ಹುಬ್ಬಳ್ಳಿ:ಹುಬ್ಬಳ್ಳಿಯಿಂದ ಅಹ್ಮದಾಬಾದ್‌ಗೆ ವಿಮಾನಯಾನ ಸೌಲಭ್ಯ ಆರಂಭ ಹಾಗೂ ಹುಬ್ಬಳ್ಳಿ-ಚೆನ್ನೈ ನಡುವಿನ ವಿಮಾನಯಾನ ಸ್ಥಗಿತಗೊಳಿಸದಿರುವ ಕುರಿತು ನಾಗರಿಕ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಜತೆ ನವದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚರ್ಚಿಸಿದ್ದಾರೆ.
ಹುಬ್ಬಳ್ಳಿಯ ಉದ್ಯಮಿಗಳು, ವ್ಯಾಪಾರಸ್ಥರು ಇನ್ನಿತರರು ಅಹ್ಮದಾಬಾದ್ ಹಾಗೂ ಚೆನ್ನೈನೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿದ್ದಾರೆ.
ಅಹ್ಮದಾಬಾದ್‌ಗೆ ಹುಬ್ಬಳ್ಳಿಯಿಂದ ವಿಮಾನಯಾನ ಆರಂಭಿಸಿದರೆ ಉದ್ಯಮ-ವ್ಯಾಪಾರ ದೃಷ್ಟಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಹುಬ್ಬಳ್ಳಿ-ಚೆನ್ನೈ ನಡುವಿನ ವಿಮಾನಯಾನ ಸ್ಥಗಿತಗೊಳಿಸಲಾಗುತ್ತಿದೆ ಎನ್ನಲಾಗಿದ್ದು, ಇದನ್ನು ಸ್ಥಗಿತಗೊಳಿಸದೆ ಮುಂದುವರಿಸಬೇಕು. ಹುಬ್ಬಳ್ಳಿ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಸಾಕಷ್ಟು ಬೆಳವಣಿಗೆ ಹೊಂದುತ್ತಿದೆ. ಈ ಹಿನ್ನೆಲೆಯಲ್ಲಿ ತ್ವರಿತ ಸಂಚಾರಕ್ಕೆ ವಿಮಾನಯಾನ ಪ್ರಮುಖವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.