ಹೋಬಾರ್ಟ್: ಮಾಜಿ ದಕ್ಷಿಣ ಆಫ್ರಿಕಾ ಆಟಗಾರ ಜೊಹಾನ್ ಬೋಥ ತಮ್ಮ ಕ್ರಿಕೆಟ್ ಜೀವನಕ್ಕೆ ಬುಧವಾರ ದಿಢೀರ್ ವಿದಾಯ ಘೋಷಿಸಿದ್ದಾರೆ. ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ನಲ್ಲಿ ಹೋಬಾರ್ಟ್ ಹರಿಕೇನ್ಸ್ ಪರವಾಗಿ ಆಡುತ್ತಿರುವ ಜೊಹಾನ್ ಬೋಥ ಕೂಟದ ನಡುವೆಯೇ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
36 ವರ್ಷದ ಬೋಥ, ದೇಹವು ಆಯಾಸಗೊಳ್ಳುತ್ತಿದ್ದು ಮತ್ತು ಫಿಟ್ ನೆಸ್ ಕಾರಣಗಳಿಂದ ಕ್ರಿಕೆಟ್ ಆಡಲು ಕಷ್ಟವಾಗುತ್ತಿರುವ ಕಾರಣ ನೀಡಿ ವಿದಾಯ ಘೋಷಣೆ ಮಾಡಿದರು.
ಮಧ್ಯಮ ವೇಗಿಯಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ 2005ರಲ್ಲಿ ಪಾದಾರ್ಪಣೆಗೊಂಡಿದ್ದ ಬೋಥ ನಂತರ ಆಫ್ ಸ್ಪಿನ್ನರ್ ಆಗಿ ತಮ್ಮ ಬೌಲಿಂಗ್ ಶೈಲಿ ಬದಲಾವಣೆ ಮಾಡಿಕೊಂಡಿದ್ದರು. ಆಫ್ರಿಕಾ ಪರ ಐದು ಟೆಸ್ಟ್ ಪಂದ್ಯಗಳು, 78 ಏಕದಿನ ಪಂದ್ಯಗಳು, ಮತ್ತು 40 ಟಿ-20 ಪಂದ್ಯಗಳನ್ನು ಆಡಿದ್ದರು. 2012ರ ಅಕ್ಟೋಬರ್ ನಲ್ಲಿ ಭಾರತದ ವಿರುದ್ದ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು.
ತಮ್ಮ ವೃತ್ತಿ ಜೀವನದಲ್ಲಿ ಜೋಹಾನ್ ಬೋಥ ದ. ಆಫ್ರಿಕಾ ತಂಡದ ನಾಯಕತ್ವವನ್ನು ಕೂಡಾ ವಹಿಸಿದ್ದರು. ಬೋಥಾ ಒಟ್ಟು 21 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ಚುಕ್ಕಾಣಿ ಹಿಡಿದಿದ್ದರು.
ತಮ್ಮ ಕ್ರಿಕೆಟ್ ಜೀವನದ ಉತ್ತರಾರ್ಧದಲ್ಲಿ ಬೋಥ ಟಿ-20 ಸರಣಿಗಳಲ್ಲಿ ಜಾಸ್ತಿ ಕಾಣಿಸಿಕೊಳ್ಳಲಾರಂಭಿಸಿದರು. 215 ಟಿ-20 ಪಂದ್ಯಗಳಿಂದ ಬೋಥ 1966 ರನ್ ಮತ್ತು 163 ವಿಕೆಟ್ ಪಡೆದಿದ್ದಾರೆ. 2016ರಲ್ಲಿ ಕಾಂಗರೂ ನಾಡಿನಲ್ಲಿ ನೆಲೆಸಿದ ಜೊಹಾನ್ ಬೋಥ ಈಗ ಆಸ್ಟ್ರೇಲಿಯಾ ಪ್ರಜೆ.