Advertisement
ಹೊಸದಾಗಿ ನೆಂಟಸ್ತನ ಬೆಳೆಸಿದವರು, ದಾವಣಗೆರೆಯ ಹುಡುಗಿಯನ್ನ ಮದುವೆ ಮಾಡಿಕೊಂಡವರು, ಮನೆಗೆ ಬರುವಾಗ ಹೊಟ್ಟೆ ನಂಜಪ್ಪನ ಅಂಗಡಿಯ ಮೈಸೂರು ಪಾಕ್, ಖಾರ ತರೋದನ್ನ ಮಾತ್ರ ಮರಿಬೇಡಿ ಎಂದು ಯಾವುದೇ ಮುಲಾಜಿಲ್ಲದೆ ಮನವಿ ಮಾಡಿಕೊಂಡಿರುವ ಉದಾಹರಣೆಗಳಿವೆ. ಅಂದರೆ, ದಾವಣಗೆರೆಯಲ್ಲಿ ತಯಾರಾಗುವ ಮೈಸೂರ್ ಪಾಕ್ ಖಾರದ ರುಚಿ ಹೇಗಿರಬಹುದೂ ಲೆಕ್ಕ ಹಾಕಿ.
Related Articles
Advertisement
ಹೊಟ್ಟೆ ನಂಜಪ್ಪನ ತಿಂಡಿ ಅಂಗಡಿ ಪ್ರಾರಂಭವಾಗಿದ್ದು ಸ್ವಾತಂತ್ರ ಪೂರ್ವದಲ್ಲಿ 1941ರಲ್ಲಿ. ಅಜ್ಜಂಪುರ ಮೂಲದ ನಂಜಪ್ಪ ಶೆಟ್ಟರು ತಿಂಡಿ ಅಂಗಡಿ ಪ್ರಾರಂಭಿದರು. ಅವರಿಗೆ ಹೊಟ್ಟೆ ಇದ್ದ ಕಾರಣಕ್ಕಾಗಿಯೇ ಹೊಟ್ಟೆ ನಂಜಪ್ಪನ ಅಂಗಡಿ ಎಂದು ಕರೆಯಲಾಗುತ್ತಿತ್ತು. ನಂಜಪ್ಪಶೆಟ್ಟರು ಮರಣ ಹೊಂದಿ 56 ವರ್ಷಗಳೇ ಕಳೆದಿವೆ. ಈ ಕ್ಷಣಕ್ಕೂ ಹೊಟ್ಟೆ ನಂಜಪ್ಪ ಅಂಗಡಿ ಎಂದರಷ್ಟೇ ಜನರಿಗೆ ಗೊತ್ತಾಗೋದು. ನಂಜಪ್ಪಶೆಟ್ಟರ ನಂತರ ಅವರ ಮಗ ಪರಮೇಶ್ವರಶೆಟ್ಟಿ, ಈಗ ಪರಮೇಶ್ವರಶೆಟ್ಟರ ಮಗ ಎ.ಪಿ. ಕಾಶೀನಾಥ್‌ಶೆಟ್ಟಿ ಅಂಗಡಿ ನಡೆಸುತ್ತಿದ್ದಾರೆ.
ಹೊಟ್ಟೆ ನಂಜಪ್ಪನ ಅಂಗಡಿಯ ವಿಶೇಷ ಎಂದರೆ ತೂಕದ ಲೆಕ್ಕದಲ್ಲೇ ಮಂಡಕ್ಕಿ, ಹತ್ತಿಕಾಯಿ, ಮೈಸೂರು ಪಾಕ್, ಬೂಂದಿ ಕೊಡುವುದು. 5 ರೂಪಾಯಿ ಕೊಟ್ಟು ಮಂಡಕ್ಕಿ, ಹತ್ತಿಕಾಯಿ, ಬೂಂದಿ ತೆಗೆದುಕೊಂಡರೂ ತೂಕ. ಕೆಜಿಗಟ್ಟಲೆ ತೆಗೆದುಕೊಂಡರೂ ತೂಕದ ಲೆಕ್ಕಾಚಾರದಲ್ಲೇ ಕೊಡುತ್ತಾರೆ. ಅಂತಿಮ ವರ್ಷದ ಬಿ.ಕಾಂ ವರೆಗೆ ಓದಿರುವ ಕಾಶೀನಾಥ್‌ಶೆಟ್ಟಿಯವರೇ ಈಗಲೂ ಮೈಸೂರುಪಾಕ್, ಖಾರ, ಹತ್ತಿಕಾಯಿ, ಬೂಂದಿ ತಯಾರಿಸುತ್ತಾರೆ.
ಅವರು ಈ ತಿನಿಸುಗಳನ್ನು ತಯಾರಿಸುವಾಗ ಅವರ ಅಂಗಡಿಯ ಕೆಲಸಗಾರರಿಗೂ ನೋ ಎಂಟ್ರಿ. ತಂದೆ ಪರಮೇಶ್ವರ ಶೆಟ್ಟಿ ಹೇಳಿಕೊಟ್ಟಿರುವ ರುಚಿಯ ಟ್ರಿಕ್ ಬೇರೆ ಯಾರಿಗೂ ಗೊತ್ತಾಗದಂತೆ ಸೀಕ್ರೇಟ್ ಮೆಂಟೈನ್ ಮಾಡ್ತೀನಿ’. “ನಮ್ ಅಂಗಡಿಯ ತಿಂಡಿಗಳ ಟೇಸ್ಟ್ ಪ್ರಾರಂಭವಾದಾಗನಿಂದ ಈತನಕ ಚೇಂಜ್ ಮಾಡಿಲ್ಲ. ಹಂಗಾಗಿಯೇ ನಮ್ ಅಂಗಡಿಗೆ ಜನ ಬಹಳ ವಿಶ್ವಾಸ ಇಟ್ಟುಕೊಂಡು ಬರುತ್ತಾರೆ. ನಮಗೆ ದುಡ್ಡು ಮುಖ್ಯ ಅಲ್ಲ. ಟೇಸ್ಟ್. ಜನರ ಪೀತಿ, ನಂಬಿಕೆ ಮುಖ್ಯ ಎನ್ನುತ್ತಾರೆ. 58 ವರ್ಷದ ಕಾಶೀನಾಥಶೆಟ್ಟಿ.
ಇಂದಿನ ವ್ಯಾಪಾರಿ ಮನೋಭಾವದ ದಿನದಲ್ಲೂ ಹೊಟ್ಟೆ ನಂಜಪ್ಪನ ಅಂಗಡಿಗೆ ಹೋಗುವ ಚಿಕ್ಕ ಮಕ್ಕಳಿಗೆ ಫೀಯಾಗಿ ಒಂದು ಹಿಡಿ ಮಂಡಕ್ಕಿ, ಖಾರ, ಸ್ವಲ್ಪ ಮೈಸೂರುಪಾಕ್, ಬೂಂದಿ ಸಿಕ್ಕುತ್ತದೆ. ಅಂದ ಹಾಗೆ, ಅಂಗಡಿ ಓಪನ್ ಆಗೋದು ಮಧ್ಯಾಹ್ನ 3.30 ರಿಂದ ಸಂಜೆ 4.30ರವರೆಗೆ. ಸಂಜೆ 6.30ರಿಂದ 7.30ರ ವರೆಗೆ ಮಾತ್ರ. ಮಂಗಳವಾರ ರಜಾ.
* ರಾ.ರವಿಬಾಬು