Advertisement

ರೈತರ ಹಿತಕ್ಕಾಗಿ ಜೆಡಿಎಸ್‌ ಸೇರ್ಪಡೆ: ಸಂಜಯ ಖೇಣಿ

03:45 PM Apr 30, 2018 | Team Udayavani |

ಹುಮನಾಬಾದ: ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಮರುಆರಂಭಕ್ಕಾಗಿ ಹಾಗೂ ರೈತರ ಹಿತ ಕಾಪಾಡುವ ಉದ್ದೇಶದಿಂದ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದೇನೆ ಎಂದು ಸಂಜಯ ಖೇಣಿ ಹೇಳಿದರು.

Advertisement

ಮನ್ನಾಎಖೇಳ್ಳಿ ಗ್ರಾಮದ ಜರಿನ್‌ ಹಾಲ್‌ನಲ್ಲಿ ಅನ್ಯ ಪಕ್ಷದವರ ಜೆಡಿಎಸ್‌ಗೆ ಸೇರ್ಪಡೆ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜೆಡಿಎಸ್‌ ರೈತರ ಏಳ್ಗೆಗಾಗಿ ಶ್ರಮಿಸುತ್ತಿದೆ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಚುನಾವಣಾ ಪ್ರಣಾಳಿಕೆ ತಯಾರಿಸಲಾಗಿದೆ. ಈ ನಿಟ್ಟಿನಲ್ಲಿ ನಾನು ಜೆಡಿಎಸ್‌ಗೆ ಸೆರ್ಪಡೆಗೊಂಡಿದ್ದು, ನನ್ನ ಅನೇಕ ಬೆಂಬಲಿಗರು ಕೂಡ ನನ್ನೊಂದಿಗೆ ಬಂದಿದ್ದಾರೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಕ್ತ ಬೀದರ ಜಿಲ್ಲೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು. ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೆ ಸರ್ಕಾರ ಸೂಕ್ತ ಸಮಯಕ್ಕೆ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಕಾರ್ಖಾನೆ ಬಂದ್‌ ಆಗಿದೆ. ಇದಕ್ಕೆ ಆಡಳಿತ, ಸರ್ಕಾರ ಹಾಗೂ ಸ್ಥಳೀಯ ಶಾಸಕರು ಕೂಡ ಕಾರಣ ಎಂದು ಆರೋಪಿಸಿದರು.

ಕೊನೆಯ ಹಂತದಲ್ಲಿ ಕಾರ್ಖಾನೆಗೆ ಬಿಡುಗಡೆಯಾದ 10 ಕೋಟಿ ರೂ. ಹಣದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಗಳು ಕೇಳಿಬರುತ್ತಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆ ಹಣದಲ್ಲಿ ಅಕ್ರಮ ಮಾಡಿದರೆ ಈವರೆಗೆ ನಾನು ಜೈಲಿನಲ್ಲಿ ಇರುತ್ತಿದ್ದೆ. ಕಾರ್ಖಾನೆ ಪ್ರಾರಂಭಕ್ಕೂ ಮುನ್ನ ಸಭೆ ನಡೆಸಿ, ಕಾರ್ಖಾನೆಗೆ ಬೇಕಾದ ಎರಡು ಕೋಟಿ ರೂ. ಅನುದಾನ ತಂದು ಪ್ರಾರಂಭಿಸಿದ್ದು, ಹಣ ಬಿಡುಗಡೆಗೊಂಡ ನಂತರ ಆ ಹಣ ಮರು ಪಾವತಿಸಬೇಕು ಎಂಬ ಷರತ್ತಿಗೆ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಸಹಿ ಹಾಕಿದ್ದಾರೆ. ಸಭೆಯ ನಡುವಳಿಕೆ ಅನುಸಾರ ಎರಡು ಕೋಟಿ ಹಣ ಪಾವತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಬಾರಿ ಜೆಡಿಎಸ್‌ಗೆ ಎಲ್ಲಾ ರೈತ ವರ್ಗದವರು ಕೂಡ ಸಹಕಾರ ನೀಡುತ್ತಿದ್ದು, ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಕಾರ್ಖಾನೆ ಮರು ಆರಂಭಗೊಂಡು ಈ ಭಾಗದ ರೈತರಿಗೆ ನೆರವಾಗಲಿದೆ ಎಂದರು.

Advertisement

2008ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಎದುರು ಚುನಾವಣೆಗೆ ಧುಮಿಕ್ಕಿದ್ದು, 2013ರ ಚುನಾವಣೆಯಲ್ಲಿ ಅಶೋಕ ಖೇಣಿ ಗೆಲುವಿಗೆ ಮುಂದಾದ ನೀವು ಇದೀಗ ಬಂಡೆಪ್ಪ ಖಾಶೆಂಪುರ ಪರ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಶೋಕ ಖೇಣಿ ಅವರು ಹೇಳಿದಂತೆ ನಡೆದಿಲ್ಲ. ಅಭಿವೃದ್ಧಿ ಕಾರ್ಯ ಕೂಡ ನಡೆದಿಲ್ಲ. ಕಾರಣ ಬಂಡೆಪ್ಪ ಪರ ಕೆಲಸ ಮಾಡುತ್ತಿದ್ದೇನೆ ಎಂದರು.

ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಮಾತನಾಡಿ, ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಸ್ಥಿತಿಗತಿಗೆ ರಾಜ್ಯ ಸರ್ಕಾರ ನೇರ ಕಾರಣ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಕ್ಷೇತ್ರದ ಸಚಿವರು ಕೂಡ ಕಾರಣ. ರೈತರ ಹಿತಕಾಪಾಡುವ ನಿಟ್ಟಿನಲ್ಲಿ ಕಾರ್ಖಾನೆಗೆ ಆರ್ಥಿಕ ನೇರವು ನೀಡಬೇಕಿತ್ತು. ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ವಿಶೇಷ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ನಮ್ಮ ಜಿಲ್ಲೆಯ ಕಾರ್ಖಾನೆ ಬಗ್ಗೆ ಯಾಕೆ ಕಾಳಜಿ ವಹಿಸಿಲ್ಲ ಎಂದು ಪ್ರಶ್ನಿಸಿದರು. 

ಸಂಜಯ ಖೇಣಿ ತನ್ನದೆ ಆದ ಘನತೆ ಹೊಂದಿದ್ದಾರೆ. ಅವರ ಜೊತೆಗೆ ಅವರ ಬೆಂಬಲಿಗರೂ ಕೂಡ ನಮ್ಮ ಪಕ್ಷಕ್ಕೆ ಬಂದಿದ್ದು, ಪಕ್ಷಕ್ಕೆ ಹೆಚ್ಚು ಶಕ್ತಿ ಬಂದಿದೆ ಎಂದರು. ನಸಿಮೊದ್ದೀನ್‌ ಪಟೇಲ್‌, ರಮೇಶ ಪಾಟೀಲ, ಸಂತೋಷ ರಾಸೂರ್‌, ಸಂಜುರೆಡ್ಡಿ ನಿರ್ಣಾ, ದತ್ತಾತ್ರೇಯ, ಶಿವರಾಜ ಹುಲಿ, ರಾಜು ಚಿಂತಾಮಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next