Advertisement

ಅಧಿಕಾರಿಗಳಿಗಿಂತ ಪತ್ರಕರ್ತರ ಜವಾಬ್ದಾರಿ ಹೆಚ್ಚು: ಗುರುಕರ್

09:29 AM May 11, 2022 | Team Udayavani |

ಕಲಬುರಗಿ: ಸಮಾಜದಲ್ಲಿ ಸರ್ಕಾರದ ಅಧಿಕಾರಿಗಳಿಗಿಂತ ಪತ್ರಕರ್ತರ ಜವಾಬ್ದಾರಿ ಮತ್ತು ಸಾಮಾಜಿಕ ಕಳಕಳಿ ಹೆಚ್ಚು. ಸರ್ಕಾರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಅವರು ಅಧಿಕಾರಿಗಳಷ್ಟೇ ಎಚ್ಚರಿಕೆ ವಹಿಸುತ್ತಾರೆ ಮತ್ತು ವಹಿಸಬೇಕು ಎಂದು ಜಿಲ್ಲಾಧಿಕಾರಿ ಯಶವಂತ್‌ ಜಿ.ಗುರುಕರ್‌ ಹೇಳಿದರು.

Advertisement

ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾ ಧಿಕಾರಿಗಳ ಅಧಿಕಾರ ಸ್ವೀಕಾರ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತ ಸಮಾಜದಲ್ಲಿನ ಸಮಸ್ಯೆಗಳಿಗೆ ಬೆಳಕು ಚೆಲ್ಲುವಂತಹ ಕೆಲಸ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಆತುರತೆ ಸಲ್ಲದು. ತುಸು ಏರುಪೇರಾದರೂ, ಮಾಹಿತಿ ತಪ್ಪಾದರೂ ಅದು ಸಮಾಜಕ್ಕೆ ಹೊಡೆತ ಬೀಳುವಂತಾಗುತ್ತದೆ ಎಂದರು.

ಇಸ್ರೇಲ್‌ ದಾಳಿಯಲ್ಲಿನ ಸಾವು, ನೋವುಗಳಿಂತಲೂ ನಮ್ಮ ದೇಶದಲ್ಲಿ ನಡೆಯುವ ಕೃಷಿ, ನೀರಾವರಿ ಹಾಗೂ ಹಲವು ಕ್ಷೇತ್ರಗಳಲ್ಲಿ ಬೆಳವಣಿಗೆ, ಸಾಧನೆ, ಕೊರತೆಯೂ ಮುಖಪುಟದ ಸುದ್ದಿಗಳಾಗಿರುತ್ತವೆ. ಇದು ಸಕಾರಾತ್ಮಕವೂ ಮತ್ತು ಮಾಧ್ಯಮಗಳ ಹೊಣೆಗಾರಿಕೆ ತೋರಿಸುತ್ತದೆ ಎಂದು ಹೇಳಿದರು.

ಪತ್ರಕರ್ತರ ಸಂಘ ಹಮ್ಮಿಕೊಂಡಿರುವ ಮುಂದಿನ ಯೋಜನೆಗಳಿಗೆ ಸಹಕಾರ ನೀಡಲಾಗುವುದು. ಸಮಾಜದ ಸ್ವಾಸ್ಥ್ಯ ಕಾಪಾಡುವ ಪತ್ರಕರ್ತರಿಗೆ ಆರೋಗ್ಯ ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದರು.

Advertisement

ನಗರ ಪೊಲೀಸ್‌ ಆಯುಕ್ತ ಡಾ| ವೈ.ಎಸ್‌.ರವಿಕುಮಾರ ಮಾತನಾಡಿ, ಪೊಲೀಸರು ಮತ್ತು ಪತ್ರಕರ್ತರು ಇಬ್ಬರೂ ಬೇರೆ ಏನಲ್ಲ. ಉಭಯತರು ಸಮಾಜದ ಜನರ ಸೌಖ್ಯ ಮತ್ತು ಭದ್ರತೆಗಾಗಿ ಬಡಿದಾಡುತ್ತಾರೆ. ಹಲವಾರು ಸಂದರ್ಭದಲ್ಲಿ ಪತ್ರಕರ್ತ ನಿಖರವಾದ ಮಾಹಿತಿ ಪಡೆಯಲು ಸಂಪರ್ಕಿಸುತ್ತಾರೆ. ಪರಸ್ಪರರು ಸಹಕಾರಿಂದ ಸಮಾಜದ ಆರೋಗ್ಯ ಮತ್ತು ಜನರ ಒಳಿತು ಬಯಸೋಣ ಎಂದರು.

ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಅಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ನಮ್ಮ ಮುಂದೆ ಹಲವಾರು ಸವಾಲುಗಳಿವೆ. ಎಲ್ಲವನ್ನು ನಾವು ಎದುರಿಸಿಕೊಂಡು ಮುನ್ನಡೆಯಬೇಕಿದೆ. ಈಗಂತೂ ನಮ್ಮ ಸಂಘ ಇನ್ನಷ್ಟು ನಿಖರವಾಗಿ ಕೆಲಸ ಮಾಡುತ್ತಿದ್ದು, ಸರ್ಕಾರದಿಂದ ಪತ್ರಕರ್ತರಿಗೆ ಸಿಗಬೇಕಾಗಿರುವ ಸೌಕರ್ಯಗಳನ್ನು ಕೊಡಿಸಲು ಮತ್ತು ಕೆಲಸದ ಹೊತ್ತಿನಲ್ಲಿ ನಡೆಯುವ ಅವಘಡಗಳನ್ನು ತಪ್ಪಿಸಲು ಸಂಘ ಪ್ರಯತ್ನಿಸುತ್ತಿದೆ ಎಂದರು.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ನೂತನ ಪದಾ ಧಿಕಾರಿಗಳನ್ನು ಸನ್ಮಾನಿಸಿ, ಪ್ರಮಾಣ ಪತ್ರ ವಿತರಿಸಿ, ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧೇಶ್ವರಪ್ಪ, ಮಾಧ್ಯಮ ಅಕಾಡೆಮಿ ಸದಸ್ಯ ದೇವಿಂದ್ರಪ್ಪ ಕಪನೂರ, ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್‌ ಠಾಕೂರ, ಆಕಾಶವಾಣಿಯ ಸದಾನಂದ ಪೆರ್ಲ, ಪತ್ರಕರ್ತರಾದ ವಾದಿರಾಜ ವ್ಯಾಸಮುದ್ರ, ಸದಾನಂದ ಜೋಶಿ, ಶಂಕರ ಕೋಡ್ಲಾ, ರಾಮಕೃಷ್ಣ ಬಡಶೇಷಿ, ಜಯತೀರ್ಥ ಪಾಟೀಲ, ಮನೋಜಕುಮಾರ ಗುದ್ದಿ, ದೇವಿಂದ್ರಪ್ಪ ಅವಂಟಿ, ಶರಣು ಜಿಡಗಾ, ಸತೀಶ ಜೇವರ್ಗಿ, ಡಾ| ಜಗದೀಶ ಸಿರಿವಾರ, ಬಿ.ವಿ.ಚಕ್ರವರ್ತಿ, ಅಶೋಕ ಕಪನೂರ, ಅಜೀಜುಲ್ಲ ಸರಮಸ್ತ್, ಶರಣಬಸಪ್ಪ ಅನವಾರ, ಸುರೇಶ ಬಡಿಗೇರ ಇತರರಿದ್ದರು.

ಶಿವರಂಜನ ಸತ್ಯಂಪೇಟ ಸ್ವಾಗತಿಸಿದರು. ಸಂಗಮನಾಥ ರೇವತಗಾಂವ ನಿರೂಪಿಸಿದರು. ಅರುಣ ಕದಮ್‌ ವಂದಿಸಿದರು.

ಸಾಮಾಜಿಕ ಜಾಲತಾಣದಲ್ಲಿ ನಕಲಿ ಪತ್ರಕರ್ತರಿಗೆ ನಿಯಂತ್ರಣ ಹೇರುವ, ನಿಜವಾದ ಪತ್ರಕರ್ತರಿಗೆ ಸೇತುವೆಯಾಗಿ ಕೆಲಸ ಮಾಡುವ ಅನಿವಾರ್ಯತೆ ಸದ್ಯ ಇದೆ. ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಪಡೆದು, ನಿಖರ ವರದಿ ನೀಡಬೇಕು. ಇದು ಎಲ್ಲರಿಗೂ ಒಳ್ಳೆಯದು. ಡಾ| ವೈ.ಎಸ್‌.ರವಿಕುಮಾರ, ಪೊಲೀಸ್ಆಯುಕ್ತ

ಪತ್ರಕರ್ತರ ಸಂಘ ಇನ್ನು ಹೊಸ ಉಮೇದಿನೊಂದಿಗೆ ಚಲಿಸಲಿದೆ. ಗ್ರಂಥಾಲಯ, ಆಟೋಟ ಮತ್ತು ಕ್ರೀಡಾ ಸಲಕರಣೆ ವ್ಯವಸ್ಥೆ ಮತ್ತು ಪತ್ರಕರ್ತ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಲಾಗುವುದು. ಸಹಾಯಧನ ನಿಧಿ ಹೆಚ್ಚಳ ಮತ್ತು ಪತ್ರಕರ್ತರ ವಿಕಾಸಕ್ಕಾಗಿ ಬೇಕಾಗುವ ಎಲ್ಲ ಹೆಜ್ಜೆಗಳನ್ನು ದೃಢವಾಗಿ ಮತ್ತು ಪಾರದರ್ಶಕವಾಗಿ ಇಡಲಾಗುವುದು. ಬಾಬುರಾವ್ಯಡ್ರಾಮಿ, ಜಿಲ್ಲಾಧ್ಯಕ್ಷ, ಪತ್ರಕರ್ತರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next