ಹೈದರಾಬಾದ್: ಜೂ.ಎನ್ ಟಿಆರ್ (Jr.NTR) ಅವರ ʼದೇವರʼ (Devara) ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಸಾವಿರಾರು ಥಿಯೇಟರ್‌ನಲ್ಲಿ ಅದ್ಧೂರಿಯಾಗಿ ತೆರೆಕಂಡ ʼದೇವರʼಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಭರ್ಜರಿಯಾಗಿಯೇ ಗಳಿಕೆ ಕಂಡಿದೆ. ಮೊದಲ ದಿನ ಸಿನಿಮಾ 77 ಕೋಟಿ ರೂ.ಗಳಿಕೆ ಕಂಡಿದೆ. ವೀಕೆಂಡ್‌ನಲ್ಲೂ ಹೆಚ್ಚಿನ ಗಳಿಕೆ ಆಗುವ ನಿರೀಕ್ಷೆಯಿದೆ.
77 ಕೋಟಿ ರೂ.ನಲ್ಲಿ ತೆಲುಗು ಭಾಷೆಯಲ್ಲಿ 68.6 ಕೋಟಿ ರೂ. ಹಿಂದಿಯಲ್ಲಿ 7 ಕೋಟಿ ರೂ. ಕನ್ನಡದಲ್ಲಿ 30 ಲಕ್ಷ ರೂ. ತಮಿಳಿನಲ್ಲಿ 80 ಲಕ್ಷ ರೂ. ಹಾಗೂ ಮಲಯಾಳಂನಲ್ಲಿ 30 ಲಕ್ಷ ರೂ. ಗಳಿಸಿದೆ.
ಜೂ.ಎನ್ ಟಿಆರ್ ಅವರ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಒಂದೊಳ್ಳೆ ಕಥೆ ಹಾಗೂ ಚಿತ್ರಕಥೆಯನ್ನು ನೀಡುವಲ್ಲಿ ಚಿತ್ರ ವಿಫಲವಾಗಿದೆವೆಂದು ಹೇಳಲಾಗುತ್ತಿದೆ.
ತಾರಕ್ ಅವರಿಗೆ ಅಭಿಮಾನಿಗಳು ಹೆಚ್ಚಿದ್ದಾರೆ. ಅವರ ʼದೇವರʼಕ್ಕಾಗಿ ಸಾಲಾಗಿ ನಿಂತು ಟಿಕೆಟ್ ಖರೀದಿಸಿ ಸಿನಿಮಾವನ್ನು ಅಭಿಮಾನಿಗಳು ವೀಕ್ಷಿಸಿದ್ದಾರೆ. ಆದರೆ ಸಿನಿಮಾ ನೋಡುತ್ತಿರುವಾಗಲೇ ಅವರ ಅಭಿಮಾನಿಯೊಬ್ಬರು ನಿಧನರಾಗಿರುವ ಘಟನೆ ನಡೆದಿದೆ.
ಮಸ್ತಾನ್ ವಲಿ (35) ಎನ್ನುವ ಅಭಿಮಾನಿಯೊಬ್ಬ ಅಪ್ಸರಾ ಥಿಯೇಟರ್‌ನಲ್ಲಿ ʼದೇವರʼ ಸಿನಿಮಾ ನೋಡುತ್ತಿರುವಾಗಲೇ ಥಿಯೇಟರ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಶುಕ್ರವಾರ(ಸೆ.27ರಂದು) ಈ ಘಟನೆ ನಡೆದಿದ್ದು, ಮಸ್ತಾನ್ ವಲಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಪರೀಕ್ಷಿಸಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆವೆಂದು ಹೇಳಿದ್ದಾರೆ.
ಸಂಭ್ರಮದಲ್ಲಿ ಸಿನಿಮಾ ನೋಡುತ್ತಿದ್ದಾಗಲೇ ಈ ರೀತಿಯ ಘಟನೆಯೊಂದು ನಡೆದಿರುವುದು ಜೂ.ಎನ್ ಟಿಆರ್ ಅವರ ಅಭಿಮಾನಿಗಳಿಗೆ ಆಘಾತ ನೀಡಿದೆ.
ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ಕೊರಟಾಲ ಶಿವ (Kortala Siva) ನಿರ್ದೇಶನದ ʼದೇವರ ಪಾರ್ಟ್ -1ʼ ನಲ್ಲಿ ಜೂ.ಎನ್ ಟಿಆರ್, ಜಾಹ್ನವಿ ಕಪೂರ್, ಸೈಫ್ ಅಲಿಖಾನ್ ಮುಂತಾದವರು ನಟಿಸಿದ್ದಾರೆ.