Advertisement

ನಿರುದ್ಯೋಗಿಗಳನ್ನು ಉದ್ಯಮಶೀಲರನ್ನಾಗಿಸುವುದೇ ಗುರಿ

12:25 PM Sep 11, 2018 | |

ಮಂಗಳೂರು: ರಾಜ್ಯ ಸರಕಾರದ ಕೌಶಲಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಎಂಬ ಹೊಸ ಇಲಾಖೆಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಕಚೇರಿ
ಯೆಯ್ನಾಡಿಯ ಕೈಗಾರಿಕಾ ವಲಯದಲ್ಲಿ ಶೀಘ್ರವೇ ಉದ್ಘಾಟನೆಯಾಗಲಿದೆ. ಜಂಟಿ ನಿರ್ದೇಶಕ ಅರವಿಂದ ಡಿ. ಬಾಳೇರಿ “ಉದಯವಾಣಿ’ಯೊಂದಿಗೆ ಇಲಾಖೆಯ ಕಾರ್ಯ ವೈಖರಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

Advertisement

* ಹೊಸ ಕಚೇರಿ ಸ್ವರೂಪ ಹೇಗೆ?
ನಮ್ಮದು ಹೊಸ ಇಲಾಖೆ ಆಗಿರುವ ಕಾರಣ ಮಂಗಳೂರಿನಲ್ಲಿಯೂ ಅದಕ್ಕೆ ಬೇಕಾದ ಎಲ್ಲ ಮೂಲ ಸೌಕರ್ಯ ವನ್ನು ರೂಪಿಸಬೇಕಾಗಿದೆ. ಸದ್ಯ ಐದು ಮಂದಿ ಸಿಬಂದಿಯನ್ನು ನೇಮಿಸಲಾಗಿದೆ. ಅವರ ಪೈಕಿ ಒಬ್ಬರು ಸ್ವಉದ್ಯೋಗ ಕೋರಿ ಬರುವವರಿಗೆ ಮಾರ್ಗದರ್ಶನ ನೀಡಲಿದ್ದು, ಮೊದಲ ಹಂತವಾಗಿ “ದಿಶಾ’ ಎಂಬ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

* ಏನಿದು “ದಿಶಾ’?
ವಿದ್ಯಾವಂತ ನಿರುದ್ಯೋಗಿಗಳಿಗೆ ಮಾರ್ಗದರ್ಶನ ನೀಡಲು ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್‌) ಮೂಲಕ ಕೈಗೆತ್ತಿಕೊಳ್ಳುತ್ತಿರುವ ಯೋಜನೆಯಿದು. ಕೈಗಾರಿಕಾ ಇಲಾಖೆ, ಕೌಶಲಾಭಿವೃದ್ಧಿ ಇಲಾಖೆ ಮತ್ತು ಸಂಯುಕ್ತ
ರಾಷ್ಟ್ರಗಳ ಅಭಿವೃದ್ಧಿ ಸಂಸ್ಥೆ ಸಹಯೋಗವಿರಲಿದೆ. 4 ಹಂತಗಳಲ್ಲಿ ಯೋಜನೆ ಜಾರಿಗೊಳ್ಳಲಿದ್ದು, ಮೊದಲಿಗೆ “ದಿಶಾ ಔಟ್‌ರೀಟ್‌’ ಎಂಬ ಕಾರ್ಯಕ್ರಮದಡಿ ಮಾರ್ಚ್‌ನೊಳಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 5 ಸಾವಿರ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ 2,500 ಸ್ವ ಉದ್ಯೋಗ ಆಸಕ್ತ ಅಂತಿಮ ವರ್ಷದ ಎಂಜಿನಿಯರಿಂಗ್‌ ಕಾಲೇಜು, ಐಟಿಐ, ಡಿಪ್ಲೋಮಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ವಂತ ಉದ್ಯಮದತ್ತ ಪ್ರೇರೇಪಿಸಲಾಗುವುದು. ನಮ್ಮ ಮೊದಲ ಆದ್ಯತೆ ಸರಕಾರಿ ಕಾಲೇಜುಗಳಾಗಿವೆ. 

*ಮಾಹಿತಿಯಿಂದ ಪ್ರಯೋಜನ?
ಮಾಹಿತಿ ನೀಡಿದ ಬಳಿಕ 2ನೇ ಹಂತದಲ್ಲಿ 3 ಜಿಲ್ಲೆಗಳಲ್ಲಿ ತಲಾ 625 ವಿದ್ಯಾರ್ಥಿಗಳಿಗೆ “ದಿಶಾ ರೆಡಿ’ ಎಂಬ
ಪರಿಕಲ್ಪನೆಯಡಿ ಮಾಹಿತಿ ಕಾರ್ಯಾಗಾರ ನಡೆಸಲಾಗುವುದು. ಅನಂತರ ದಿಶಾ ಸ್ಟಡೀ ಎಂಬ ಹಂತದಡಿ ಮತ್ತೆ ಮಾಹಿತಿ ಕಾರ್ಯಾಗಾರ ನಡೆಸಿ ಅಂತಿಮವಾಗಿ 60 ಮಂದಿ ಯನ್ನು ಆಯ್ಕೆ ಮಾಡಿ ಸ್ವಂತ ಉದ್ದಿಮೆ
ಪ್ರಾರಂಭಿಸಲು ತರಬೇತಿ ನೀಡಲಾಗುತ್ತದೆ. ಪೂರಕ ಮೂಲ ಸೌಕರ್ಯ, ಹಣಕಾಸು ನೆರವು ಒದಗಿಸಲಾಗು
ವುದು. ಈ ಹಿನ್ನೆಲೆಯಲ್ಲಿ ಶೀಘ್ರವೇ “ದಿಶಾ ಸೆಲ್‌’ ಆರಂಭವಾಗಲಿದೆ.

*ಯಾರೆಲ್ಲ ಇದರ ಪ್ರಯೋಜನ ಪಡೆಯಬಹುದು?
ಸಾಮಾನ್ಯವಾಗಿ ಸ್ವಂತ ಉದ್ದಿಮೆ ಮಾಡಲು ಮುಂದಾಗುವವರಿಗೆ ಯಾವುದು ಮಾಡಬಹುದು, ಸಾಲ ಯಾರು ಕೊಡುತ್ತಾರೆ, ಉದ್ಯಮ ಯೋಜನೆ ಹೇಗೆ ಮಾಡುವುದು ಎಂಬುದು ತಿಳಿದಿರದು. ಹೀಗಾಗಿ, ಸಣ್ಣ ಗುಡಿ ಕೈಗಾರಿಕೆಯಿಂದ ಹಿಡಿದು 5 ಕೋಟಿ ರೂ. ವರೆಗಿನ ಮೊತ್ತದ ಯಾವುದೇ ಮಾದರಿ ಕೈಗಾರಿಕೆ/ಉದ್ಯಮ ಸ್ಥಾಪಿಸಲು ಇಚ್ಛಿಸುವವರು ಇಲಾಖೆಯಲ್ಲಿ ಮಾಹಿತಿ ಪಡೆಯಬಹುದು.

Advertisement

*ಕರಾವಳಿಯಲ್ಲಿ ಯಾವ ಮಾದರಿ ಸ್ವಂತ ಉದ್ದಿಮೆಗೆ ಅವಕಾಶಗಳಿವೆ?
ಆಹಾರೋದ್ಯಮ, ಮೀನುಗಾರಿಕೆ, ಫಾರೆಸ್ಟ್‌ ಬೇಸ್ಡ್ ಆಗ್ರೋ ಇಂಡಸ್ಟ್ರಿ ಸ್ಥಾಪಿಸುವತ್ತ ಹೆಚ್ಚಿನವರು ಆಸಕ್ತಿ ತೋರಿಸುತ್ತಿದ್ದಾರೆ.

*ಮೊದಲ ಬಾರಿಗೆ ಈ ಮಾದರಿಯ ಸೇವೆ ಲಭಿಸುತ್ತಿದೆಯೇ?
ಕೇಂದ್ರ ಸರಕಾರದ ಕೌಶಲಾಭಿವೃದ್ಧಿ ಇಲಾಖೆಯಡಿ ಈಗಾಗಲೇ ಉತ್ತೇಜನ-ಸಾಲ ಸೌಲಭ್ಯ ಲಭ್ಯವಿದೆ. ಆದರೆ ರಾಜ್ಯ ಸರಕಾರದಿಂದ ಮೊದಲ ಬಾರಿಗೆ ದಕ್ಷಿಣ ಕನ್ನಡ ಸಹಿತ 16 ಜಿಲ್ಲೆಗಳಲ್ಲಿ ಈ ಮಾದರಿ ಕಾರ್ಯಕ್ರಮ ಪ್ರಾರಂಭವಾಗುತ್ತಿದೆ. ಇದಕ್ಕಾಗಿ ಇಲಾಖೆಗೆ 750 ಕೋಟಿ ರೂ. ನೀಡಲಾಗಿದೆ.  

*ಆದರೆ, ಈಗಾಗಲೇ ಇಂಥ ಹಲವು ತರಬೇತಿ ವ್ಯವಸ್ಥೆ ಇದೆಯಲ್ಲಾ ?
ಪ್ರಸ್ತುತ ಹಲವು ಮಾದರಿಯ ಸರಕಾರಿ ಯೋಜನೆ ಗಳಿವೆ. ತೋಟ ಗಾರಿಕೆ, ಕೃಷಿ ಅಥವಾ ಸಮಾಜ ಕಲ್ಯಾಣ, ಮೀನುಗಾರಿಕೆ ಇಲಾಖೆಗಳಲ್ಲಿಯೇ ಮಾಹಿತಿ ಲಭ್ಯ ಲಭ್ಯವಾಗಲಿದ್ದು, ಆಸಕ್ತರು ಸಂಪರ್ಕಿಸಬಹುದು.
ಇನ್ನು ಮುಂದೆ ಸ್ವ ಉದ್ಯೋಗ ಕುರಿತಂತೆ ಎಲ್ಲ ಮಾಹಿತಿಯೂ ನಮ್ಮ ಇಲಾಖೆಯಡಿಯೇ ಲಭ್ಯವಾಗಲಿದೆ.

ಕೇಂದ್ರ ಸರಕಾರದ ಕೌಶಲಾಭಿವೃದ್ಧಿಗೆ ಸಂಬಂಧಿಸಿದ ಇಲಾಖೆ ಮಾದರಿಯಲ್ಲೇ ರಾಜ್ಯ ಸರಕಾರವೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಸೃಜಿಸಿದೆ. ಈ ಹಿಂದೆ ಕೈಗಾರಿಕಾ ಇಲಾಖೆಯಲ್ಲಿದ್ದ ಸಿಡಾಕ್‌, ಜಿಟಿಡಿಸಿ ಸೇರಿದಂತೆ ಹಲವು ಸಂಸ್ಥೆಗಳು ಇದರಲ್ಲಿ ವಿಲೀನಗೊಂಡಿವೆ. ದಕ್ಷಿಣ ಕನ್ನಡ ಸೇರಿದಂತೆ ಸುಮಾರು 16 ಜಿಲ್ಲೆಗಳಲ್ಲಿ ಈ ಹೊಸ ಇಲಾಖೆ ಕಾರ್ಯ ಚಟುವಟಿಕೆಗಳು ಶುರುವಾಗುತ್ತಿವೆ. ಆ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರ ಜಿಲ್ಲೆ ಒಳಗೊಂಡಂತೆ ಮಂಗಳೂರಿನ ಯೆಯ್ನಾಡಿಯ ಕೈಗಾರಿಕಾ ಪ್ರದೇಶದಲ್ಲಿ ಸೆಪ್ಟಂಬರ್‌ ಮೊದಲ ವಾರದೊಳಗೆ ಕೇಂದ್ರ ಕಚೇರಿ ಉದ್ಘಾಟನೆಯಾಗುವ ಸಾಧ್ಯತೆಯಿದೆ. 

*ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next