ತಿ.ನರಸೀಪುರ: ಮುಂಬರುವ 2018 ರ ವಿಧಾನ ಸಭಾ ಚುನಾವಣೆಯಲ್ಲಿ ತಿ.ನರಸೀಪುರ ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲು ರೈತ ಸಂಘದ ಸದಸ್ಯರು ತೀರ್ಮಾನಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಆಲಗೂಡು ಮಹದೇವ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ರೈತರ ಸಭೆಯಲ್ಲಿ ರೈತರು ತೀರ್ಮಾನ ತೆಗೆದುಕೊಂಡರು. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿ ಜನ, ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ಸಮಸ್ಯೆ ಕಾಡತೊಡಗಿದೆ.
ರೈತರ ಬೆಳೆಗಳಿಗೆ ನೀರು ಸಿಗದೇ ರೈತರು ನಷ್ಟ ಅನುಭವಿಸಿ ಸಂಕಷ್ಟಕ್ಕಿಡಾಗಿರುವ ಸಂದರ್ಭದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ರೈತರ ಬೆಳೆಗಳಿಗೆ ನೀರು ಹರಿಸಿ ರೈತರ ಹಿತ ಕಾಪಾಡದೇ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ದೂರಿದರು.
ಇದರ ಜೊತೆಗೆ ವಿರೋಧ ಪಕ್ಷದಲ್ಲಿರುವ ಬಿಜೆಪಿ ಸರ್ಕಾರ ಕೂಡ ರೈತರ ಬೆಂಬಲಕ್ಕೆ ನಿಲ್ಲುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಜೆಡಿಎಸ್ ರಾಜಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಲು ಮುಖಂಡರು ತೀರ್ಮಾನಿಸಿದರು.
ಸಭೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಜಿ.ಶಿವಪ್ರಸಾದ್, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ರೈತ ಮುಖಂಡರಾದ ಅತ್ತಹಳ್ಳಿ ಶಿವನಂಜು, ಕಳ್ಳಿಪುರ ಮಹದೇವಸ್ವಾಮಿ, ಚಿದರವಳ್ಳಿ ನಾಗೇಂದ್ರ, ತಲಕಾಡು ದಿನೇಶ್, ವೆಂಕಟೇಶ್, ಕುರುಬೂರು ಶಾಂತರಾಜ್ ಇದ್ದರು.