ಮೈಸೂರು: ನಗರವನ್ನು ಮತ್ತಷ್ಟು ಸ್ವಚ್ಛವಾಗಿಸಲು ಮೈಸೂರಿನ ಪ್ರತಿಯೊಬ್ಬ ನಾಗರಿಕರೂ ನೈರ್ಮಲ್ಯ ಕಾಪಾಡಿಕೊಳ್ಳಬೇಕಿದೆ ಎಂದು ನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ಹೇಳಿದರು. ನಗರದ ಎನ್‌ಐಇ ಕಾಲೇಜಿನ ಸರ್ವಪಲ್ಲಿ ರಾಧಾಕೃಷ್ಣನ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಾಶ್ ಲ್ಯಾಬ್ ಉದ್ಘಾಟನೆ ಮತ್ತು ನೀರು,
ನೈರ್ಮಲ್ಯ ಮತ್ತು ಶುಚಿತ್ವ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಸ್ವಚ್ಛತೆಯಲ್ಲಿ ದೇಶದ ಗಮನ ಸೆಳೆದಿರುವ ಮೈಸೂರು ಈಗಾಗಲೇ ಸ್ವಚ್ಛನಗರ ಎಂಬ ಖ್ಯಾತಿ ಪಡೆದಿದೆ. ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಮೈಸೂರಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡಲಿದ್ದಾರೆ ಎಂದರು.
ಇಂತಹ ಸಂದರ್ಭದಲ್ಲಿ ಮೈಸೂರನ್ನು ಮತ್ತಷ್ಟು ಸ್ವಚ್ಛವಾಗಿಸುವುದು ನಮ್ಮೆಲ್ಲರ ಮುಖ್ಯ ಉದ್ದೇಶವಾಗಿದ್ದು, ಇದಕ್ಕಾಗಿ ಪ್ರತಿಯೊಬ್ಬ ನಾಗರೀಕರು ತಮ್ಮ ಸುತ್ತಲಿನ ನೈರ್ಮಲ್ಯ ಕಾಪಾಡಿಕೊಳ್ಳಬೇಕಿದೆ. ಆದರೆ ಬಯಲಿನಲ್ಲಿ ಮೂತ್ರ ಸರ್ಜಿಸುವುದರಿಂದ ನಗರದ ಪ್ರವಾಸೋದ್ಯಮ ಮತ್ತು ಸ್ವಚ್ಛತೆಗೆ ತೊಂದರೆಯಾಗುತ್ತಿದ್ದು, ಇದನ್ನು ತಡೆಗಟ್ಟಲು ನಗರದ ಹಲವು ಕಡೆಗಳಲ್ಲಿ 50 ಇ-ಶೌಚಾಲಯಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಇಂದು ಆರಂಭವಾಗಿರುವ ವಾಶ್ ಲ್ಯಾಬ್‌ನಿಂದ ನಾವೆಲ್ಲರೂ ಸಾಕಷ್ಟು ಪ್ರಯೋಜನ ಪಡೆಯಬಹುದಾಗಿದೆ. ಮೈಸೂರು ನಗರವನ್ನು ಮತ್ತಷ್ಟು ಸ್ವಚ್ಛವಾಗಿಸಲು ಏನೆಲ್ಲಾ ತಂತ್ರಜ್ಞಾನ ಪಡೆಯಬಹುದು ಎಂಬ ಬಗ್ಗೆ ಚರ್ಚಿಸಲಾಗುವುದು. ಎರಡು ವರ್ಷದ ಒಪ್ಪಂದದಲ್ಲಿ ವಾಶ್ ನೀಡಿದ ಸಲಹೆ ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಉಪ ಮೇಯರ್ ಇಂದಿರಾ ಮಹೇಶ್ ಮಾತನಾಡಿ, ನಗರದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಎಲ್ಲರ ಪಾತ್ರ ಮುಖ್ಯ. ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡುವ ಜತೆಗೆ ವಾಶ್ ಸಂಸ್ಥೆ ನೀಡುವ ಸಲಹೆ, ಸೂಚನೆಗಳನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು. ನಗರ ಪಾಲಿಕೆ ಉಪ ಆಯುಕ್ತ ಜಿ.ಎಸ್. ಸುರೇಶ್, ಎನ್‌ಐಇ ಸಂಸ್ಥೆ ನಿರ್ದೇಶಕ ಎಚ್.ಎನ್. ರಾಮತೀರ್ಥ, ಪ್ರಾಂಶುಪಾಲ ಡಾ.ಜಿ. ರವಿ, ವಾಶ್ ಚೇರ್‌ನ ಎಸ್. ಶ್ಯಾಮ್‌ಸುಂದರ್ ಹಾಜರಿದ್ದರು.