ಹುಬ್ಬಳ್ಳಿ: ಕೇಂದ್ರ ಸರಕಾರ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರಾಜ್ಯ ಸರಕಾರಕ್ಕೆ ತನ್ನ ಪಾಲಿನ ಹಣ ನೀಡಿದೆ. ಆದರೆ ರಾಜ್ಯ ಸರಕಾರ ರೈತರಿಗೆ ಬೆಳೆ ವಿಮಾ ಮೊತ್ತ ನೀಡುವಲ್ಲಿ ಉದಾಸೀನತೆ ತೋರುತ್ತಿದ್ದು, ಕೂಡಲೇ ಅದು ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಪರಿಹರಿಸಬೇಕೆಂದು ಸಂಸದ ಪ್ರಹ್ಲಾದ ಜೋಶಿ ಕೇಂದ್ರವನ್ನು ಒತ್ತಾಯಿಸಿದರು.
ಧಾರವಾಡ ಜಿಲ್ಲೆಯು ಸತತ ಮೂರು ವರ್ಷಗಳಿಂದ ಬರಗಾಲಕ್ಕೊಳಗಾಗಿದ್ದು, ಈ ವರ್ಷವು ಕೂಡ ಮಳೆಯ ಕೊರತೆಯಿಂದ ಸಂಪೂರ್ಣ ಜಿಲ್ಲೆಯ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ರೈತರ ನೆರವಿಗಾಗಿ ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆಯಡಿ 2016ರ ಮುಂಗಾರಿನಲ್ಲಿ 86 ಸಾವಿರ ರೈತರು ನೋಂದಾಯಿಸಿಕೊಂಡಿದೆ.
ಅವರಿಗೆ 172 ಕೋಟಿ ರೂ. ವಿಮೆ ಮೊತ್ತ ನೀಡಲು ನಿಗದಿಯಾಗಿದ್ದು, ಕೇಂದ್ರ ಸರಕಾರವು ತನ್ನ ಪಾಲಿನ ಮೊತ್ತವನ್ನು ರಾಜ್ಯಕ್ಕೆ ನೀಡಿದೆ. ಈ ಯೋಜನೆಯ ಅನುಷ್ಠಾನ ನಿರ್ವಹಣೆಯು ರಾಜ್ಯ ಸರಕಾರದ್ದಾಗಿದೆ. ಆದರೆ ರಾಜ್ಯ ಸರಕಾರ ನೇಮಿಸಿರುವ ಟಾಟಾ ಎಐಜಿ ವಿಮಾ ಕಂಪನಿಯು ಧಾರವಾಡ ಜಿಲ್ಲೆಗೆ ಬರಬೇಕಾದ 172 ಕೋಟಿ ರೂ.ದಲ್ಲಿ ಕೇವಲ 61 ಕೋಟಿ ರೂ.ಗಳನ್ನು ಮಾತ್ರ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಇನ್ನುಳಿದ 111 ಕೋಟಿ ರೂ.ಗಳಲ್ಲಿ 41.22 ಕೋಟಿ ರೂ.ಗಳು ರಾಜ್ಯ ಸರಕಾರ ರೈತರ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ ನೀಡದಿರುವುದರಿಂದ 52 ಕೋಟಿ ರೂ. ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಗಳ ರೈತರಿಗೆ ಸಂದಾಯವಾಗಬೇಕಿದೆ. ವಿಮಾ ಕಂಪನಿಯು ತಾಂತ್ರಿಕ ಕಾರಣದ ನೆಪವೊಡ್ಡಿ ರೈತರಿಗೆ ವಿಮಾ ಮೊತ್ತ ಬಿಡುಗಡೆಗೊಳಿಸಿಲ್ಲ.
ಇನ್ನು 9.63 ಕೋಟಿ ರೂ. ಮೊತ್ತವು ಭತ್ತದ ಫಸಲಿನ ರೈತರಿಗೆ ಜಮಾ ಆಗಬೇಕಿದ್ದು, ಬೆಳೆ ಸಮೀಕ್ಷೆಯಲ್ಲಿ ಭತ್ತದ ಇಳುವರಿ ಪಡೆದು ವರದಿ ನೀಡಿದೆ. ಆದರೆ ಸರಕಾರ ವಿಮಾ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವಾಗ ಅಕ್ಕಿಯ ಇಳುವರಿ ಅನ್ವಯಿಸಿದೆ.
ಈ ರೀತಿಯ ದ್ವಂದ್ವ ನಿಲುವಿನಿಂದ ಭತ್ತದ ಬೆಳೆಗಾರರಿಗೆ ವಿಮೆ ಮೊತ್ತ ಪಾವತಿಸಲು ತಾಂತ್ರಿಕ ತೊಂದರೆಯಾಗುತ್ತಿದೆ ಎಂದು ವಿಮಾ ಕಂಪನಿಯು ಹೇಳುತ್ತಿದೆ. ಆದ್ದರಿಂದ ರಾಜ್ಯ ಸರಕಾರವು ಎಲ್ಲ ತಾಂತ್ರಿಕ ತೊಂದರೆ ಸರಿಪಡಿಸಿ ಕೂಡಲೇ ಸಂಕಷ್ಟದಲ್ಲಿರುವ ರೈತರ ಖಾತೆಗೆ ವಿಮೆ ಮೊತ್ತ ಜಮಾ ಮಾಡಲು ಕೇಂದ್ರ ಸರಕಾರವು ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.