ಮೂಡಬಿದಿರೆ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುತ್ತಿದೆ. ಆದರೆ ಕರ್ನಾಟಕ ರಾಜ್ಯ ಸರಕಾರವು ಭೇದಭಾವ, ಉಗ್ರ ವಾದವನ್ನೇ ಮುಂದಿಟ್ಟುಕೊಂಡು ವಿಕಾಸ ವನ್ನೇ ಮರೆತಿದೆ. ಕರ್ನಾಟಕವನ್ನೂ ದೇಶದ ಅಭಿವೃದ್ಧಿಯ ಜತೆಗೆ ಮುನ್ನಡೆಸುವ ಅವಕಾಶ ನೀಡಲು ಕನ್ನಡಿಗರು ಮುಂಬರುವ ಚುನಾವಣೆಯ ಸಮರಕ್ಕೆ ಸನ್ನದ್ಧರಾಗಬೇಕು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಕರೆ ನೀಡಿದರು.
ಅವರು ಶನಿವಾರ ಸಂಜೆ ಸ್ವರಾಜ್ಯ ಮೈದಾನದ ಬಳಿಯ ಕಾಮಧೇನು ಸಭಾಂಗಣದಲ್ಲಿ ಮೂಡಬಿದಿರೆ ಕ್ಷೇತ್ರ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರಕಾರದ ಮಹತ್ತಾಕಾಂಕ್ಷಿ ಉಜ್ವಲ ಗ್ಯಾಸ್ ಯೋಜನೆಯಡಿ ಕರ್ನಾಟಕದಲ್ಲಿ ಒಂದು ಕೋಟಿ ಮಹಿಳೆ ಯರು ನೆಮ್ಮದಿ ಕಾಣುವಂತಾಗಿದೆ ಎಂದ ಸಚಿವರು ಕೇಂದ್ರ ಸರಕಾರದ ಸರ್ವಾಂಗೀಣ ಪ್ರಗತಿಯ ಕನಸಿನ ಯೋಜನೆಗಳ ಲಾಭ ಕನ್ನಡಿಗರಿಗೂ ದೊರೆಯುವಂತಾಗಬೇಕು ಎಂದರು.
ಕೇಂದ್ರದಲ್ಲಿ ಮೋದಿ ನಾಯಕತ್ವದ ಬಿಜೆಪಿ ಅಧಿಕಾರಕ್ಕೇರುವಲ್ಲಿ ಕರ್ನಾಟಕದ ಕೊಡುಗೆಯೂ ಇದೆ ಎಂದ ಅವರು ಪ್ರಜಾಪ್ರಭುತ್ವದಲ್ಲಿ ಚುನಾವಣೆ ಒಂದು ಸಮರವೇ ಆಗಿದ್ದು, ಇಲ್ಲಿ ಗೆಲುವಿಗಾಗಿ ಏಕತೆಯಿಂದ ಶ್ರಮಿಸುವ ಅಗತ್ಯವಿದೆ; ಈಗಿನ ರಾಜ್ಯ ಸರಕಾರವನ್ನು ಜವಾಬ್ದಾರಿಯಿಂದ ಮುಕ್ತಗೊಳಿಸುವ ರಾಜನೈತಿಕ ಮಹಣ್ತೀಅರಿತು ಮತದಾನ ಮಾಡುವಂತೆ ಮತದಾರರನ್ನು ಪ್ರೇರೇ ಪಿಸಬೇಕಾಗಿದೆ ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲು, ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ದ.ಕ. ಜಿಲ್ಲಾ ಚುನಾವಣಾ ಸಂಚಾಲಕ ಮೋನಪ್ಪ ಭಂಡಾರಿ, ಮುಖಂಡರುಗಳಾದ ಸುರೇಂದ್ರನ್, ಆಯನೂರು ಮಂಜುನಾಥ್, ಬಾಲಕೃಷ್ಣ ಶೆಟ್ಟಿ, ಬಾಲಕೃಷ್ಣ ಭಟ್, ಕೆ.ಪಿ. ಜಗದೀಶ ಅಧಿಕಾರಿ, ಸುದರ್ಶನ ಎಂ., ಉಮಾನಾಥ ಕೋಟ್ಯಾನ್, ಕ್ಯಾ| ಬೃಜೇಶ್ ಚೌಟ ಉಪಸ್ಥಿತರಿದ್ದರು.
ಬಿಜೆಪಿ ಕ್ಷೇತ್ರ ಅಧ್ಯಕ್ಷ ಈಶ್ವರ ಕಟೀಲು ಸ್ವಾಗತಿಸಿದರು. ಮಂಡಲ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.