ಪತ್ರಿಕಾಭವನ: ಪತ್ರಕರ್ತರಿಗೆ ವೃತ್ತಿಯಷ್ಟೇ ಅಧ್ಯಯನವೂ ಪ್ರಾಮುಖ್ಯವಾಗುತ್ತದೆ. ಹೆಚ್ಚು ಅಧ್ಯಯನದಲ್ಲಿ ತೊಡಗಿಸಿದಷ್ಟೂ ಪತ್ರಕರ್ತರಿಂದ ನಿಖರ ಹಾಗೂ ಉಪಯುಕ್ತ ಮಾಹಿತಿಗಳನ್ನು ನೀಡಲು ಸಾಧ್ಯ ಎಂದು ಮೂಡಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.
ಹಿರಿಯ ಪತ್ರಕರ್ತ ಪಿ.ಬಿ. ಹರೀಶ್ ರೈ ಬರೆದ ‘ರಾಜ ನೋಟ’ ಕೃತಿಯನ್ನು ನಗರದ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಿ ಅವರು ಶುಕ್ರವಾರ ಮಾತನಾಡಿದರು.
ಚುನಾವಣೆ, ರಾಜಕೀಯ, ರಾಜಕಾರಣಿಗಳ ಇತಿಹಾಸ ದಾಖಲೀಕರಣ ಮಾಡುವವರ ಸಂಖ್ಯೆ ತೀರಾ ಕಡಿಮೆಯಿದೆ. ಅಂತಹದರಲ್ಲಿ 1952ರಿಂದ 2014ರ ತನಕದ ರಾಜಕೀಯ-ಚುನಾವಣಾ ನೋಟವನ್ನು ಪುಸ್ತಕ ರೂಪದಲ್ಲಿ ದಾಖಲಿಸುವುದು ಸವಾಲಿನ ಕೆಲಸ. ಇದೀಗ ಜಿಲ್ಲೆಯ ಸಮಗ್ರ ರಾಜಕೀಯ-ಚುನಾವಣೆಯ ಚಿತ್ರಣ ‘ರಾಜನೋಟ’ ಕೃತಿ ಒಳಗೊಂಡಿದ್ದು, ಕರಾವಳಿಯ ರಾಜಕೀಯಕ್ಕೆ ಸಂಬಂಧಿಸಿದ ಆಕರ ಗ್ರಂಥವಾಗಿಯೂ ಇದನ್ನು ಬಳಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಮಾಹಿತಿ ಯೋಗ್ಯ ಪುಸ್ತಕ
ಕಾರ್ಯಕ್ರಮ ಉದ್ಘಾಟಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಜಿಲ್ಲೆಯ ರಾಜಕೀಯ ಚಿತ್ರಣವನ್ನೊಳಗೊಂಡ ಮಾಹಿತಿಯೋಗ್ಯ ಪುಸ್ತಕ ಇದಾಗಿದೆ ಎಂದರು. ಉದಯವಾಣಿ ಸುದ್ದಿ ವಿಭಾಗ ಮುಖ್ಯಸ್ಥ ಮನೋಹರ ಪ್ರಸಾದ್ ಶುಭ ಹಾರೈಸಿದರು. ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕೆ. ಆನಂದ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
ಪ್ರಕಾಶಕ ಆಕೃತಿ ಆಶಯ ಪಬ್ಲಿಕೇಷನ್ಸ್ ನ ಕಲ್ಲೂರು ನಾಗೇಶ ಪ್ರಸ್ತಾವನೆಗೈದರು. ಪಿ.ಬಿ. ಹರೀಶ್ ರೈ ಸ್ವಾಗತಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರ.ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ವಂದಿಸಿದರು. ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.