ಅಯ್ಯಪ್ಪ ದೇವರ ವ್ರತಧಾರಿಯಾಗಿದ್ದಾಗ ಸುದೀರ್ಘ 60 ದಿನಗಳಲ್ಲಿ ನನ್ನ ಜೀವನ ಶೈಲಿಯೇ ವಿಭಿನ್ನವಾಗಿರುತ್ತದೆ. ದೈನಂದಿನ ಜೀವನ ಪದ್ಧತಿ ಮತ್ತು ಆಹಾರ ಪದ್ಧತಿಗಳನ್ನು ರೂಢಿಸಿಕೊಳ್ಳುವುದು ಆರಂಭದಲ್ಲಿ ತುಸು ಕಷ್ಟವೇ. ಆದರೆ, ಈ ವ್ರತಾಚರಣೆಯನ್ನು ನಾನು ಬಹಳ ಇಷ್ಟಪಟ್ಟು ಮಾಡುತ್ತೇನೆ.
ವೃಶ್ಚಿಕ ಸಂಕ್ರಾಂತಿಯಂದು ಅಂದರೆ ನವೆಂಬರ್ 16ರಂದು ನಾನು ವ್ರತದೀಕ್ಷೆ ಪಡೆದರೆ ಬಳಿಕ ಇರಾ ಸೋಮನಾಥೇಶ್ವರ ದೇವಸ್ಥಾನದ ಬಳಿ ಇರುವ ಸ್ವಾಮಿಗಳ ಶಿಬಿರದಲ್ಲಿಯೇ ವಾಸಿಸುತ್ತೇನೆ. ಶಾಖಾಹಾರ ಸೇವನೆ ಮಾತ್ರವಲ್ಲ, ಹಿಂದಿನ ದಿನ ತಯಾರಿಸಿದ ಆಹಾರ ಸೇವಿಸದೇ ಇರುವುದು, ಪದೇ ಪದೇ ಜಂಕ್‌ಫುಡ್ ತಿನ್ನದೇ ಇರುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು- ಹೀಗೆ ಅನೇಕ ರೀತಿಯ ಶಿಸ್ತನ್ನು ಈ ವ್ರತ ಕಲಿಸುತ್ತದೆ.
ವ್ರತಾಚರಣೆ ಮುಗಿದ ಬಳಿಕವೂ ನಾನು ಮುಂಜಾನೆ 4 ಗಂಟೆಗೇ ಏಳುತ್ತೇನೆ. ಕಬಡ್ಡಿ ಆಟಗಾರನಾದ್ದರಿಂದ ಅಭ್ಯಾಸದಲ್ಲಿ ತೊಡಗಲು ಅನುಕೂಲವಾಗುತ್ತದೆ. ಓದುವುದಕ್ಕೂ ತುಂಬಾ ಅನುಕೂಲವಾಗುತ್ತದೆ. ಬೆಳಿಗ್ಗೆ ಎಲ್ಲರೂ ಏಳುವ ಹೊತ್ತಿಗೆ ನನ್ನ ಅನೇಕ ಕೆಲಸಗಳು ಮುಗಿದಿರುತ್ತವೆ.
ಇಂಜಿನಿಯರಿಂಗ್ ಮೊದಲನೇ ವರ್ಷದಿಂದ ನಾನು ಈ ವ್ರತ ಸ್ವೀಕರಿಸುತ್ತಿದ್ದೇನೆ. ಈ ಬಾರಿ ಮೂರನೇ ವರ್ಷದ ಪ್ರಯಾಣ. ಮೊದಲನೇ ವರ್ಷ ನಾನು ಮಕರವಿಳಕ್ಕು ನೋಡಿದ್ದೇನೆ. ಕಳೆದ ವರ್ಷ ಸಾಧ್ಯವಾಗಲಿಲ್ಲ. ಆದರೆ, ಈ ವರ್ಷ ಮತ್ತೆ ಬೆಳಕು ನೋಡುವ ಆಸೆಯಿದೆ.
ಈ ವ್ರತಾಚರಣೆಗೆ ನನಗೆ ಅಪ್ಪನೇ ಪ್ರೇರಣೆ. ನಾನು ಸಣ್ಣವನಿದ್ದಾಗ ಅವರು ವ್ರತಾಚರಣೆ ಮಾಡುವುದನ್ನು ನೋಡಿದ್ದೆ. ಹಾಗೆ ಕಂಡ ಕನಸು ಇಂಜಿನಿಯರಿಂಗ್ ಕಾಲೇಜು ಸೇರಿದ ಮೇಲೆ ನನಸಾಗುತ್ತಿದೆ. ಏರಿಮಲೆಯಿಂದ ಪಂಪಾ ನದಿಯವರೆಗೆ ನಡೆಯುವುದು, ಬಳಿಕ ನದಿಯಲ್ಲಿ ಸ್ನಾನ ಮಾಡಿ ಮತ್ತೆ ಮುಂದುವರೆಯುವುದು, ಗಂಜಿ ಮತ್ತು ಗೆಣಸು ಸೇವನೆ ಮಾಡಿ, ದೇವರ ಸ್ತುತಿ ಮಾಡುತ್ತಾ ನಡೆಯುವಾಗ ಇತರ ಯಾವುದೇ ವಿಚಾರಗಳು ಮನಸ್ಸಿಗೆ ಬರುವುದಿಲ್ಲ.
18 ಮೆಟ್ಟಿಲನ್ನು ಏರುವ ಒಂದೇ ಉದ್ದೇಶ ಮನಸ್ಸಿನಲ್ಲಿರುತ್ತದೆ. ವಳಚ್ಚಿಲ್‌ನ ಶ್ರೀನಿವಾಸ ತಾಂತ್ರಿಕ ವಿದ್ಯಾಲಯದಲ್ಲಿ ಮೊದಲನೇ ವರ್ಷದಲ್ಲಿ ಓದುವಾಗ ಇಡೀ ಕಾಲೇಜಿನಲ್ಲಿ ನಾನೊಬ್ಬನೇ ವ್ರತಧಾರಿಯಾಗಿದ್ದೆ. ಆದರೆ, ಈ ವರ್ಷ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ರತಧಾರಿಗಳಾಗಿದ್ದಾರೆ. ಅತ್ಯಂತ ಶಿಸ್ತಿನ ವ್ರತವು ಜೀವನ ಶೈಲಿಯ ಮೇಲೆ ಖಂಡಿತ ಪ್ರಭಾವ ಬೀರುತ್ತದೆ.
ವಂಶಿತ್ ಇರಾ
ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಳಚ್ಚಿಲ್