Advertisement

ಕ್ಷಯ ರೋಗ ಮುಕ್ತ ಜಿಲ್ಲೆಗೆ ಕೈಜೋಡಿಸಿ

09:10 PM Mar 25, 2021 | Team Udayavani |

ಬೆಳಗಾವಿ : ಜಿಲ್ಲೆಯಲ್ಲಿ ಸುಮಾರು ಶೇ. 90ರಷ್ಟು ಕ್ಷಯರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ ರೋಗ ಮುಕ್ತರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗೀಯ ಉಪ ನಿರ್ದೇಶಕಿ ಡಾ| ಶೆ„ಲಜಾ ತಮ್ಮಣ್ಣವರ ಹೇಳಿದರು.

Advertisement

ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್‌ ಆಸ್ಪತ್ರೆ ಚರಕ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 2003ರಿಂದ ಇಲ್ಲಿಯವರೆಗೆ 78,979 ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಶೇ. 85ರಷ್ಟು ಕ್ಷಯರೋಗಿಗಳಿಗೆ ಪೂರ್ಣ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. 2020-21ನೇ ಸಾಲಿನ ಉತ್ತಮ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ರಾಜ್ಯಮಟ್ಟದ ಪ್ರಶಸ್ತಿ ಜಿಲ್ಲೆಯ ಅಥಣಿ ಕ್ಷಯರೋಗ ಘಟಕದ ರಾಜಶೇಖರ ಕುರಹಟ್ಟಿ ಅವರಿಗೆ ಲಭಿಸಿದ್ದು, ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸಿ ಬೆಳಗಾವಿ ಜಿಲ್ಲೆಯನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಬೇಕೆಂದು ಕರೆ ನೀಡಿದರು.

ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್‌ ಆಸ್ಪತ್ರೆಯ ನಿರ್ದೇಶಕರಾದ ಎಸ್‌. ಸಿ. ಧಾರವಾಡ ಮಾತನಾಡಿ, ಕ್ಷಯರೋಗ ನಿರ್ಮೂಲನೆಯಲ್ಲಿ ಕೇವಲ ಆರೋಗ್ಯ ಇಲಾಖೆ ಮಾತ್ರವಲ್ಲ, ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಗಳು ಹಾಗೂ ಖಾಸಗಿ ವೈದ್ಯರ ಪಾತ್ರ ಅತೀ ಹಿರಿದಾಗಿದೆ. ತಮ್ಮಲ್ಲಿ ಆರೋಗ್ಯ ತಪಾಸಣೆಗೆ ಬರುವ ಜನರಲ್ಲಿ ಕ್ಷಯರೋಗ ಶಂಕಿತರನ್ನು ಗುರುತಿಸಿ ಕ್ಷಯರೋಗ ಪತ್ತೆ ಹಚ್ಚಿ ಸಮಾಜದಲ್ಲಿ ರೋಗ ಪಸರಿಸುವುದನ್ನು ತಡೆಗಟ್ಟಲು ಸಹಕರಿಸಬೇಕು.

ಕ್ಷಯರೋಗ ನಿಯಂತ್ರಣಕ್ಕಾಗಿ ಪ್ರತಿದಿನವನ್ನು ಕ್ಷಯರೋಗ ದಿನವನ್ನಾಗಿ ಪರಿಗಣಿಸಿದಾಗ ಮಾತ್ರ ಕ್ಷಯರೋಗ ನಿರ್ಮೂಲನೆ ಸಾಧ್ಯ ಎಂದು ಹೇಳಿದರು. ಆರ್‌. ಜಿ. ವಿವೇಕಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ಷಯರೋಗ ನಿಯಂತ್ರಣಕ್ಕಾಗಿ ಸಾಕಷ್ಟು ಸಹಕಾರ ಹಾಗೂ ಸೌಲಭ್ಯಗಳನ್ನು ಕಲ್ಪಿಸುತ್ತಿದೆ.

ಕ್ಷಯರೋಗಿ ಎಂದು ದೃಢಪಟ್ಟ ರೋಗಿಗಳಿಗೆ ಮಾಸಿಕ 500 ರೂ.ಗಳಂತೆ ನಿಕ್ಷಯ ಪೋಷನಾ ಯೋಜನೆ, ಕ್ಷಯರೋಗಿಯ ಮಾಹಿತಿ ನೀಡುವ ಎಲ್ಲ ಖಾಸಗಿ ವೈದ್ಯರಿಗೆ 500 ರೂ. ಪ್ರೋತ್ಸಾಹ ಧನ ಹಾಗೂ ರೋಗಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ ಚಿಕಿತ್ಸಾ ನಿರ್ವಾಹಕರಿಗೆ 1000 ರೂ. ಗೌರವ ಧನ ನೀಡಲಾಗುತ್ತಿದೆ.

Advertisement

ಇದನ್ನು ಸದುಪಯೋಗ ಪಡಿಸಿಕೊಂಡು ಆಂದೋಲನ ರೂಪದಲ್ಲಿ ಕ್ಷಯ ಪತ್ತೆ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಹೇಳಿದರು. ಆಶಾ ಕಾರ್ಯಕರ್ತೆಯರಾದ ಲಲಿತಾ ಪಾಟೀಲ ಹಾಗೂ ಸುಮನ ಪ್ರಾರ್ಥಿಸಿದರು. 2020-21ನೇ ಸಾಲಿನಲ್ಲಿ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಉತ್ತಮ ಪ್ರಗತಿ ತೋರಿದ ಅಧಿಕಾರಿಗಳು, ಆಶಾ ಕಾರ್ಯಕರ್ತೆ ಆರೋಗ್ಯ ಸಿಬ್ಬಂದಿ, ಖಾಸಗಿ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸನ್ಮಾನಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಸ್‌.ವಿ. ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಬಿ.ಎನ್‌ ತುಕ್ಕಾರ, ಯಳ್ಳೂರ ರೋಡ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್‌ ಆಸ್ಪತ್ರೆಯ ನಿರ್ದೇಶಕ ಡಾ| ಎಸ್‌.ಸಿ. ಧಾರವಾಡ, ಜಿಲ್ಲಾ ಬಿಮ್ಸ್‌ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ| ಹುಸೇನಸಾಹೆಬ ಖಾಜಿ, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ| ಚಾಂದನಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿ ಕಾರಿ ಡಾ| ಮಹೇಶ ಕಿವಡಸನ್ನವರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿ ಕಾರಿ ಡಾ| ಅನಿಲ ಕೊರಬು, ಸ್ವಪ್ನಿಲ್‌ ಕಾಂಬಳೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಎಲ್ಲಾ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತರು ಇದ್ದರು. ಹಿರಿಯ ಆರೋಗ್ಯ ನಿರೀಕ್ಷಕ ಸಿ.ಜಿ. ಅಗ್ನಿಹೋತ್ರಿ ನಿರೂಪಿಸಿದರು. ಜಿಲ್ಲಾ ಕ್ಷಯರೋಗ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕ ಎಸ್‌.ಜಿ. ಲಾಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next