ಯಡ್ರಾಮಿ: ತಾಲೂಕಿನಲ್ಲಾದ ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಸತತ ಐದು ದಿನದಿಂದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಸ್ಥಳಕ್ಕೆ ತಹಶೀಲ್ದಾರ್, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಭೇಟಿ ನೀಡಿ, ರೈತರ ಸಮಸ್ಯೆ ಆಲಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ಮಾತನಾಡಿ, ಬೆಳೆ ನಷ್ಟವಾದ ಕುರಿತು ಮಾಡಿದ ಜಂಟಿ ಸಮೀಕ್ಷೆ ಸಂಪೂರ್ಣ ವಿಫಲವಾಗಿದೆ. ತಾಲೂಕಿನ ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯ ಜಂಟಿ ಸಮೀಕ್ಷೆಯನ್ನು ಮೇಲಧಿಕಾರಿಗಳಿಗೆ ನೀಡದೇ ಇರುವುದು ದೊಡ್ಡ ಪ್ರಮಾದ. ಈ ಕುರಿತು ಖುದ್ದಾಗಿ ಸರ್ಕಾರದ ಕಂದಾಯ ಸಚಿವರಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು, ತಾಲೂಕಿನ ರೈತರು ಬೆಳೆ ನಷ್ಟ ಪರಿಹಾರದಿಂದ ವಂಚಿತರಾಗದಂತೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರತಿಭಟನೆ ನಿಲ್ಲಿಸಿ, ಮನೆಗೆ ತೆರಳಿ ಎಂದು ವಿನಂತಿ ಮಾಡಿದರು.
ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರ ಮಾತನಾಡಿ, ಬೆಳೆ ನಷ್ಟ ಪರಿಹಾರದ ಸಮೀಕ್ಷೆ ವರದಿ ಕಳುಹಿಸುವಲ್ಲಿ ತಾಲೂಕಾಡಳಿತ ವಿಳಂಬ ಮಾಡಿದ್ದೆ ಸಮಸ್ಯೆಗೆ ಕಾರಣವಾಗಿದೆ. ನಾನು ಈ ಕುರಿತು ತಾಲೂಕಾಡಳಿತಕ್ಕೆ ಆರು ಜ್ಞಾಪನಾ ಪತ್ರಗಳನ್ನು ಬರೆದಿದ್ದೇನೆ. ಆದರೆ ಪ್ರಯೋಜನವಾಗಿಲ್ಲ. ಆದರೂ ಈ ಸಮಸ್ಯೆಯನ್ನು ನಾವು ಗಂಭೀರವಾಗಿ ಪರಿಗಣಿಸಿ ಡಿ.24ರ ಮಧ್ಯಾಹ್ನ ಸರ್ಕಾರಕ್ಕೆ ಮಾಹಿತಿ ಕಳುಹಿಸಿಯೇ ತಮ್ಮಲ್ಲಿ ಬಂದಿದ್ದೇನೆ ಎಂದು ಪ್ರತಿಭಟನಾಕಾರರಿಗೆ ಮಾಹಿತಿ ನೀಡಿದರು.
ಇದು ಸರ್ಕಾರದ ಹಂತದಲ್ಲಿ ಚರ್ಚೆ ಆಗುವಂತದ್ದು. ಆದರೆ ಈ ಸಮಸ್ಯೆಗೆ ಕಾರಣರಾದವರ ಬಗ್ಗೆ ತನಿಖೆ ಆಗಲಿದೆ. ನಂತರ ಸಂಬಂಧಪಟ್ಟ ಮೇಲಧಿಕಾರಿಗಳು ಸೂಕ್ತ ಕ್ರಮ ಜರುಗಿಸಬಹುದು ಎಂದರು.
ತಾಲೂಕಿನ ಕೃಷಿ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯತನದಿಂದ ಕರ್ತವ್ಯ ನಿರ್ವಹಿಸುತ್ತಿರುವ ಕುರಿತು ತಾವು ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.
ಒಂದು ವಾರದಲ್ಲಿ ಲಾಗಿನ್ ನೀಡಿ, ರೈತರ ಬೆಳೆ ನಷ್ಟ ಪರಿಹಾರದ ಮಾಹಿತಿ ಸಲ್ಲಿಕೆಯಾಗುವಂತೆ ಮಾಡಿ, ಕೂಡಲೇ ಖಾತೆಗೆ ಪರಿಹಾರ ಜಮೆ ಮಾಡಬೇಕು. ಈ ಕುರಿತು ಸರ್ಕಾರ, ಕ್ಷೇತ್ರದ ಶಾಸಕರು ಮುತುವರ್ಜಿ ವಹಿಸದಿದ್ದರೆ ಈ ಭಾಗದ ಮಠಾಧಿಧೀಶರು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ.
-ಡಾ| ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮಡಿವಾಳೇಶ್ವರ ಮಠ, ಕಡಕೋಳ