ಮ್ಯಾಂಚೆಸ್ಟರ್: ಆರಂಭಿಕ ಆಟಗಾರ ಜಾನಿ ಬೇರ್‌ಸ್ಟೋ ಅವರ ಅಜೇಯ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದೆ.
ಮಳೆಯಿಂದಾಗಿ ಎರಡು ತಾಸುಗಳ ಆಟ ನಷ್ಟವಾದ ಕಾರಣ ಓವರ್‌ಗಳ ಸಂಖ್ಯೆಯನ್ನು 42ಕ್ಕೆ ಇಳಿಸಲಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡಿನ ದಾಳಿಗೆ ರನ್ ಗಳಿಸಲು ಒದ್ದಾಡಿ 42 ಓವರ್‌ಗಳಲ್ಲಿ 9 ವಿಕೆಟಿಗೆ 204 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದಕ್ಕುತ್ತರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಇಂಗ್ಲೆಂಡ್ 30.5 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 210 ರನ್ ಪೇರಿಸಿ ಜಯಭೇರಿ ಬಾರಿಸಿತು. ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಆರಂಭಿಕ ಬೇರ್‌ಸ್ಟೋ ಸರಿಯಾಗಿ 100 ರನ್ ಗಳಿಸಿ ಅಜೇಯರಾಗಿ ಉಳಿದರು. 97 ಎಸೆತ ಎದುರಿಸಿದ ಅವರು 11 ಬೌಂಡರಿ ಬಾರಿಸಿದ್ದರು. ಅಲೆಕ್ಸ್ ಹೇಲ್ಸ್ ಜತೆ ಮೊದಲ ವಿಕೆಟಿಗೆ 31 ರನ್ ಪೇರಿಸಿದ ಬೇರ್‌ಸ್ಟೋ ಆಬಳಿಕ ಜೋ ರೂಟ್ ಜತೆ ದ್ವಿತೀಯ ವಿಕೆಟಿಗೆ 125 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಗೆಲುವು ಖಚಿತಪಡಿಸಿದರು. ರೂಟ್ 54 ರನ್ ಹೊಡೆದರು. ಈ ಗೆಲುವಿನಿಂದ ಇಂಗ್ಲೆಂಡ್ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಸಂಕ್ಷಿಪ್ತ ಸ್ಕೋರು
ವೆಸ್ಟ್‌ಇಂಡೀಸ್ 42 ಓವರ್‌ಗಳಲ್ಲಿ 9 ವಿಕೆಟಿಗೆ 204 (ಕ್ರಿಸ್ ಗೇಲ್ 37, ಹೋಪ್ 35, ರಿಕಾರ್ಡೊ ಪೊವೆಲ್ 23, ಜಾಸನ್ ಹೋಲ್ಡರ್ 41, ಕ್ರಿಸ್ ವೋಕ್ಸ್ 41ಕ್ಕೆ 2, ಅದಿಲ್ ರಶೀದ್ 31ಕ್ಕೆ 2, ಬೆನ್ ಸ್ಟೋಕ್ಸ್ 43ಕ್ಕೆ 3); ಇಂಗ್ಲೆಂಡ್ 30.5 ಓವರ್‌ಗಳಲ್ಲಿ 3 ವಿಕೆಟಿಗೆ 210 (ಜಾನಿ ಬೇರ್‌ಸ್ಟೋ 100 ಔಟಾಗದೆ, ಹೇಲ್ಸ್ 19, ಜೋ ರೂಟ್ 54, ಬೆನ್ ಸ್ಟೋಕ್ಸ್ 23 ಔಟಾಗದೆ, ಕೆಶ್ರಿಕ್ ವಿಲಿಯಮ್ಸ್ 50ಕ್ಕೆ 2).