Advertisement

ಪತ್ರಕರ್ತ ಸಂತೋಷ್‌ ತಮ್ಮಯ್ಯ ಸೆರೆ; ಜಾಮೀನಿನ ಮೇಲೆ ಬಿಡುಗಡೆ

07:18 AM Nov 14, 2018 | |

ಮಡಿಕೇರಿ: ಇಸ್ಲಾಂ ಧರ್ಮ ಹಾಗೂ ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದಾರೆಂಬ ಆರೋಪದಡಿ ಅಂಕಣಕಾರ, ಪತ್ರಕರ್ತ ಮಾಣಿಪಂಡ ಸಂತೋಷ್‌ ತಮ್ಮಯ್ಯ ಅವರನ್ನು ಗೋಣಿಕೊಪ್ಪ ಪೊಲೀಸರು ಮಂಗಳವಾರ ಬಂಧಿಸಿ, ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಳಿಕ, ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ.

Advertisement

ನ.5ರಂದು ಗೋಣಿಕೊಪ್ಪದಲ್ಲಿ ಪ್ರಜ್ಞಾ ಕಾವೇರಿ ಸಂಘಟನೆ ಆಯೋಜಿಸಿದ್ದ “ಟಿಪ್ಪು ಕರಾಳ ಮುಖಗಳ ಅನಾವರಣ’ ಕಾರ್ಯಕ್ರಮದಲ್ಲಿ ಸಂತೋಷ್‌ ಅವರು ಇಸ್ಲಾಂ ಧರ್ಮ ಹಾಗೂ ಪ್ರವಾದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಈ ವರದಿಯನ್ನಾಧರಿಸಿ ಸಿದ್ದಾಪುರದ ಅಸ್ಕರ್‌ ಪೊಲೀಸರಿಗೆ ದೂರು ನೀಡಲಾಗಿತ್ತು. ಸಂತೋಷ್‌ ಅವರನ್ನು ಬಂಧಿಸಬೇಕೆಂಬ ಒತ್ತಾಯ ಜಿಲ್ಲೆಯ ಮುಸ್ಲಿಂ ಸಮುದಾಯದಿಂದ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಗೋ ಣಿಕೊಪ್ಪ ಪೊಲೀಸರು ಮಂಗಳವಾರ ಅವರನ್ನು ಅವರ ಪತ್ನಿಯ ತವರು ಮನೆ ತುಮಕೂರಿನ ಮಧುಗಿರಿಯಲ್ಲಿ ಬಂಧಿಸಿ, ಮಧ್ಯಾಹ್ನ ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಬಳಿಕ, ಜಾಮೀನಿನ ಮೇಲೆ ಅವರು ಬಿಡುಗಡೆ ಹೊಂದಿದ್ದಾರೆ. ಈ ಮಧ್ಯೆ, ಸಂತೋಷ್‌ ಬಂಧನ ವಿರೋಧಿಸಿ ಹಿಂದೂಪರ ಸಂಘಟನೆಗಳು ಮಂಗಳವಾರ ಗೋಣಿಕೊಪ್ಪದಲ್ಲಿ ಪ್ರತಿಭಟನೆ ನಡೆಸಿದವು. ಪಟ್ಟಣದಲ್ಲಿ ಕೆಲಕಾಲ ಬಂದ್‌ ಆಚರಿಸಲಾಯಿತು. ಸಂತೋಷ್‌ ಅವರನ್ನು ವೈದ್ಯಕೀಯ ಪರೀಕ್ಷೆ ಹಾಗೂ ನ್ಯಾಯಾಲಯಕ್ಕೆ ಕರೆದೊಯ್ಯುವ ಸಂದರ್ಭದಲ್ಲಿ ಸಂಘಟನೆಗಳ ಕಾರ್ಯಕರ್ತರು ಸಂತೋಷ್‌ ಪರ ಘೋಷಣೆ ಕೂಗಿದರು. ಇದೇ ವೇಳೆ, ಪ್ರವಾದಿಗೆ ಸಂತೋಷ್‌ ಅಗೌರವ ತೋರಿದ್ದಾರೆಂದು ಆರೋಪಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಮಂಗಳವಾರ ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿದವು. ಈ  ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಈ ನಡುವೆ, ಜನಾಂಗೀಯ ನಿಂದನೆ ಮಾಡಿರುವ ಆಸಿಫ್ ಎಂಬಾತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಕೊಡಗು ಬಂದ್‌ಗೆ ಹಿಂದೂ ಸುರಕ್ಷಾ ವೇದಿಕೆ ಕರೆ ನೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next