ಸಿಂದಗಿ: ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಬೇಕಾಗಿದ್ದು ಜೆಡಿಎಸ್ ಪಕ್ಷದಂತೆ ಕಾಂಗ್ರೆಸ್ ಪಕ್ಷ ಜ್ಯಾತ್ಯತೀತ ಮನೋಭಾವ ಹೊಂದಿರುವ ಕಾರಣ ಮಾ. 9ರಂದು ಕೆಪಿಸಿಸಿ ಕಚೇರಿಯಲ್ಲಿ ಬೆಷರತ್ತಿನ ಮೇಲೆ ಸಾಯಂಕಾಲ 4 ಗಂಟೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತೇನೆ ಎಂದು ದಿ| ಶಾಸಕ ಎಂ.ಸಿ. ಮನಗೂಳಿ ಪುತ್ರ ಅಶೋಕ ಮನಗೂಳಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಕುರಿತು ಸ್ಥಳೀಯ ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪ್ರಾಥಮಿಕ ಸದಸ್ಯತ್ವ ಪಡೆದ ಮೇಲೆ ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೇಳುತ್ತೇನೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಗೆಲುವಿಗಾಗಿ ಶ್ರಮಿಸುತ್ತೇನೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಪಟ್ಟಣದಲ್ಲಿ
ಆಯೋಜಿಸಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ಪಕ್ಷದಿಂದ ನನ್ನ ತಂದೆ ಎಂ.ಸಿ. ಮನಗೂಳಿ ಅವರು ಏಳು ಬಾರಿ ಚುನಾವಣೆ ಎದುರಿಸಿ ಎರಡು ಬಾರಿ ಗೆಲವು ಸಾ ಧಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿತ್ತು. ಸಾಮಾನ್ಯ ಚುನಾವಣೆಗಿಂತ ಉಪ ಚುನಾವಣೆ ಅತ್ಯಂತ ಸವಾಲಿನದಾಗಿದೆ. ಮತಗಳು ಒಡೆಯಬಾರದು ಎಂದು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ ಎಂದು ಹೇಳಿದರು.
ದಿ| ಎಂ.ಸಿ. ಮನಗೂಳಿ ಅವರು 14 ತಿಂಗಳ ಸಚಿವ ಸ್ಥಾನದ ಅವಧಿ ಸೇರಿದಂತೆ ಎರಡುವರೆ ವರ್ಷ ಶಾಸಕರಾಗಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ತಾವು ಕಂಡ ಕನಸುಗಳನ್ನು ನನಸು ಮಾಡಿದ್ದಾರೆ. ಆದರೆ ಇತ್ತೀಚೆಗೆ ಮಾಜಿ ಶಾಸಕ ರಮೇಶ ಭೂಸನೂರ ಅವರು ದಿ| ಎಂ.ಸಿ. ಮನಗೂಳಿ ಅವರ ಕನಸನ್ನು ನನಸು ಮಾಡುತ್ತೇವೆ ಎಂದು ಹೇಳಿದರುವುದು ನನಗೆ ಇನ್ನೂ ಅರ್ಥವಾಗಿಲ್ಲ ಎಂದರು.
ಎಂ.ಸಿ. ಮನಗೂಳಿ ಕ್ಷೇತ್ರದ ದೊಡ್ಡ ಶಕ್ತಿಯಾಗಿದ್ದರು. ಅವರು ನಿತ್ಯ ಕ್ಷೇತ್ರದ ಅಭಿವೃದ್ಧಿ ಜಪವನ್ನೇ ಮಂತ್ರಿಸುತ್ತಿದ್ದರು. ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ 1300 ಎಕರೆ ವಿಸ್ತಾರವುಳ್ಳ ತಾಲೂಕಿನ ಬಳಗಾನೂರ ಕೆರೆಯಿಂದ ಸುಮಾರು 27.10 ಕೋಟಿ ರೂ. ವೆಚ್ಚದಲ್ಲಿ ಸಿಂದಗಿ ಕೆರೆಗೆ ನೀರು ತರುವ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಪಟ್ಟಣದಲ್ಲಿ ಒಳಚರಂಡಿ ಯೋಜನೆ, ಆಲಮೇಲನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ್ದು, ಆಲಮೇಲದಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆ, ಉತ್ತಮ ರಸ್ತೆ ನಿರ್ಮಾಣ ಸೇರಿದಂತೆ ತಾಲೂಕಿನ ಸುಮಾರು 106 ಗ್ರಾಮಗಳು ಮತ್ತು 16 ತಾಂಡಾಗಳ ಅಭಿವೃದ್ದಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು.
ಗುರಣ್ಣಗೌಡ ಪಾಟೀಲ ನಾಗಾವಿ, ರವಿ ದೇವರಮನಿ, ಮಂಜುನಾಥ ಬಿಜಾಪುರ, ಮುನ್ನಾ ತಾಂಬೊಳಿ, ಸಿದ್ದಣ್ಣ ಚೌಧರಿ ಕನ್ನೊಳ್ಳಿ, ಡಾ| ರಾಜಶೇಖರ ಸಂಗಮ, ಇಕ್ಬಾಲ್ ತಲಕಾರಿ, ಸದಾನಂದ ಹಿರೇಮಠ, ನಿಂಗಣ್ಣ ಬಿರಾದಾರ, ಸಂಗಣ್ಣ ಬಿರಾದಾರ, ಪರುಶುರಾಮ ಕಾಂಬಳೆ, ಜಿಲಾನಿ ನಾಟೀಕಾರ ಇದ್ದರು.