Advertisement

ಶ್ರೇಷ್ಠ -ಸ್ವಾವಲಂಬಿ ಭಾರತಕ್ಕೆ ಕೈಜೋಡಿಸಿ

03:46 PM Mar 31, 2022 | Team Udayavani |

ಗದಗ: ಇಂದಿನ ಯುವ ಜನರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಕೌಶಲ್ಯಪೂರ್ಣ ಶಿಕ್ಷಣದ ಅಗತ್ಯವಿದೆ. ಆ ಮೂಲಕ ಆತ್ಮನಿರ್ಭರತೆ, ಸ್ವಾವಲಂಬಿ ರಾಷ್ಟ್ರವನ್ನಾಗಿಸಿ, ನವ ಭಾರತ, ಶ್ರೇಷ್ಠ ಭಾರತವನ್ನಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೊತ್‌ ಕರೆ ನೀಡಿದರು.

Advertisement

ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಕೌಶಲ್ಯ ಭವನದಲ್ಲಿ ಬುಧವಾರ ನಡೆದ ವಿಶ್ವವಿದ್ಯಾಲಯದ 2ನೇ ಘಟಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಪಂಚಾಯತ್‌ ರಾಜ್‌ ಎಂಬುದು ನಮ್ಮ ಅತ್ಯಂತ ಪ್ರಾಚೀನ ವ್ಯವಸ್ಥೆಯಾಗಿದೆ. ಕೃಷಿ ನಮ್ಮ ದೇಶದ ಆತ್ಮ ಮತ್ತು ಆರ್ಥಿಕ ಬೆನ್ನೆಲುಬಾಗಿದೆ. ಭಾರತದಲ್ಲಿ ಹೆಚ್ಚಿನ ಜನಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದು, ಕೃಷಿಯನ್ನೇ ಅವಲಂಬಿಸಿದ್ದಾರೆ. ದೇಶದ ಕೃಷಿ ಮತ್ತು ಗ್ರಾಮೀಣ ಸಬಲತೆ, ಸುಸ್ಥಿರ ಅಭಿವೃದ್ಧಿ ಕುರಿತು ಕರ್ನಾಟಕ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ವೈಜ್ಞಾನಿಕ ಅಧ್ಯಯನ, ಶಿಕ್ಷಣ ಮತ್ತು ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ದೇಶದ ಏಕೈಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಇದಾಗಿದೆ. ರಾಜ್ಯದ ಹೃದಯ ಭಾಗದಲ್ಲಿರುವ ಗದಗ ಜಿಲ್ಲೆ ಧಾರ್ಮಿಕ, ಸಾಂಸ್ಕೃತಿಕ, ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಖ್ಯಾತಿ ಹೊಂದಿದೆ. ಗಂಗೂಬಾಯಿ ಹಾನಗಲ್‌ ಮತ್ತು ಭೀಮಸೇನ್‌ ಜೋಶಿ ಅವರಂತಹ ಸಂಗೀತಗಾರರನ್ನು ನೀಡಿದ ಪುಣ್ಯಭೂಮಿಯಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾನಿಲಯ ಕೃಷಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶಿಕ್ಷಣ ನೀಡುತ್ತಿರುವುದು ಸ್ತುತ್ಯರ್ಹ ಎಂದರು.

ವಿಶ್ವವಿದ್ಯಾಲಯಗಳಲ್ಲಿ ಪ್ರಾಪ್ತಿಯಾಗುವ ವಿದ್ವತ್ತನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಪದವಿ ಎಂಬುದು ವೃತ್ತಿ ಜೀವನದ ಯಶಸ್ಸಿಗೆ ಅಡಿಪಾಯವಾಗಲಿದೆ. ಯುವ ಸಮುದಾಯ ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿಭಾಯಿಸಿ “ಏಕ ಭಾರತ್‌ ಶ್ರೇಷ್ಠ ಭಾರತ್‌’ ನಿರ್ಮಿಸುವ ಗುರಿ ಹೊಂದಬೇಕು. ಸ್ವಾಮಿ ವಿವೇಕಾನಂದರ ಕನಸಿನಂತೆ ಭಾರತಕ್ಕೆ ವಿಶ್ವ ಗುರುವಿನ ಗೌರವವನ್ನು ಮತ್ತೆ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ಸದೃಢವಾದ ಹೆಜ್ಜೆ ಇಡಬೇಕೆಂದು ಅಭಿಪ್ರಾಯಪಟ್ಟರು. ಗ್ರಾವಿವಿ ಪದವೀಧರರು ಗ್ರಾಮೀಣ ಸಂಪನ್ಮೂಲಗಳ ವಿಸ್ತರಣೆ, ಗ್ರಾಮೀಣ ಜನರ ಆದಾಯ ದ್ವಿಗುಣಗೊಳಿಸುವಿಕೆ, ಪರಿಸರ ಸುಧಾರಣೆ, ಜಾಗತಿಕ ಮಟ್ಟದಲ್ಲಿ ಏರಿಕೆಯಾಗುತ್ತಿರುವ ತಾಪಮಾನ ನಿಯಂತ್ರಣದ ಕುರಿತು ಸ್ಥಳೀಯ ಮಟ್ಟದಲ್ಲಿ ಪ್ರಯತ್ನ ನಡೆಸಬೇಕು. ವಿಶ್ವವಿದ್ಯಾನಿಲಯದ ನೂತನ ಆವರಣದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ರೈತರಿಗೆ ಕೃಷಿಗೆ ಸಂಬಂ ಧಿಸಿದ ಚಟುವಟಿಕೆಗಳಲ್ಲಿ ಅನುಭವ ಪಡೆಯಲು ಅವಕಾಶ ಒದಗಿಸುವ ಮಾದರಿ ನರ್ಸರಿ ಸ್ಥಾಪನೆಗೆ ಅವಕಾಶವಿರುವುದು ಉಪಯುಕ್ತಕಾರಿಯಾಗಿದೆ ಎಂದರು.

ಧರ್ಮ, ಸಂಸ್ಕೃತಿ, ದೇಶದ ಹಿತಾಸಕ್ತಿ, ಸಾಮಾಜಿಕ ಆಸಕ್ತಿ, ಜ್ಞಾನ-ವಿಜ್ಞಾನ, ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ಜನರ ಜೀವನದ ಉನ್ನತಿ ಮತ್ತು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ಬಹುಮುಖ ವ್ಯಕ್ತಿತ್ವದ ಶಿಕ್ಷಣ ತಜ್ಞ ಮತ್ತು ಸಮಾಜ ಸೇವಕ ಡಾ|ಎಸ್‌.ಎಸ್‌.ಮೀನಾಕ್ಷಿ ಸುಂದರಂ, ಸಾಮಾಜಿಕ-ಆರ್ಥಿಕವಾಗಿ ತುಳಿತಕ್ಕೊಳಗಾದ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಉನ್ನತಿಗಾಗಿ ಹಾಗೂ 4000ಕ್ಕೂ ಹೆಚ್ಚು ಮಹಿಳೆಯರನ್ನು ದೇವದಾಸಿಯರ ಸಂಕೋಲೆಯಿಂದ ಮುಕ್ತಗೊಳಿಸಲು ಶ್ರಮಿಸಿದ ಪದ್ಮಶ್ರೀ ಪುರಸ್ಕೃತ ಸೀತವ್ವ ದುಂಡಪ್ಪ ಜೋಡಟ್ಟಿ ಅವರಿಗೆ ಗೌರವ ಪದವಿ ಪ್ರದಾನ ಮಾಡಿರುವುದು ಸಂತಸ ತಂದಿದೆ. ಈ ಸಾಧಕರೇ ಯುವಕರಿಗೆ ಪ್ರೇರಣೆಯಾಗಲಿದ್ದಾರೆಂದು ಅಭಿನಂದಿಸಿದರು.

Advertisement

ಘಟಿಕೋತ್ಸವ ಭಾಷಣ ಮಾಡಿದ ಮುಖ್ಯ ಅತಿಥಿ ಕೇರಳ ರಾಜ್ಯದ 6ನೇ ಹಣಕಾಸು ಆಯೋಗದ ಅಧ್ಯಕ್ಷ ಎಸ್‌.ಎಂ.ವಿಜಯಾನಂದ, 75 ವರ್ಷಗಳ ಹಿಂದೆ ಹೆಚ್ಚಿನ ಸಂಖ್ಯೆಯ ಹಳ್ಳಿಗಳು ದಬ್ಟಾಳಿಕೆಯಿಂದ ಉಳಿಗಮಾನ್ಯ ಮತ್ತು ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ಗುಂಪುಗಳಾಗಿದ್ದವು. ಗಾಂಧೀಜಿ ಪಂಚಾಯತ್‌ ರಾಜ್‌ ಆದರ್ಶ ದೃಷ್ಟಿಕೋನ ಹೊಂದಿದ್ದರು. ಅವರು ಸ್ಥಳೀಯ ಆಡಳಿತ ಒಳಗೊಂಡಂತೆ ಆಡಳಿತವನ್ನು ಬಹು ಆಯಾಮದ ಸಾಮಾಜಿಕ, ನೈತಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಹೊಂದಿರುವಂತೆ ಕಂಡಿದ್ದರು. ಪಂಚಾಯತ್‌ ರಾಜ್‌ ವ್ಯವಸ್ಥೆ ಸ್ವ ಸಹಾಯ, ಸಹಕಾರ, ಶ್ರಮದಾನ ಮತ್ತು ಸಮುದಾಯ ಸೇವೆ, ಸಮಾನತೆ, ಸ್ವಾವಲಂಬನೆ ಮತ್ತು ಸ್ವಯಂ ಸಂಯಮದಂತಹ ಮೌಲ್ಯ ಮತ್ತು ತತ್ವಗಳಿಂದ ಕೂಡಿವೆ ಎಂದರು.

ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆ ಬಹಳ ವಿಶಿಷ್ಟವಾಗಿದೆ. ಲಿಂಗ ತಾರತಮ್ಯ, ಬಡತನ ನಿರ್ಮೂಲನೆ ಮತ್ತು ಸಮಾನತೆಯನ್ನು ಸಾಕಾರಗೊಳಿಸುವಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆ ಪರಿಣಾಮಕಾರಿಯಾಗಿದೆ. ಗಾಂಧೀಜಿ ತತ್ವಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವ ಮೂಲ ನಾಡಿನಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿಯ ಜೀವನ ಮತ್ತಷ್ಟು ಗಟ್ಟಿಯಾಗಲಿದೆ ಎಂದರು.

ಗ್ರಾವಿವಿ ಕುಲಪತಿ ಪ್ರೊ|ವಿಷ್ಣುಕಾಂತ ಎಸ್‌.ಚಟಪಲ್ಲಿ ಸರ್ವರನ್ನೂ ಸ್ವಾಗತಿಸಿ, ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಸಂಕಷ್ಟದಲ್ಲಿ ಬದುಕುತ್ತಿರುವವರಿಗೆ ಧ್ವನಿ ಕೊಡುವ ಅವಕಾಶದೊಂದಿಗೆ ಗ್ರಾಮ ಸ್ವರಾಜ್ಯವಾಗಲು ವಿಶ್ವವಿದ್ಯಾಲಯ ನೀಡಿದ ಜ್ಞಾನವನ್ನು ಬಳಸಿಕೊಂಡು ವಿಶ್ವವಿದ್ಯಾಲಯಕ್ಕೆ, ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಒಳ್ಳೆಯ ಕೀರ್ತಿ ತರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದೇ ವೇಳೆ ಡಾ|ಎಸ್‌.ಎಸ್‌.ಮೀನಾಕ್ಷಿ ಸುಂದರಂ, ಸೀತವ್ವ ದುಂಡಪ್ಪ ಜೋಡಟ್ಟಿ ಅವರಿಗೆ ಹಾಗೂ ಡಾ|ಎಸ್‌.ವಿ.ರಂಗನಾಥ ಅವರ ಅನುಸ್ಥಿತಿಯಲ್ಲಿ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಯಿತು. ಕುಲಸಚಿವ ಪ್ರೊ|ಬಸವರಾಜ ಲಕ್ಕಣ್ಣವರ, ವಿತ್ತಾಧಿಕಾರಿ ಪ್ರಶಾಂತ ಜೆ.ಸಿ., ನಗರಸಭೆ ಅಧ್ಯಕ್ಷೆ ಉಷಾ ದಾಸರ, ರಾಜ್ಯ ದ್ರಾಕ್ಷಾರಸ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕಾಂತಿಲಾಲ್‌ ಬನ್ಸಾಲಿ, ನಗರಾಭಿವೃದ್ಧಿ ಪ್ರಾಧಿಕಾರಿದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು, ಜಿಪಂ ಸಿಇಒ ಭರತ ಎಸ್‌., ಎಸ್ಪಿ ಡಿ.ಶಿವಪ್ರಕಾಶ, ಮಾಜಿ ಶಾಸಕ ಡಿ.ಆರ್‌.ಪಾಟೀಲ ಇತರರಿದ್ದರು.

 

ಗೌರವ ಡಾಕ್ಟರೇಟ್‌-ಪ್ರಶಸ್ತಿ ಪ್ರದಾನ: ಶಿಕ್ಷಣ ಮತ್ತು ಸಂಶೋಧನೆ, ಗ್ರಾಮೀಣ ಜನರ ಉನ್ನತಿ ಮತ್ತು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ ಕ್ಷೇತ್ರದಲ್ಲಿ ಅವರ ಅಮೂಲ್ಯ ಕೊಡುಗೆಗಾಗಿ ಬಹುಮುಖ ವ್ಯಕ್ತಿತ್ವದ ಶಿಕ್ಷಣ ತಜ್ಞ ಮತ್ತು ಸಮಾಜ ಸೇವಕ ಡಾ|ಎಸ್‌.ಎಸ್‌.ಮೀನಾಕ್ಷಿಸುಂದರಂ ಹಾಗೂ ಸಾಮಾಜಿಕ, ಆರ್ಥಿಕವಾಗಿ ತುಳಿತಕ್ಕೊಳಗಾದ ಮಹಿಳೆಯರು, ದೇವದಾಸಿಯರನ್ನು ಸಂಕೋಲೆಯಿಂದ ಮುಕ್ತಗೊಳಿಸಲು ಶ್ರಮಿಸಿದ ಪದ್ಮಶ್ರೀ ಪುರಸ್ಕೃತ ಸೀತವ್ವ ದುಂಡಪ್ಪ ಜೋಡಟ್ಟಿ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಲಾಯಿತು.

 

ಖಾದಿ ಮೆರವಣಿಗೆ: ಘಟಿಕೋತ್ಸವದ ಪ್ರಯುಕ್ತ ಸಬರಮತಿ ಆಶ್ರಮದಿಂದ ಕೌಶಲ್ಯ ಭವನದ ವರೆಗೆ ಮೆರವಣಿಗೆ ನಡೆಯಿತು. ಗಣ್ಯರು ಹಾಗೂ ವಿವಿ ಸದಸ್ಯರು ಖಾದಿ ವಸ್ತ್ರಗಳನ್ನು ಧರಿಸಿ, ಉತ್ತರ ಕರ್ನಾಟಕ ಶೈಲಿಯ ಬಿಳಿ ಪಟಗಾ(ಪೇಟಾ) ಧರಿಸಿ ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳು ಸಹ ಖಾದಿ ಬಟ್ಟೆ ತೊಟ್ಟು, ಹಸಿರು ಅಂಗವಸ್ತ್ರ ಹಾಗೂ ಗಾಂಧಿ ಟೊಪ್ಪಿಗೆ ಹಾಕಿಕೊಂಡು ಪದವಿ ಸ್ವೀಕರಿಸಿದರು. ಘಟಿಕೋತ್ಸವ ಅಂಗವಾಗಿ ಸಭಾಂಗಣದ ಹೊರ ಆವರಣದಲ್ಲಿ ಖಾದಿ ಬಟ್ಟೆ ಮತ್ತು ವಸ್ತುಗಳ ಪ್ರದರ್ಶನ, ಮಾರಾಟ ಹಾಗೂ ಚಿತ್ರಕಲಾ ಪ್ರದರ್ಶನ ಜನಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next