ಉಡುಪಿ: ಶ್ರೀ ರಾಮ ದೇವರು ಅಯೋಧ್ಯೆಯ ಭವ್ಯ ಮಂದಿರದಲ್ಲಿ ಸುಭದ್ರವಾಗಿ ನೆಲೆ ನಿಂತಿದ್ದಾರೆ. ಇನ್ನು ರಾಮ ರಾಜ್ಯದ ಸ್ಥಾಪನೆಯಾಗಬೇಕು. ಮನೆಯಿಲ್ಲದವರಿಗೆ ಮನೆ ನಿರ್ಮಾಣ ಮಾಡುವ ಮೂಲಕ ರಾಮ ರಾಜ್ಯದ ಪರಿಕಲ್ಪನೆಯನ್ನು ಸಾಕಾರ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಅದಮಾರು ಮಠ, ಶ್ರೀಕೃಷ್ಣ ಸೇವಾ ಬಳಗದ ವತಿಯಿಂದ ಶನಿವಾರ ಪೂರ್ಣಪ್ರಜ್ಞ ಕಾಲೇಜಿನ ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ನಡೆದ ವಿಶ್ವಾರ್ಪಣಮ್(ಚಿಂತನ ಮಂಥನ, ಸಂವಾದ) 30ನೇ ಕಾರ್ಯಕ್ರಮದಲ್ಲಿ ಶ್ರೀಪಾದರು ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮಾಡಿದ ತಪಸ್ಸಿನ ಫಲ ನಮಗೆ ಸಿಕ್ಕಿದೆ. ಗುರುಗಳು ನೀಡಿದ ಮಾರ್ಗದರ್ಶನವನ್ನು ರಾಮ ದೇವರಿಗೆ ಸಮರ್ಪಿಸಿದ್ದೇವೆ. ಶ್ರೀರಾಮ ದೇವರ ಮೂಲಕ ಬಂದ ಗೌರವಾರ್ಪಣೆಯನ್ನು ಸಮಾಜದ ಸಾಧು ಸಂತರಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂದರು.
ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವದಿಸಿ, ಸೂಕ್ಷ್ಮ ಚಿಂತನೆ ಮನಸ್ಸಿನಲ್ಲಿದ್ದಾಗ ಭವಿಷ್ಯದಲ್ಲಿ ಅದು ಸ್ಥೂಲ ರೂಪ ಪಡೆಯಲಿದೆ ಎನ್ನುವುದಕ್ಕೆ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನಿದರ್ಶನ. ರಾಮ ರಾಜ್ಯದ ಕಲ್ಪನೆಯನ್ನು ಪೇಜಾವರ ಶ್ರೀಪಾದರು ಬಿತ್ತಿದ್ದಾರೆ. ಅದನ್ನು ನಾವೆಲ್ಲರೂ ಸೇರಿ ಸಾಕಾರ ಮಾಡುವ ನಿಟ್ಟಿನಲ್ಲಿ ಮುಂದೆ ಸಾಗಬೇಕು. ಶ್ರೀಪಾದರು ಪುಸ್ತಕದ ಜ್ಞಾನ ಮತ್ತು ಕರ್ಮ ಮಾರ್ಗವನ್ನು ಸರಿಯಾದ ಮಾರ್ಗದಲ್ಲಿ ಅಳವಡಿಸಿಕೊಂಡಿದ್ದಾರೆ ಎಂದರು. ಪತ್ರಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ, ವಾಗ್ಮಿ ಪ್ರಕಾಶ್ ಮಲ್ಪೆ ವಿವಿಧ ವಿಷಯದ ಕುರಿತು ಮಾತನಾಡಿದರು.
ಸಾಧಕರಾದ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ಬಿ.ಎಂ.ಸೋಮಯಾಜಿ (ಸೇವಾ ಸೇವಧಿ), ಲೆಕ್ಕಪರಿಶೋಧಕ ವಿ.ಕೆ.ಹರಿದಾಸ್ (ಸೇವಾ ರತ್ನಾಕರ) ಹಾಗೂ ಫರಂಗಿಪೇಟೆ ವಿಜಯನಗರ ಶ್ರೀ ಆಂಜನೇಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು (ಸೇವಾನಿಧಿ) ಸಮ್ಮಾನಿಸಲಾಯಿತು.
ಶ್ರೀಕೃಷ್ಣ ಸೇವಾ ಬಳಗದ ಸಂಚಾಲಕ ಗೋವಿಂದರಾಜ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿದ್ವಾನ್ ಕೃಷ್ಣರಾಜ ಭಟ್ ಕುತ್ಪಾಡಿ ನಿರೂಪಿಸಿ, ಲೆಕ್ಕಪರಿಶೋಧಕ ಗಣೇಶ ಹೆಬ್ಟಾರ್ ವಂದಿಸಿದರು.
ಗೋಪೂಜೆ, ಗುರುವಂದನೆ
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸಭಾಂಗಣದ ಮುಂಭಾಗದಲ್ಲಿ ಗೋ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅಯೋಧ್ಯೆಯ ಶ್ರೀರಾಮನ ಮಂತ್ರಾಕ್ಷತೆ ವಿತರಿಸಲಾಯಿತು. ರಾಮ ಸೇವೆಗಾಗಿ ಪೇಜಾವರ ಶ್ರೀಪಾದರಿಗೆ ಅದಮಾರು ಶ್ರೀಪಾದರು ಅರಳು, ರೇಶೆ¾ ಶಾಲು, ಪೇಟ, ಸ್ಮರಣಿಕೆ ಅರ್ಪಿಸಿದರು. ಈ ವೇಳೆ ಶಾಸಕರಾದ ಯಶಪಾಲ್ ಎ.ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಪ್ರಮುಖರಾದ ಡಾ| ಜಿ.ಎಸ್. ಚಂದ್ರಶೇಖರ್, ಡಾ| ಎ.ಪಿ.ಭಟ್, ಯು.ಕೆ. ರಾಘವೇಂದ್ರ ರಾವ್, ಡಾ| ಶಶಿಕಿರಣ್ ಉಮಾಕಾಂತ್, ಶ್ಯಾಮ್ ಕುಡ್ವ ಮೊದಲಾದವರು ಇದ್ದರು.