ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿನಂತೆ ಡಾ.ಚಿದಾನಂದಮೂರ್ತಿಯವರು ಕನ್ನಡ ಕಟ್ಟುವ ಕಾಯಕವೇ ಕೈಲಾಸ ಎಂದು ನಂಬಿ ಬಹು ಎತ್ತರಕ್ಕೆ ಬೆಳೆದವರು. ಅಸಂಖ್ಯಾತ ಅಭಿಮಾನಿ, ಗೆಳೆಯರನ್ನು ಸಂಪಾದಿಸಿದವರು. ಸಂಶೋಧನೆ ಕ್ಷೇತ್ರದ ಬಹುದೊಡ್ಡ ಸಾಧಕ.
ಕನ್ನಡಕ್ಕೆ ಧಕ್ಕೆ ಬಂದಾಗ, ಇತಿಹಾಸ ತಿರುಚುವ ಕೆಲಸ ನಡೆಯುತ್ತಿದೆ ಎಂದೆನಿಸಿದಾಗ, ಕನ್ನಡಕ್ಕೆ ಸಂಬಂಧಿಸಿದ ಪುರಾತನ ಶಾಸನ, ವಿಗ್ರಹ, ಸ್ಮಾರಕದ ಸಂಶೋಧನೆಯಾದಾಗ, ಟಿಪ್ಪು ಜಯಂತಿ ವಿವಾದ ಕೇಳಿ ಬಂದಾಗ ಬೆಂಗಳೂರು ಪ್ರಸ್‌ಕ್ಲಬ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿದಾನಂದಮೂರ್ತಿಯವರು ಸ್ವತಃ ಕೈಯಾರೆ ಬರೆದಿದ್ದ ಹೇಳಿಕೆ ಕೊಡುತ್ತಿದ್ದರು. ಒಮ್ಮೊಮ್ಮೆ ಪ್ರತಿಗಳು ಸಾಕಾಗದಿದ್ದಾಗ ಮತ್ತೆ ಕೈಯಲ್ಲೇ ಬರೆದು ಪತ್ರಿಕಾ ಕಚೇರಿಗಳಿಗೆ ಕಳುಹಿಸಿದ್ದೂ ಇದೆ.
ಬಿಳಿ ಬಣ್ಣದ ಜುಬ್ಬಾ, ಪೈಜಾಮಾ, ಊರುಗೋಲು, ಚಳಿ ಇದ್ದರೆ ಸ್ವೆಟರ್, ಕುಲಾಯಿ ಹಾಕಿಕೊಂಡು ಬರುತ್ತಿದ್ದ ಚಿದಾನಂದಮೂರ್ತಿಯವರು ಒಂದು ಬ್ಯಾಗ್ ನೇತಾಕಿಕೊಂಡು ಅದರಲ್ಲಿ ತಾವು ಮಾತನಾಡುವ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇರಿಸಿಕೊಂಡಿರುತ್ತಿದ್ದರು. ತಾವು ಪ್ರತಿಪಾದಿಸುತ್ತಿದ್ದ ವಿಚಾರಕ್ಕೆ ನಿಷ್ಠರಾಗಿರುತ್ತಿದ್ದರು. ಹೇಳಿಕೆಗೆ ಬದ್ಧರಾಗುತ್ತಿದ್ದರು.
ಕನ್ನಡದ ವಿಚಾರಗಳಷ್ಟೇ ಅಲ್ಲದೆ ಲಿಂಗಾಯಿತ ಪ್ರತ್ಯೇಕ ಧರ್ಮ, ಟಿಪ್ಪು ಜಯಂತಿ, ಶಾಲಾ ಪಠ್ಯಕ್ರಮ ವಿಚಾರಗಳಲ್ಲೂ ತನ್ನ ಅನಿಸಿಕೆ- ಅಭಿಪ್ರಾಯ ಯಾವುದೇ ಅಂಜಿಕೆ ಇಲ್ಲದೆ ಮುಲಾಜಿಗೆ ಒಳಗಾಗದೆ ಖಡಕ್ ಆಗಿ ಹೇಳುತ್ತಿದ್ದರು. ಅಭಿಮಾನಿಗಳು, ಶಿಷ್ಯರು ಎಷ್ಟೇ ಒತ್ತಾಯ ಮಾಡಿದರೂ ಚಿ.ಮೂ ಅವರು ಕೊನೆವರೆಗೂ ಮೊಬೈಲ್ ಬಳಸಲೇ ಇಲ್ಲ.
ತಮ್ಮ ಸಂಪರ್ಕ ಮಾಡಬೇಕಾದರೆ ಹೇಗೆ ಎಂದು ಅವರನ್ನು ಕೇಳಿದರೆ, ಕನ್ನಡದಲ್ಲೇ ಸೊನ್ನೆ ಎಂಟು ಸೊನ್ನೆ ಎರಡು ಮೂರು ಮೂರು ಸೊನ್ನೆ ಸೊನ್ನೆ ಆರು ಎಂಟು ಏಳು (080-23300687) ಎಂದು ಹೇಳುತ್ತಿದ್ದರು. ಯಾವುದಾದರೂ ವಿಷಯದ ಬಗ್ಗೆ ಪ್ರತಿಕ್ರಿಯೆ, ಅಭಿಪ್ರಾಯ, ಸಂದರ್ಶನ ನೀಡಲು ಕೇಳಿದಾಗ, ಎಷ್ಟು ಹೊತ್ತು ಮಾತನಾಡಲಿ, ಎರಡು ನಿಮಿಷ, ಐದು ನಿಮಿಷ, ಹತ್ತು ನಿಮಿಷ, ಇಪ್ಪತ್ತು ನಿಮಿಷ ಎಂದು ಕೇಳುತ್ತಿದ್ದರು.
ನಾನು, ಚಿದಾನಂದ ಮೂರ್ತಿ, ಸಂಶೋಧಕ….: ಒಮ್ಮೆ ಪ್ರಸ್‌ಕ್ಲಬ್‌ನಲ್ಲಿ ಯುವ ಪತ್ರಕರ್ತರೊಬ್ಬರು ಡಾ.ಚಿದಾನಂದಮೂರ್ತಿ ಅವರ ಬಗ್ಗೆ ತಿಳಿಯದೆ ನಿಮ್ಮನ್ನು ಪರಿಚಯ ಮಾಡಿಕೊಳ್ಳಿ ಎಂದು ಹೇಳಿಬಿಟ್ಟರು. ಅಲ್ಲಿದ್ದ ಇತರೆ ಹಿರಿಯ ಪತ್ರಕರ್ತರು ಏನಪ್ಪಾ ನಿನಗೆ ಚಿಮೂ ಗೊತ್ತಿಲ್ಲವಾ? ಎಂದು ದಬಾಯಿಸಿದರು.
ಆದರೆ, ಚಿದಾನಂದಮೂರ್ತಿ ಅವರು, ನಾನು ಚಿದಾನಂದಮೂರ್ತಿ, ಸಂಶೋಧಕ, ಕನ್ನಡ ಹೋರಾಟಗಾರ ಎಂದು ಸಮಾಧಾನದಿಂದಲೇ ಪರಿಚಯಿಸಿಕೊಂಡಿದ್ದರು. ಆ ನಂತರದ ಪ್ರತಿ ಪತ್ರಿಕಾಗೋಷ್ಠಿಯಲ್ಲೂ ಮೊದಲಿಗೆ ತಾವೇ ಸ್ವಯಂ ಪ್ರೇರಿತವಾಗಿ ನಾನು ಚಿದಾನಂದಮೂರ್ತಿ ಸಂಶೋಧಕ ಹಾಗೂ ಕನ್ನಡ ಹೋರಾಟಗಾರ ಎಂದು ಪರಿಚಯಿಸಿಕೊಳ್ಳಲು ಪ್ರಾರಂಭಿಸಿದರು.
* ಎಸ್. ಲಕ್ಷ್ಮಿನಾರಾಯಣ