Advertisement
ಬದುಕಿನ ಹಾದಿಯಲ್ಲಿ ನಡೆದು ಸುಸ್ತಾದಾಗ, “ಬನ್ರೀ, ಅಲ್ಲಿಯ ತನಕ ಡ್ರಾಪ್ ಕೊಡ್ತೀನಿ’ ಎನ್ನುವ ಒಂದು ಸ್ವರ ಕೇಳುತ್ತೆ. ಅದು ಲಿಫ್ಟ್ಮ್ಯಾನ್‌ನ ಧ್ವನಿ! ಇನ್ನೇನು ನಮ್ಮ ಕೈಯಲ್ಲಾಗಲ್ಲ, ದೇವರೇ ಬಂದು ಕಾಪಾಡಬೇಕು ಅಂತನ್ನಿಸಿದ ಕ್ಷಣಗಳಲ್ಲೆಲ್ಲ ಈ ವ್ಯಕ್ತಿಯ ದರ್ಶನವಾಗುತ್ತದೆ. ಗುರಿಯ ತಾಣಕ್ಕೆ ನಮ್ಮನ್ನು ಬೇಗನೆ ಕರೆದೊಯ್ದು ಬಿಡುತ್ತಾನೆ. ಆಪತ್ಭಾಂಧವನಾಗಿ, ಲಿಫ್ಟ್ಮ್ಯಾನ್ ಆಗಿ, ಪ್ರತ್ಯಕ್ಷ ದೇವರೇ ಆಗಿ ಛಕ್ಕನೆ ಕಾಣಿಸಿಕೊಂಡು, ಉಪಕಾರ ಮಾಡಿ ಹೋಗುವ ಇವರು, ಕೊನೆಯ ತನಕವೂ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ. ಇಂಥ ಲಿಫ್ಟ್ಮ್ಯಾನ್‌ಗಳು, ಕಾಲೇಜಿನಿಂದ ಬದುಕಿನ ಕೊನೆಯ ನಿಲ್ದಾಣದ ವರೆಗೂ ಸಿಗುತ್ತಲೇ ಇರುತ್ತಾರೆ.
ಪ್ರತೀ ಕಾಲೇಜಿನಲ್ಲೂ ಪರೀಕ್ಷಾ ದಿನದ ಕೊನೆ ಕ್ಷಣದ ದೇವರುಗಳು ಇದ್ದೇ ಇರುತ್ತಾರೆ. ಇವರನ್ನೇ ಇಷ್ಟ ದೇವರಂತೆ ನಂಬಿಕೊಂಡು ಬರುವ ಭಕ್ತರೂ ಬಹಳ. “ದೇವರಿದ್ದಾನೆ, ಎಕ್ಸಾಮ್‌ನಲ್ಲಿ ಬರೋದನ್ನೆಲ್ಲ ಅರ್ಧ ಗಂಟೇಲಿ ಹೇಳಿಕೊಡ್ತಾನೆ’ ಎಂಬ ಧೈರ್ಯ ಆ ಭಕ್ತರಿಗೆ. ದೇವರೆಂಬ ಆ ಲಿಫ್ಟ್ಮ್ಯಾನ್ ಹತ್ತೇ ಹತ್ತು ನಿಮಿಷದಲ್ಲಿ ಕೊಡುವ ಟ್ಯೂಶನ್, ಭಕ್ತರ ಇಡೀ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಗುತ್ತೆ. “ನೋಡು, ಈ ಫಾರ್ಮುಲಾ ಮರೀಬೇಡ. ಆ ಪಾಯಿಂಟ್ ನೆನಪಿಟ್ಕೊà, ಬಂದೇ ಬರುತ್ತೆ. ಇಷ್ಟು ಬರೆದ್ರೆ ಸಾಕು, ನೀನು ಪಾಸಾಗ್ತಿಯಾ’ ಎಂಬ ಆತನ ಸಲಹೆ, ಇವರೊಳಗೊಂದು ಗೆಲುವಿನ ಹಣತೆ ಹಚ್ಚುತ್ತೆ.
Related Articles
“ವಿಲಿಯಂ ವರ್ಡ್ಸ್‌ವರ್ತ್‌ನ ಪೋಯಂ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೋಬೇಡ. ಅವನು ಆ ಪದ್ಯದಲ್ಲಿ ಬೆಳಗ್ಗೆ ಕಾಣುವ ಪ್ರಕೃತಿ ಹಾಗೂ ಸೌಂದರ್ಯದ ಬಗ್ಗೆ ವರ್ಣಿಸಿದ್ದಾನಷ್ಟೇ. ಇಡೀ ಪದ್ಯದಲ್ಲಿ ಮಂಜು, ಸೇತುವೆ, ನದಿ, ಮೌನ, ಅಂತೆಲ್ಲಾ ಬರುತ್ತೆ. ಇದಕ್ಕೆಲ್ಲಾ ಮನುಷ್ಯ ಹಾನಿ ಮಾಡ್ತಾ ಇದ್ದಾನಲ್ಲ ಅಂತ ಬೇಸರಪಡ್ತಾನೆ ಅವನು. ಇಷ್ಟು ಗೊತ್ತಿದ್ರೆ ಸಾಕು ನಿಂಗೆ. ಇದನ್ನೇ ನಿನ್ನ ವಾಕ್ಯದಲ್ಲಿ ಒಂದು ಪುಟ ಬರೀ, ಇದು ಆರು ನಂಬರಿನ ಪ್ರಶ್ನೆ’ ಅನ್ನುತ್ತಾ ಇಡೀ ಪದ್ಯದ ಆಶಯವನ್ನೇ ಸರಳವಾಗಿ ಅರ್ಥಮಾಡಿಸುವ ಈ ಆಪದಾºಂಧವ, ಷೇಕ್ಸ್‌ಪಿಯರ್‌ನ ಇಡೀ ನಾಟಕವನ್ನೂ ಹತ್ತೇ ನಿಮಿಷದಲ್ಲಿ ಸಿಂಪಲ್ಲಾಗಿ ವಿವರಿಸಿಬಿಡುತ್ತಾನೆ. ಬಹುಶಃ ನಮ್ಮ ಶೈಕ್ಷಣಿಕ ಜಗತ್ತಿನಲ್ಲಿ ಇಂಥ ಆಪತಾºಂಧವರು ಇರದೇ ಹೋಗಿರುತ್ತಿದ್ದರೆ, ನಮ್ಮ ಫಲಿತಾಂಶಗಳು ಶೇ.50ನ್ನೂ ದಾಟುತ್ತಿರಲಿಲ್ಲ. ಎಷ್ಟೋ ಮಂದಿ ಪಾಸಾಗಲು ಒದ್ದಾಡುತ್ತಿದ್ದರು. ಅದೆಷ್ಟೋ ಪ್ರತಿಭೆಗಳು ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಈ ಇಷ್ಟ ದೇವರುಗಳು ಹೇಳಿಕೊಡುವ ಕಿರು ಪಾಠವನ್ನು ಪರಮ ಪ್ರಸಾದ ಅಂತ ಸ್ವೀಕರಿಸಿ ಎಕ್ಸಾಂ ಹಾಲ್‌ಗೆ ಹೋಗದಿದ್ದರೆ, ಆ ಹಾಲ್ ಒಂಥರಾ ಶ್ರದ್ಧಾಂಜಲಿ ಸಭೆಯಂತೆ ಅವರಿಗೆ ತೋರುತ್ತಿತ್ತೋ ಏನೋ!
Advertisement
ವೆಬ್‌ಸೈಟ್‌ಗಳಲ್ಲಿ ಪಠ್ಯದ ಸಾರಾಂಶ ಸಿಗಬಹುದು, ಯಾವುದೋ ದೊಡ್ಡ ಉತ್ತರವೇ ಸಿಕ್ಕಿಬಿಡಬಹುದು. ಆದರೆ, ಅವೆಲ್ಲ ಸಲೀಸಾಗಿ ನಮ್ಮ ಮೆದುಳಿಗೆ ಇಳಿಯುವುದಿಲ್ಲ. ಹಾಗೆ ಸರಳವಾಗಿ ಅರ್ಥೈಸುವ ಕಲೆ ಅನೇಕ ಅಧ್ಯಾಪಕರಿಗೂ ಸಿದ್ಧಿಸುವುದಿಲ್ಲ. ಕೋಚಿಂಗ್ ಸೆಂಟರ್‌ನಲ್ಲಿ ಪಠ್ಯವನ್ನು ಹೀಗೆ ಸರಳವಾಗಿ ತಿಳಿಸಿಯೆಂದರೆ, ಒಂದಷ್ಟು ಫೀ ಕೊಡಲೇಬೇಕು. ಆದರೆ, ನಮ್ಮ ನಡುವಿನ ಆಪತ್ಭಾಂಧವ ಅರ್ಥಾತ್ ಇಷ್ಟದೇವರು ಅಲಿಯಾಸ್ ಲಿಫ್ಟ್ಮ್ಯಾನ್ ಯಾವತ್ತೂ ಫೀ ಕೇಳುವುದಿಲ್ಲ. ಅವನಿಗೆ ನಾಲ್ಕೇ ನಾಲ್ಕು ಗುಟುಕಿನ ಬೈಟುಕಾಫಿ ಸಾಕು.
ಬದುಕಲ್ಲೂ ಬರುತ್ತಾರೆ ಆಪ್ತರಕ್ಷಕರು!ಕಾಲೇಜಿನಾಚೆಗೂ ಲಿಫ್ಟ್ಮ್ಯಾನ್‌ಗಳು ಸಿಗುತ್ತಾರೆ. ನೀವು ಕೆಲಸ ಮಾಡುವ ಆಫೀಸಿನಲ್ಲಿ, ನಿಮ್ಮ ನೆರೆ ಮನೆಯಲ್ಲಿ, ನೀವು ಹಾದು ಹೋಗುವ ದಾರಿಯಲ್ಲೂ ಅವರು ಇರುತ್ತಾರೆ. ಬದುಕಿನ ಸಂಕಷ್ಟದಲ್ಲಿ ತೊಯ್ದು ತೊಪ್ಪೆಯಾದಾಗ, ಜೀವನ ಬೋರ್ ಅಂತನ್ನಿಸಿ ವೈರಾಗ್ಯವೇ ಮಾತಾದಾಗ, ಇವರು ಎದುರಿಗೆ ಬಂದು, ಗೆಲ್ಲುವ ದಾರಿಯನ್ನು ತೋರಿಸುತ್ತಾರೆ. ಏನೋ ಕತೆ ಹೇಳಿ, ಹತ್ತೇ ಹತ್ತು ನಿಮಿಷದಲ್ಲಿ ಲೈಫ್ ಈಸ್ ಬ್ಯೂಟಿಫುಲ್ ಅಂತನ್ನಿಸುವಂತೆ ಮಾಡುತ್ತಾರೆ. ಜಾತ್ರೆಯೊಂದರ ಸಂದಣಿಯಲ್ಲಿ ನೀವು ಕಳೆದೇ ಹೋದಿರಿ ಅಂತಂದುಕೊಳ್ಳುವ ಹೊತ್ತಿಗೆ ಸೂಪರ್ ಮ್ಯಾನ್‌ನಂತೆ ಬಂದು ರಕ್ಷಿಸುತ್ತಾರೆ. ಬಸ್ಸಿನಲ್ಲಿ ಸಿಗುವ ಐದೇ ನಿಮಿಷದಲ್ಲಿ, ಪಕ್ಕದ ಸೀಟಿನಲ್ಲಿ ಸಹಪಯಾಣಿಗನಾಗಿ ಬಂದು ಕುಳಿತು, ಬದುಕಿನ ಗುಟ್ಟನ್ನು ಬೋಧಿಸುತ್ತಾರೆ. ಬದುಕಿನ ತುರ್ತು ಪರಿಸ್ಥಿತಿಯಲ್ಲಿ, ನಮ್ಮೆದುರು ಬಂದು ಲಿಫ್ಟ್ ಕೊಡುವ, ಧೈರ್ಯ ತುಂಬುವ ಮನಸ್ಸುಗಳಿಗೆ ಒಂದು ಥ್ಯಾಂಕ್ಸ್ ಹೇಳ್ಳೋಣ. ಆಪ್ತರಕ್ಷಕರಾಗೋದು ಅಂದ್ರೆ…
ಬೇರೆಯವರಿಗೆ ನೆರವಾಗುವುದರಲ್ಲೂ ಒಂದು ಸುಖವಿದೆ. ನಾವು ಕಲಿತದ್ದನ್ನು ಬೇರೆಯವರಿಗೆ ಹೇಳಿಕೊಡೋದು ಪುಣ್ಯದ ಕೆಲಸ.
ಕಲಿತದ್ದನ್ನು ಹೇಳಿಕೊಟ್ಟರೆ, ಅವರು ನಮಗಿಂತಲೂ ಮುಂದೆ ಹೋಗ್ತಾರೆ ಅನ್ನೋ ಅಹಂ ಬೇಡ.
ಗೊತ್ತಿದ್ದನ್ನು ಹೇಳಿಕೊಟ್ಟರೆ, ಆ ಉಪಕಾರವನ್ನು ಮುಂದೊಂದು ದಿನ ಅವರು ನೆನೆಯುತ್ತಾರೆ. 1. ಜಾತ್ರೆಯಲ್ಲಿ ನನ್ನನ್ನು ಕಾಪಾಡಿದ!
ಆಪತ್ಭಾಂಧವ: ಅನಾಮಿಕ
ನನಗೆ ಆಗ 7 ವರ್ಷ. ಒಂದು ಜಾತ್ರೆಯಲ್ಲಿ, ಜನಸಮೂಹದ ನಡುವೆ ನಾನು ಅನಾಥನಾಗಿ ನಿಂತಿದ್ದೆ. ಜನರ ನೂಕು ನುಗ್ಗಲಿನಲ್ಲಿ ಯಾರದೋ ಕಾಲು ತೊಡರಿ ನಾನು ನೆಲಕ್ಕೆ ಬಿದ್ದಿದ್ದೆ. ಆ ಗದ್ದಲದಲ್ಲಿ ಯಾರೂ ನನ್ನನ್ನು ಗಮನಿಸಲೇ ಇಲ್ಲ. “ಅಮ್ಮಾ…’ ಎಂದು ಕೂಗಿದೆ. ಆ ಕೂಗು ನನ್ನವರಿಗೂ ಕೇಳಿಸಲಿಲ್ಲ. ಎಲ್ಲರೂ ನನ್ನನ್ನು ತುಳಿಯುತ್ತಲೇ ಸಾಗಿದರು. ಯಾರಿಗೂ ನನ್ನ ಅಳು ಕೇಳಿಸಲಿಲ್ಲ. ಇನ್ನೇನು ನಾನು ಸತ್ತೆ ಅಂದುಕೊಂಡಿದ್ದೆ. ಯಾವನೋ ಪುಣ್ಯಾತ್ಮ ದೇವರಂತೆ ಬಂದು, ನನ್ನ ಹೇಗೆ ಎತ್ತಿದನೋ ಗೊತ್ತಿಲ್ಲ… ಕಾಲು¤ಳಿತದಿಂದ ನನ್ನನ್ನು ಪಾರುಮಾಡಿಬಿಟ್ಟ. ಆತನಿಗೆ ದೊಡ್ಡ ಥ್ಯಾಂಕ್ಸ್ ಹೇಳುತ್ತೇನೆ.
ಗಿರೀಶ ಜಿ.ಜಿ., ಹೈದರಾಬಾದ್ ಅವನು ನನ್ನನ್ನು ಪಾಸ್ ಮಾಡಿಸುತ್ತಿದ್ದ!
ಆಪತ್ಭಾಂಧವ: ನಿಕೇಶ್
ಉಳಿದ ದಿನಗಳನ್ನು ಆರಾಮಾಗಿ ಕಳೆಯುತ್ತಿದ್ದ ನನಗೆ, ಎಕ್ಸಾಮ್ ದಿನಗಳಲ್ಲಿ ಓದು ಬಹಳ ಕಷ್ಟವಾಗುತ್ತಿತ್ತು. ಆಗ ನನ್ನ ಸಂಕಷ್ಟಕ್ಕೆ ನೆರವಾಗುತ್ತಿದ್ದವನು, ನಿಕೇಶ್ ಎಂಬಾತ. ಅವನು ಓದಿನಲ್ಲಿ ಬಹಳ ಮುಂದಿದ್ದ. ಪರೀಕ್ಷೆ ಸಮಯದಲ್ಲಿ ಒಂದಿಷ್ಟು ಪಾಯಿಂಟ್‌ಗಳನ್ನು ಸಂಗ್ರಹಿಸುತ್ತಿದ್ದ. ಅವೆಲ್ಲಾ ಬಹಳ ಸರಳವಾಗಿರುತ್ತಿದ್ದವು. ಆ ಪಾಯಿಂಟ್‌ಗಳನ್ನು ನಾನು ನೋಡಿಕೊಂಡು, ಪರೀಕ್ಷೆಯಲ್ಲಿ ಪಾಸಾಗುತ್ತಿದ್ದೆ. ಈಗ ನಿಕೇಶ್ ಎಲ್ಲಿದ್ದಾನೋ ಗೊತ್ತಿಲ್ಲ… ಅವನಿಗೊಂದು ಧನ್ಯವಾದ ಹೇಳಲಿಚ್ಛಿಸುತ್ತೇನೆ.
ರೋಶನ್, ಬೆಂಗಳೂರು 3. ಎಂಬಿಎಗೆ ನೆರವಾದ ದೇವತೆ!
ಆಪತ್ಭಾಂಧವ: ಶ್ರೀಲತಾ
ಹಣದ ಸಮಸ್ಯೆಯಿಂದ ನಾನು ಎಂಬಿಎ ಓದಬೇಕು ಎನ್ನುವ ಆಸೆಯನ್ನೇ ಬಿಟ್ಟುಬಿಟ್ಟಿದ್ದೆ. ನಿಜಕ್ಕೂ ಹಣ ಎನ್ನುವುದು ನನ್ನ ಎಂಬಿಎ ಕನಸನ್ನೇ ದೂರ ಮಾಡಿತ್ತು. ಆಗ ನನಗೆ ಪರಿಚಿತಳಾದ ಶ್ರೀಲತಾ, “ಹಣವನ್ನು ನಾನು ಕೊಡುತ್ತೇನೆ. ನೀನು ಎಂಬಿಎ ಮಾಡು’ ಎಂದು ಹೇಳಿ, ಧೈರ್ಯ ತುಂಬಿದಳು. ನಾನು ಎಂಬಿಎಗೆ ಸೇರಿ, ಕಷ್ಟಪಟ್ಟು ಓದಿದೆ. ಈಗ ಒಳ್ಳೆಯ ಕೆಲಸಲ್ಲಿದ್ದೇನೆ. ದೇವರಂತೆ ಬಂದ ಶ್ರೀಲತಾಗೆ ದೊಡ್ಡ ಥ್ಯಾಂಕ್ಸ್.
ಸ್ವಾತಿ, ಕಾರ್ಕಳ 4. ಬಾರ್‌ನ ಕಸ್ಟಮರ್‌ನಿಂದ ಬದುಕು ಬದಲಾಯ್ತು!
ಆಪತ್ಭಾಂಧವ: ಮಹೇಶ್
ನಾನು ಐಟಿಐ ಓದುತ್ತಿದ್ದಾಗ, ಮಧ್ಯಾಹ್ನದ ಮೇಲೆ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಬಾರ್‌ನಲ್ಲೇ ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೆ. ಓದಿನಲ್ಲಿ ತುಸು ಹಿಂದುಳಿದಿದ್ದರೂ ಮಾತಿನಲ್ಲಿ ಸದಾ ಮುಂದಿದ್ದೇ. ಅವತ್ತೂಂದು ದಿನ ಪರೀಕ್ಷೆಯ ಫಲಿತಾಂಶ ಬಂದಿತ್ತು. ಕೆಲವು ವಿಷಯಗಳಲ್ಲಿ ಫೇಲಾಗಿ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಕುಳಿತು, “ಮುಂದೆ ನನ್ನ ಜೀವನದ ಕತೆಯೇನು?’ ಎಂದು ತಲೆಕೆಡಿಸಿಕೊಂಡು, ಅಳುತ್ತಾ ಕುಳಿತಿದ್ದೆ. ಮನೆಯಲ್ಲಿ ಫೇಲಾಗಿದ್ದೇನೆ ಎಂದು ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಸಾವು ಒಂದೇ ನನ್ನ ಮುಂದಿನ ದಾರಿಯಾಗಿತ್ತು. ಆ ಸಂದರ್ಭದಲ್ಲಿ ನನ್ನ ಪಾಲಿಗೆ ದೇವರಾಗಿ ಬಂದವರು, ನಾನು ಕೆಲಸ ಮಾಡುತ್ತಿದ್ದ ಬಾರ್‌ನ ರೆಗ್ಯುಲರ್ ಕಸ್ಟಮರ್ ಮಹೇಶ್ ಸರ್! ಮಹೇಶ್ ಸರ್‌ಗೆ ನಾನು, ನನ್ನ ಮಾತು ಎಂದರೆ ತುಂಬಾ ಇಷ್ಟ. ದಿಕ್ಕು ತೋಚದೆ ಕುಳಿತಿದ್ದ ನನ್ನನ್ನು ಬಂದು ಮಾತಾಡಿಸಿ, ನನ್ನ ಕಷ್ಟಕ್ಕೆ ಕಿವಿಗೊಟ್ಟು, ನನಗೆ ಹೊಸ ದಾರಿಯನ್ನು ತೋರಿಸಿಕೊಟ್ಟರು. ಫೇಲಾಗಿದ್ದರಿಂದ ಮನೆಯವರ ಸಹಾಯ ಕೇಳುವ ಪರಿಸ್ಥಿತಿಯಲ್ಲಿ ಇಲ್ಲದ ನನ್ನನ್ನು ಹಾಸ್ಟೆಲ್‌ನಲ್ಲಿ ತಮ್ಮ ಖರ್ಚಿನಲ್ಲೇ ಪಿಯುಸಿ ಓದಿಸಿದರು. ಪ್ರಥರ್ಮ ದರ್ಜೆಯಲ್ಲಿ ಪಾಸ್ ಆದೆ. ಇಂದು ನಾನು ಎಂ.ಎ. ಪದವೀಧರ. ಥ್ಯಾಂಕ್ ಯು ಮಹೇಶ್ ಸರ್… ನಿಮ್ಮ ಉಪಕಾರವನ್ನು ಮರೆಯುವುದಿಲ್ಲ.
ಮಹಾಲಿಂಗಪ್ಪ. ಜೆ., ದಾವಣಗೆರೆ ಪ್ರಸಾದ್ ಶೆಣೈ ಆರ್.ಕೆ.