ಹೃಷಿಕೇಶ: ಉತ್ತರಾಖಂಡದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ದೊಡ್ಡಪ್ರಮಾಣದಲ್ಲೇ ಕೇಂದ್ರ ಸರ್ಕಾರ ಕೈಗೊಂಡಿದೆ. ರಸ್ತೆ, ರೈಲು ಮಾರ್ಗಗಳ ನಿರ್ಮಾಣ, ವಿದ್ಯುತ್ ಸ್ಥಾವರಗಳ ಕಾಮಗಾರಿಯೂ ನಡೆಯುತ್ತಿದೆ. ಇದರ ಮಧ್ಯೆ ಈ ಕಾಮಗಾರಿಗಳ ಪರಿಣಾಮ ಭೂಮಿ ಬಿರುಕುಬಿಡುತ್ತಿದೆ.
ಈ ಯೋಜನೆಗಳನ್ನು ನಿಲ್ಲಿಸಿ, ಇಲ್ಲವೇ ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಭಾಯಿಸಲು ನೆರವು ನೀಡಿ ಎಂದು ಸರ್ಕಾರಕ್ಕೆ ನಾಗರಿಕರ ಒತ್ತಾಯವೂ ಹೆಚ್ಚಿದೆ. ಜ.1ರಿಂದ ಜೋಶಿಮಠದಲ್ಲಿ ದೊಡ್ಡಪ್ರಮಾಣದಲ್ಲಿ ಮನೆಗಳು ಬಿರುಕುಬಿಟ್ಟು ಉರುಳಿಕೊಂಡಿದ್ದವು. ಸ್ವತಃ ಶಂಕರ ಮಠವೇ ಕುಸಿಯುವ ಭೀತಿಗೊಳಗಾಗಿತ್ತು.
ಕೇವಲ ಜೋಶಿಮಠಕ್ಕೆ ಮಾತ್ರವಲ್ಲ, ಹೃಷೀಕೇಶ, ಕರ್ಣಪ್ರಯಾಗ, ಉತ್ತರಕಾಶಿ, ಮಸ್ಸೂರಿ, ನೈನಿತಾಲ್‌ನಲ್ಲೂ ಇದೇ ಪರಿಸ್ಥಿತಿ ಉಂಟಾಗಲಿದೆ ಎಂಬ ಅಭಿಪ್ರಾಯ ದಟ್ಟವಾಗಿದೆ. ಅದಕ್ಕೆ ಪೂರಕ ಸಾಕ್ಷ್ಯಗಳೂ ಸಿಕ್ಕಿವೆ. ಜೋಷಿಮಠಕ್ಕೆ ಸಮೀಪದಲ್ಲಿ 520 ಮೆಗಾವ್ಯಾಟ್ ಸಾಮರ್ಥ್ಯದ ತಪೋವನ-ವಿಷ್ಣುಗದಾ ಜಲವಿದ್ಯುತ್ ಯೋಜನೆಗಾಗಿ ಸುರಂಗ ನಿರ್ಮಾಣ ನಡೆಯುತ್ತಿದೆ.
ಇಲ್ಲಿ ಕಲ್ಲುಬಂಡೆಯೊಂದನ್ನು ಸಿಡಿಸಲಾದ ನಂತರ ಜೋಶಿಮಠದಲ್ಲಿ ಪರಿಸ್ಥಿತಿ ವಿಷಮಿಸಿದೆ. ಹೃಷೀಕೇಶ-ಕರ್ಣಪ್ರಯಾಗದ ನಡುವೆ ರೈಲ್ವೇ ಸುರಂಗ ಮಾರ್ಗ ನಿರ್ಮಾಣ ಶುರುವಾಗಿದೆ. ಪರಿಣಾಮ ಅಟಾಲಿ ಹಳ್ಳಿಯಲ್ಲಿ 85 ಮನೆಗಳು ಬಿರುಕುಬಿಟ್ಟಿವೆ. ಇದರಿಂದ ಕರ್ಣಪ್ರಯಾಗದಲ್ಲೂ ಭೀತಿ ಶುರುವಾಗಿದೆ.
ಶಾಂತವಾದ ಊರು ಚಂಬಾದಲ್ಲಿ ಚಾರಧಾಮಗಳನ್ನು ಸೇರಿಸುವ 440 ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣವಾಗುತ್ತಿದೆ. ಹಾಗಾಗಿ ಅಲ್ಲಿನ ಹೊಲ, ಮನೆಗಳಲ್ಲೂ ಬಿರುಕು ಕಾಣಿಸಿಕೊಂಡಿವೆ. ಭೂಕುಸಿತದ ತೀವ್ರ ಭೀತಿಯುಂಟಾಗಿದೆ.