Advertisement

ಜ್ಞಾನ ವೃದ್ಧಿಗೆ ಪತ್ರಿಕೆ ಸಹಕಾರಿ : ಶ್ರೀನಿವಾಸ್‌ ಭಟ್‌

08:40 AM Aug 02, 2017 | Harsha Rao |

ಕಾಸರಗೋಡು: ಹಲವು ಮಾಧ್ಯಮಗಳು ಬಂದಿದ್ದರೂ ಪತ್ರಿಕೆ ಗಳಷ್ಟು ಪರಿಣಾಮಕಾರಿಯಲ್ಲ. ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುವುದಲ್ಲದೆ ಮಕ್ಕಳಲ್ಲಿ ಕ್ರಿಯಾಶೀಲ ಚಟುವಟಿಕೆಗಳಿಗೆ ನೆರವಾಗುತ್ತದೆ ಎಂದು ಉದ್ಯಮಿ ಶ್ರೀನಿವಾಸ್‌ ಭಟ್‌ ಅವರು ಹೇಳಿದರು.

Advertisement

ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ವತಿಯಿಂದ ನಗರದ ಬೀರಂತಬೈಲಿನ ಸರಕಾರಿ ವೆಲ್ಫೆರ್‌ ಕಿರಿಯ ಪ್ರಾಥಮಿಕ ಶಾಲೆಗೆ ವರ್ಷಪೂರ್ತಿ “ಉದಯವಾಣಿ’ ಪತ್ರಿಕೆಯನ್ನು ಉಚಿತವಾಗಿ ನೀಡುವ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಸರಗೋಡಿನಲ್ಲಿ ವರ್ಷದಿಂದ ವರ್ಷಕ್ಕೆ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ಮಕ್ಕಳು ಕನ್ನಡ ಮಾಧ್ಯಮಗಳಿಂದ ಕಲಿಯಬೇಕಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಮಕ್ಕಳನ್ನು ಸೇರಿಸಬೇಕಾದರೆ ಅಂತಹ ಶಾಲೆಗಳಲ್ಲಿ ಆಧುನಿಕ ಸೌಕರ್ಯಗಳನ್ನು ಕಲ್ಪಿಸಬೇಕು.

ಈ ನಿಟ್ಟಿನಲ್ಲಿ ಮಕ್ಕಳಿಗೆ ಉದಯವಾಣಿ ಪತ್ರಿಕೆಯನ್ನು ನೀಡುವ ಮೂಲಕ ಶ್ಲಾಘನೀಯ ಕೆಲಸವನ್ನು ಕನ್ನಡ ಜಾಗೃತಿ ಸಮಿತಿ ಮಾಡಿದೆ. ಇನ್ನಷ್ಟು ಕನ್ನಡ ಶಾಲೆಗಳಿಗೆ ಕನ್ನಡ ಪತ್ರಿಕೆಗಳನ್ನು ಒದಗಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು. ಕನ್ನಡದ ಕೆಲಸಕ್ಕೆ ತಮ್ಮ ಸಂಪೂರ್ಣ ಬೆಂಬಲ ಹಾಗೂ ನೆರವನ್ನು ನೀಡುವುದಾಗಿ ಅವರು ಭರವಸೆ ನೀಡಿದರು.

ವಾರ್ಡ್‌ ಕೌನ್ಸಿಲರ್‌ ಅರುಣ್‌ ಕುಮಾರ್‌ ಶೆಟ್ಟಿ ಅವರು ಮಾತನಾಡಿ ಈ ಶಾಲೆಯ ಅಭಿವೃದ್ಧಿಗೆ ಕಾಸರಗೋಡು ನಗರಸಭೆಯಿಂದ ಸಾಧ್ಯವಾಗುವ ಎಲ್ಲಾ ನೆರವನ್ನು ಒದಗಿಸಿಕೊಡುವುದಾಗಿ ಅವರು ಹೇಳಿದರು. ಧಾರ್ಮಿಕ ಮುಂದಾಳು, ಸಂಘಟಕ ವೆಂಕಟ್ರಮಣ ಹೊಳ್ಳ ಅವರು ಮಾತನಾಡಿ ಕನ್ನಡ ಜಾಗೃತಿ ಸಮಿತಿ ಕೆಲವು ತಿಂಗಳಿಂದ ಕನ್ನಡ ಪರ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ತಮ್ಮ ಎಲ್ಲಾ ಸಹಕಾರವಿದೆ. ಈ ಶಾಲೆಗೆ ಕನ್ನಡ ಪತ್ರಿಕೆಯನ್ನು ನೀಡುವ ಮೂಲಕ ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಈ ಮಕ್ಕಳು ಉತ್ತಮ ಭವಿಷ್ಯದತ್ತ ಸಾಗಲಿ ಎಂದು ಹಾರೈಸಿದರು.

Advertisement

ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಕಾಸರಗೋಡು ಅವರು ಮಾತನಾಡಿ ಮುಂದಿನ ದಿನಗಳಲ್ಲಿ   ಇನ್ನಷ್ಟು  ಕನ್ನಡ ಶಾಲೆಗಳಿಗೆ ಕನ್ನಡ ಪತ್ರಿಕೆಯನ್ನು ಒದಗಿಸುವುದಾಗಿ ಹೇಳಿದರು. ಕನ್ನಡದ ಕೆಲಸದಲ್ಲಿ ಮುಂಚೂಣಿಯಲ್ಲಿದ್ದು, ಕೇರಳ ಸರಕಾರದ ಭಾಷಾ ದ್ವೇಷದ ವಿರುದ್ಧ ಇನ್ನಷ್ಟು ಹೋರಾಟ ನಡೆಸುವುದಾಗಿ ಹೇಳಿದರು. ಅಲ್ಲದೆ ಕನ್ನಡ ಪರ ಚಟುವಟಿಕೆಗಳಿಗೆ ಸಹಕಾರ ನೀಡುವುದಾಗಿಯೂ ತಿಳಿಸಿದರು.

ಕೋಟೆಕಣಿಯ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್‌ ಕೋಟೆಕಣಿ ಅವರು ಪ್ರಾಸ್ತಾವಿವಾಗಿ ಮಾತನಾಡಿ ಕಳೆದ ಕೆಲವು ತಿಂಗಳುಗಳಿಂದ ನಡೆಸಿದ ಕನ್ನಡ ಪರ ಹೋರಾಟದ ಚಿತ್ರಣವನ್ನು ನೀಡಿದರು. ಕೇರಳ ಸರಕಾರದ ಕನ್ನಡ ವಿರೋಧಿ ಧೋರಣೆಯನ್ನು ಪ್ರತಿಭಟಿಸಿ ತಲಪಾಡಿಯಲ್ಲಿ ನಡೆಸಿದ ರಸ್ತೆ ತಡೆ ಹೋರಾಟದಲ್ಲಿ ಕನ್ನಡ ಜಾಗೃತಿ ಸಮಿತಿಯ ಸದಸ್ಯರನ್ನು ಪೊಲೀಸರು ಬಂಧಿಸಿದ್ದರು. ಕನ್ನಡ ವಿರೋಧಿ ನಿಲುವಿನ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದ ಅವರು ಇದೇ ಸಂದರ್ಭದಲ್ಲಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದೆ ಎಂದರು.

ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಕಾಸರಗೋಡು, ಕೌನ್ಸಿಲರ್‌ ಅರುಣ್‌ ಕುಮಾರ್‌ ಶೆಟ್ಟಿ ಅವರು ಶಾಲಾ ಮುಖ್ಯೋಪಾಧ್ಯಾಯಿನಿ ಗೌರಿ ಅವರಿಗೆ “ಉದಯವಾಣಿ’ ಪತ್ರಿಕೆಯನ್ನು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಯೋಗೀಶ್‌ ಕೋಟೆಕಣಿ, ಶ್ರೀಕಾಂತ್‌ ಕಾಸರಗೋಡು, ಕುಶಲ ಪಾರೆಕಟ್ಟೆ, ಶಾಲಾ ಸಿಬಂದಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಗೌರಿ ಅವರು ಸ್ವಾಗತಿಸಿದರು. ದಿವಾಕರ ಅಶೋಕನಗರ ಅವರು ಹಾಡೊಂದನ್ನು ಹಾಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next