಂದರಲ್ಲಿ ಆಶ್ರಯ ಪಡೆದಿದ್ದು, ನಂತರ ಕೆಲವು ವಕೀಲರು ಅವರು ಸುರಕ್ಷಿತವಾಗಿ ಮನೆಗೆ ತಲುಪಿಸಿರುವುದಾಗಿ ವರದಿ ವಿವರಿಸಿದೆ.
ನೂಹ್ ನ ಎಸಿಜೆಂಎ ಕೋರ್ಟ್ ನಲ್ಲಿ ಪ್ರೊಸೆಸರ್ ಸರ್ವರ್ ಆಗಿ ಕಾರ್ಯನಿರ್ವಹಿಸುತ್ತಿರುವ ಟೆಕ್ ಚಂದ್ ಎಂಬವರು ನೀಡಿರುವ ದೂರಿನ ಆಧಾರದ ಮೇಲೆ ನೂಹ್ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿಕೊಂಡಿರುವುದಾಗಿ ವರದಿ ಹೇಳಿದೆ.
ಸೋಮವಾರ ಮಧ್ಯಾಹ್ನ 1ಗಂಟೆ ಹೊತ್ತಿಗೆ ಜಡ್ಜ್ ಅಂಜಲಿ ಹಾಗೂ ಮೂರು ವರ್ಷದ ಪುತ್ರಿ, ಗನ್ ಮ್ಯಾನ್ ಸಿಯಾರಾಮ್ ಜತೆಯಲ್ಲಿ ತಮ್ಮ ಕಾರಿನಲ್ಲಿ ಎಸ್ ಕೆಎಂ ಕಾಲೇಜಿನಲ್ಲಿ ಔಷಧ ಖರೀದಿಸಲು ತೆರಳಿದ್ದರು. ನಂತರ ಮೆಡಿಕಲ್ ಕಾಲೇಜಿನಿಂದ ವಾಪಸ್ ಬರುವ ವೇಳೆ ದೆಹಲಿ-ಅಲ್ವಾರ್ ರಸ್ತೆ ಸಮೀಪದ ಹಳೇ ಬಸ್ ನಿಲ್ದಾಣದಲ್ಲಿ 100-150 ಜನರ ಗುಂಪು ಇವರ ಕಾರಿನ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿರುವುದಾಗಿ ವರದಿ ತಿಳಿಸಿದೆ.
ವಿಶ್ವಹಿಂದೂ ಪರಿಷತ್ ಮೆರವಣಿಗೆಯನ್ನು ತಡೆಯಲು ಯತ್ನಿಸಿದ ಪರಿಣಾಮ ನೂಹ್ ನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇದು ಗುರುಗ್ರಾಮಕ್ಕೂ ವ್ಯಾಪಿಸಿತ್ತು. ಘಟನೆಯಲ್ಲಿ ಇಬ್ಬರು ಹೋಮ್ ಗಾರ್ಡ್ಸ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದರು.