Advertisement
ಉಡುಪಿ ಜಿಲ್ಲೆಯಲ್ಲಿ ಹಿಂದಿನ ಸಾಲಿನಲ್ಲಿ 1ರಿಂದ 10ನೆಯ ತರಗತಿ ವರೆಗೆ 1.56 ಲಕ್ಷ ವಿದ್ಯಾರ್ಥಿಗಳಿದ್ದರು. ಪಿಯುಸಿ, ಪದವಿ ಸೇರಿಸಿದರೆ ಸುಮಾರು 2 ಲಕ್ಷ ವಿದ್ಯಾರ್ಥಿಗಳಿದ್ದರು. ಇದರ ಪ್ರಮಾಣ ದ.ಕ. ಜಿಲ್ಲೆಯಲ್ಲಿ ದುಪ್ಪಟ್ಟು, ಮೂರು ಪಟ್ಟು ಇದೆ. ರಾಜ್ಯದಲ್ಲಿ ಸುಮಾರು 1 ಕೋಟಿಯಷ್ಟಿದ್ದಾರೆ. ರಾಜ್ಯದ ಜನಸಂಖ್ಯೆ ಸುಮಾರು 6 ಕೋಟಿ. ಇವರೆಲ್ಲರೂ ಸೇರಿ ಬಳಸುವ ಪೆನ್ನುಗಳೆಷ್ಟಿರಬಹುದು? ಇದರಲ್ಲಿ ಬಾಲ್ ಪೆನ್ನು ಎಷ್ಟು? ಶಾಯಿ ಪೆನ್ನು ಎಷ್ಟು? ಬಾಲ್ ಪೆನ್ನಿನಲ್ಲಿ ಬಳಸಿ ಎಸೆಯುವುದೆಷ್ಟು? ರೀಫಿಲ್ ಎಸೆಯುವುದೆಷ್ಟು? ಯೂಸ್ ಆ್ಯಂಡ್ ತ್ರೋ ಪೆನ್ನು ತಿಂಗಳಿಗೆ ಎರಡಾದರೂ ಬೇಕಾಗುತ್ತದೆ. ಹೆಚ್ಚುಕಡಿಮೆ ಜನಪ್ರಿಯವಾಗಿರುವ ಜೆಲ್ ಪೆನ್‌ನಲ್ಲಿಯೂ ತಿಂಗಳಿಗೆ ಒಂದಾದರೂ ರೀಫಿಲ್ ಬಳಸಿ ಎಸೆಯುತ್ತಾರೆ. ಈ ರೀಫಿಲ್ ಜತೆಗೆ ತೆಳುವಾದ ಪ್ಲಾಸ್ಟಿಕ್ ಕವರ್ ಕೂಡ ಎಸೆಯುವಂಥದ್ದು. ತಿಂಗಳಿಗೆ ಪ್ರತೀ ಜಿಲ್ಲೆಯಲ್ಲಿ ಲಕ್ಷಗಟ್ಟಲೆ, ರಾಜ್ಯದಲ್ಲಿ ಕೋಟಿಗಟ್ಟಲೆ ಪೆನ್ನುಗಳನ್ನು ಎಸೆಯುತ್ತಿದ್ದೇವೆ. ದೇಶದ ಲೆಕ್ಕ ಕಲ್ಪನೆಗೂ ಅತೀತ.
Related Articles
Advertisement
“ಉಡುಪಿ ಆರ್ಗಾನಿಕ್ ಕ್ಲಬ್’ ವಾಟ್ಸಪ್ ಗ್ರೂಪ್ ಮೂಲಕ ಪ್ರಚಾರ ಮಾಡುವುದಲ್ಲದೆ “ಸೆಲ್ಫಿ ವಿದ್ ಇಂಕ್ ಪೆನ್’ ಘೋಷಣೆಯಡಿ ಫೇಸ್‌ಬುಕ್‌ನಲ್ಲಿ ಚಿತ್ರ ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಹೊಸ ಶೈಕ್ಷಣಿಕ ವರ್ಷ ಆರಂಭವಾಗುವಾಗ ಮುಖ್ಯ ಶಿಕ್ಷಕರು, ಆಡಳಿತ ಮಂಡಳಿ ಅವರು ವಿಶೇಷ ಮುತುವರ್ಜಿ ವಹಿಸಿ ವಿದ್ಯಾರ್ಥಿಗಳಿಗೆ ಶಾಯಿ ಪೆನ್ನುಗಳನ್ನೇ ಪಡೆಯಲು ಸೂಚಿಸಬೇಕೆಂದು ಮಹೇಶ್ ಶೆಣೈ ವಿನಂತಿಸಿದ್ದಾರೆ. ಪಾನೀಯಗಳನ್ನು ಕುಡಿಯುವಾಗ ಉಪಯೋಗಿಸುವ ಪ್ಲಾಸ್ಟಿಕ್ ಸ್ಟ್ರಾ ಬಗ್ಗೆಗೂ ಇದೇ ರೀತಿಯ ಆಂದೋಲನ ಹಲದೇಶಗಳಲ್ಲಿದೆ. ಬಳಸಿ ಎಸೆಯುವ ಪೆನ್ನಿನಂತೆಯೇ ಸ್ಟ್ರಾ ಕೂಡ ಸಣ್ಣ ವಿಚಾರ. ಆದರೆ ಹನಿಗೂಡಿ ಹಳ್ಳ ಅನ್ನುವ ಗಾದೆ ಇಂತಹ ವಿಧದ ಮಾಲಿನ್ಯಕ್ಕೂ ಅನ್ವಯಿಸುತ್ತದೆ. ಪರಿಸರ ರಕ್ಷಣೆ ಎಂದರೆ ಗಿಡ ನೆಡುವುದು ಮಾತ್ರ ಅಲ್ಲ. ಈಗಾಗಲೇ ಕೆಟ್ಟಿರುವ ಪರಿಸರವನ್ನು ಇನ್ನಷ್ಟು ಹಾಳಾಗದಂತೆ ರಕ್ಷಿಸುವುದು. ಆ ದಿಶೆಯಲ್ಲಿ ಶಾಯಿ ಪೆನ್ನು ಉಪಯೋಗಿಸುವುದು, ಸಾಧ್ಯವಾದಲ್ಲೆಲ್ಲ ಸ್ಟ್ರಾ ಬಳಸದೆ ಇರುವುದು ಕೂಡ ಮುಖ್ಯವಾಗುತ್ತವೆ.
ಯಾವುದೇ ಆಂದೋಲನ ಯಶಸ್ವಿಯಾಗಬೇಕಾದರೆ “ನನಗಾಗುವ ಉಪಯೋಗವೇನು?’, “ಅನುಕೂಲತೆಗಳೇನು?’ ಎಂಬ ಮಾನದಂಡವೇ ಮುಖ್ಯ. ಒಂದು ವ್ಯವಸ್ಥೆಯಿಂದ ಪರೋಕ್ಷವಾಗಿ ತನಗೂ ಪ್ರತ್ಯಕ್ಷವಾಗಿ ಇತರರಿಗೂ ಸಮಾಜ-ಪ್ರಕೃತಿಗೂ ಎಷ್ಟೇ ತೊಂದರೆಯಾದರೂ ಆ ಮಾನ ದಂಡವನ್ನು ಯಾರೂ ಸ್ವೀಕರಿಸಲು ಸಿದ್ಧವಿಲ್ಲ. ಇತರರಿಗೆ, ಸಮಾಜಕ್ಕೆ, ಪ್ರಕೃತಿಗೆ ತೊಂದರೆಯಾದರೆ ತನಗೇನು ಎಂಬ ಮಾನಸಿಕತೆ ಹೆಮ್ಮರವಾಗಿ ಬೆಳೆದಿದೆ. ಶಾಯಿ ಪೆನ್ನುಗಳ ಗುಣಮಟ್ಟ, ಶಾಯಿಯ ಗುಣಮಟ್ಟ ಹೆಚ್ಚಿಸಬೇಕು. ಬೇಕಾದಂತೆ ಮೊನೆ, ಶಾಯಿ, ಪೆನ್ನುಗಳು ಎಲ್ಲ ಊರುಗಳಲ್ಲಿ ಲಭ್ಯ ಆಗುವಂತೆ ನೋಡಿಕೊಳ್ಳಬೇಕು. ಒಂದು ವ್ಯವಸ್ಥೆ ಸಂಪೂರ್ಣ ಸತ್ತು ಹೋದ ಮೇಲೆ ಅದನ್ನು ಮತ್ತೆ ಚಾಲ್ತಿಗೆ ತರುವುದು ಬಲು ಕಷ್ಟ. ಇದಕ್ಕೆ ಉದಾಹರಣೆ, ಪಾಲಿಶ್ ರಹಿತ ಅಕ್ಕಿ, ಮಣ್ಣಿನ ಪಾತ್ರೆಯ ಅಡುಗೆ. ಇವುಗಳನ್ನು ನಿರ್ನಾಮ ಮಾಡಿದ ಬಳಿಕ ಇದು ಉತ್ತಮವೆಂದು ಈಗ ಕೆಲವರಿಗೆ ಜ್ಞಾನೋದಯವಾಗುತ್ತಿದೆ. ಶಾಯಿಪೆನ್ನೂ ಇದೇ ವರ್ಗಕ್ಕೆ ಸೇರಬಾರದು. ಮುಖ್ಯವಾಗಿ ತನ್ನಿಂದ ಕನಿಷ್ಠ ಮಾಲಿನ್ಯ ಉಂಟಾಗಲಿ ಎಂಬ ಪ್ರಜ್ಞೆ ಮೂಡಬೇಕು.
– ಮಟಪಾಡಿ ಕುಮಾರಸ್ವಾಮಿ