ಪ್ಯಾರಿಸ್: ವಿಶ್ವದ ನಂಬರ್ ವನ್ ಟೆನಿಸಿಗ ಕಾರ್ಲೋಸ್ ಅಲ್ಕರಾಜ್ ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ಸರ್ಬಿಯನ್ ಸ್ಟಾರ್ ನೊವಾಕ್ ಜೊಕೋವಿಕ್ ಅವರಿಗೆ ಎದುರಾಗಲಿದ್ದಾರೆ.
ಕಳೆದ ತಡರಾತ್ರಿಯ ಪಂದ್ಯದಲ್ಲಿ ಸ್ಪೇನ್‌ನ ಅಲ್ಕ ರಾಜ್ ಗ್ರೀಕ್ ಹೀರೋ ಸ್ಟೆಫನಸ್ ಸಿಸಿಪಸ್ ಆಟವನ್ನು 6-2, 6-1, 7-6 (7-5)ರಿಂದ ಮುಗಿಸಿದರು. ಇದರೊಂದಿಗೆ ಸಿಸಿಪಸ್ ಅವರ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಕನಸು ಮತ್ತೂಮ್ಮೆ ಛಿದ್ರಗೊಂಡಿತು.
“ಜೊಕೋವಿಕ್ ಟೆನಿಸ್ ಜಗತ್ತಿನ ಶ್ರೇಷ್ಠ ಆಟಗಾರರಲ್ಲೊಬ್ಬರು. ಅವರನ್ನು ಮಣಿಸಲು ಅತ್ಯುತ್ತಮ ಪ್ರದರ್ಶನವನ್ನೇ ನೀಡಬೇಕಾಗುತ್ತದೆ” ಎಂಬುದು ಈವರೆಗೆ ಏಕೈಕ ಗ್ರ್ಯಾನ್‌ಸ್ಲಾಮ್ ಗೆದ್ದಿರುವ ಅಲ್ಕರಾಜ್ ಅಭಿಪ್ರಾಯ. ಈ ಪ್ರಶಸ್ತಿ ಕಳೆದ ವರ್ಷದ ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಒಲಿದಿತ್ತು. ಇದು ಅವರಿಗೆ ಮೊದಲ ಫ್ರೆಂಚ್ ಓಪನ್ ಸೆಮಿಫೈನಲ್ ಆಗಿದೆ.
ದಿನದ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಜೊಕೋವಿಕ್ ಅವರು ರಷ್ಯಾದ ಕರೆನ್ ಕಶನೋವ್ ವಿರುದ್ಧ 4 ಸೆಟ್‌ಗಳ ಹೋರಾಟ ನಡೆಸಿ 4-6, 7-6 (7-0), 6-2, 6-4 ಅಂತರದ ಜಯ ಸಾಧಿಸಿದರು. ಇದು ಜೊಕೋವಿಕ್ ಕಾಣುತ್ತಿರುವ 12ನೇ ಫ್ರೆಂಚ್ ಓಪನ್ ಸೆಮಿಫೈನಲ್.
ಜೊಕೋವಿಕ್-ಅಲ್ಕರಾಜ್ ಈವರೆಗೆ ಒಮ್ಮೆಯಷ್ಟೇ ಮುಖಾಮುಖೀ ಆಗಿದ್ದಾರೆ. ಅದು ಸ್ಪೇನ್‌ನಲ್ಲಿ ನಡೆದ 2021ರ ಮ್ಯಾಡ್ರಿಡ್ ಮಾಸ್ಟರ್ ಪಂದ್ಯಾವಳಿ. ಇಲ್ಲಿನ ಸೆಮಿಫೈನಲ್‌ನಲ್ಲಿ ಅಲ್ಕರಾಜ್ ಗೆಲುವು ಸಾಧಿಸಿದ್ದರು.