ಅರಂತೋಡು: ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಜೋಡುಪಾಲದಲ್ಲಿ ಇನ್ನೂ ಪೂರ್ಣ ಪ್ರಮಾಣದ ವಾಹನ ಸಂಚಾರ ಸಾಧ್ಯವಾಗದ ಹಿನ್ನೆಲೆಯಲ್ಲಿ ಮತ್ತೆ ಪರ್ಯಾಯ ರಸ್ತೆ ನಿರ್ಮಾಣದ ಬಗ್ಗೆ ಕೊಡಗು ಹಾಗೂ ಸುಳ್ಯ ಗಡಿಭಾಗದ ಜನರು ತೀವ್ರವಾಗಿ ಚಿಂತನೆ ನಡೆಸುತ್ತಿದ್ದಾರೆ.
ಜೋಡುಪಾಲದಲ್ಲಿ ಸಂಭವಿಸಿದ ಭೂಕುಸಿತದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಭೂವಿಜ್ಞಾನಿಗಳು, ಜೋಡುಪಾಲ ಭಾಗ ವಾಸಕ್ಕೆ ಯೋಗ್ಯವಾಲ್ಲ ಎಂದು ತಿಳಿಸಿದ್ದರಿಂದ ಇಲ್ಲಿ ನಿರ್ಮಾಣವಾದ ರಸ್ತೆ ಮಳೆಗಾದಲ್ಲಿ ಯಾವಾಗ ಬೇಕಾದರೂ ಕುಸಿಯಬಹುದು ಎಂದು ಆತಂಕ ಸ್ಥಳೀಯರಲ್ಲಿದೆ.
ಮಾಣಿ – ಮೈಸೂರು ರಾಜ್ಯ ರಸ್ತೆ ಜೋಡುಪಾಲದಲ್ಲಿ ವಾಹನ ಸಂಚಾರಕ್ಕೆ ಇನ್ನೂ ಪೂರ್ಣವಾಗಿ ತೆರೆದುಕೊಂಡಿಲ್ಲ. ಈ ರಸ್ತೆಯನ್ನು ಚತುಷ್ಪಥವಾಗಿ ಪರಿವರ್ತಿಸಲು ತಯಾರಿ ನಡೆದಿದ್ದು, ಜೋಡುಪಾಲದಲ್ಲಿ ಧಾರಣ ಸಾಮರ್ಥ್ಯದ ಬಗ್ಗೆ ತಾಂತ್ರಿಕ ತಜ್ಞರಲ್ಲೇ ಸಂಶಯವಿದೆ. ಈ ರಸ್ತೆಯ ಬದಲಾಗಿ ಇನ್ನೊಂದು ರಾಜ್ಯ ಹೆದ್ದಾರಿ ನಿರ್ಮಿಸಿದರೆ ಅನುಕೂಲ ಆಗಬಹುದು. ಹಾಲಿ ರಸ್ತೆಯಲ್ಲಿ ಹುಣಸೂರಿನಿಂದ ಮಡಿಕೇರಿ ಮಾರ್ಗವಾಗಿ ಸುಳ್ಯಕ್ಕೆ 131 ಕಿ.ಮೀ. ದೂರವಾಗುತ್ತದೆ. ಅದರ ಬದಲು ಭಾಗಮಂಡಲ, ಪಟ್ಟಿ, ತೊಡಿಕಾನ ಹಾಗೂ ಕೊಡಗಿನ ಪೆರಾಜೆ ಮೂಲಕ ಬರಲು ಸಾಧ್ಯವಿದೆ. ಹುಣಸೂರು – ಭಾಗಮಂಡಲ (ರಾಜ್ಯ ಹೆದ್ದಾರಿ) 109 ಕಿ.ಮೀ., ಭಾಗಮಂಡಲ-ಬಾಚಿಮಲೆ (ಅಂತಾರಾಜ್ಯ ಹೆದ್ದಾರಿ) 9 ಕಿ.ಮೀ., ಬಾಚಿಮಲೆ- ಪಟ್ಟಿ- ತೊಡಿಕಾನ (ಅಭಿವೃದ್ಧಿ ಆಗಬೇಕಾದ ರಸ್ತೆ) 9.ಕಿ.ಮೀ., ತೊಡಿಕಾನ- ಪೆರಾಜೆ ಜಿ.ಪಂ. ರಸ್ತೆ 11 ಕಿ.ಮೀ., ಪೆರಾಜೆ- ಸುಳ್ಯ (ರಾಜ್ಯ ಹೆದ್ದಾರಿ) 7 ಕಿ.ಮೀ. ಹೀಗೆ ಒಟ್ಟು 145 ಕಿ.ಮೀ. ದೂರವಾಗುತ್ತದೆ. ಈ ಮಾರ್ಗದಲ್ಲಿ ಮಾಚಿಮಲೆ- ಪಟ್ಟಿ- ತೊಡಿಕಾನ ರಸ್ತೆ ಅಭಿವೃದ್ಧಿಗೆ 2013- 14ನೇ ಸಾಲಿನಲ್ಲಿ ರಾಜ್ಯ ಸರಕಾರದಿಂದ 5 ಕೋಟಿ ರೂ. ಮಂಜೂರಾಗಿದೆ. ಕಡತಗಳಿಗೆ ತಾಂತ್ರಿಕ ಒಪ್ಪಿಗೆ ಬಾಕಿ ಉಳಿದಿದೆ.
ಈ ರಸ್ತೆ ಅಭಿವೃದ್ಧಿಯಾದಲ್ಲಿ ಸಂಪಾಜೆ- ಮಡಿಕೇರಿ ರಸ್ತೆಗೆ ಪರ್ಯಾಯವಾಗಿ ರೂಪುಗೊಂಡು ಹಾಲಿ ರಸ್ತೆಯ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ದಕ್ಷಿಣ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರಗಳಾದ ಭಾಗಮಂಡಲ, ತಲಕಾವೇರಿಯಿಂದ ಸುಬ್ರಹ್ಮಣ್ಯ- ಧರ್ಮಸ್ಥಳಕ್ಕೆ ಪ್ರಯಾಣಿಸಲು ಅತೀ ಹತ್ತಿರದ ರಸ್ತೆಯಾಗಲಿದೆ. ಈ ದಾರಿಯಲ್ಲಿ ಭಾಗಮಂಡಲದಿಂದ ಸುಬ್ರಹ್ಮಣ್ಯಕ್ಕೆ ಈಗಿರುವ 145 ಕಿ.ಮೀ. ಬದಲು ಅಂತರ ಕೇವಲ 50 ಕಿ.ಮೀ.ಗೆ ಇಳಿಯುತ್ತದೆ. ಇದು ಸರಕಾರಿ ದಾಖಲೆಗಳಲ್ಲಿ ಕಾವೇರಿ ರಸ್ತೆ ಎಂದು ನಮೂದಾಗಿದೆ. ಭಾಗಮಂಡಲ ಕ್ಷೇತ್ರಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪೂಜೆಗಳ ಸಂಬಂಧ ಇರುವ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ, ಪೆರಾಜೆ ಶಾಸ್ತವೇಶ್ವರ ದೇವಸ್ಥಾನ, ಆಡೂರು ಮಹಾಲಿಂಗೇಶ್ವರ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸಿದರೆ, ಭಾಗಮಂಡಲ ತಲಕಾವೇರಿ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಲ್ಲದು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.
ಅಭಿವೃದ್ಧಿ ಆಗಲಿ
ಬಾಚಿಮಲೆ-ಪಟ್ಟಿ- ತೊಡಿಕಾನ ರಸ್ತೆ ಅಭಿವೃದ್ಧಿಯ ಬಗ್ಗೆ ಅನೇಕ ವರ್ಷಗಳಿಂದ ದೇವಾಲಯ ವತಿಯಿಂದ ಪ್ರಯತ್ನ ನಡೆಯುತ್ತಿದೆ. ರಾಜ್ಯ ಸರಕಾರ 5 ಕೋಟಿ ರೂ. ಮಂಜೂರು ಮಾಡಿದೆ. ಅಡೂರು ಮಹಾಲಿಂಗೇಶ್ವರ, ಪೆರಾಜೆ ಶಾಸ್ತವೇಶ್ವರ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ, ಭಾಗಮಂಡಲ, ತಲಕಾವೇರಿಗೂ ಸಂಬಂಧಿಸಿದ ಈ ಐತಿಹಾಸಿಕ ರಸ್ತೆಗೆ ‘ಕಾವೇರಿ ರಸ್ತೆ’ ಎಂಬ ಹೆಸರೂ ದಾಖಲೆಗಳಲ್ಲಿದೆ. ಈ ರಸ್ತೆ ಅಭಿವೃದ್ಧಿ ಬಗ್ಗೆ ಲೋಕೋಪಯೋಗಿ ಸಚಿವ ರೇವಣ್ಣ ಅವರಿಗೆ ಪತ್ರ ಬರೆಯಲಾಗಿದೆ. ಜೋಡುಪಾಲ ರಸ್ತೆಗೆ ಪರ್ಯಾಯವಾಗಿ ಇದನ್ನು ಅಭಿವೃದ್ಧಿ ಮಾಡಬಹುದಾಗಿದೆ.
– ಆನಂದ ಕಲ್ಲಗದ್ದೆ
ವ್ಯವಸ್ಥಾಪಕ, ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ
ದೇವಾಲಯ, ತೊಡಿಕಾನ
ತೇಜೇಶ್ವರ್ ಕುಂದಲ್ಪಾಡಿ
ಪರ್ಯಾಯ ರಸ್ತೆ ಬೇಕು
ಮಾಣಿ – ಮೈಸೂರು ರಸ್ತೆ ಒಂದು ಪ್ರಮುಖ ರಸ್ತೆಯಾಗಿದ್ದರೂ ಜೋಡುಪಾಲದಲ್ಲಿ ಸಂಭವಿಸಿದ ಭೂಕುಸಿತದಿಂದ ರಸ್ತೆ ಕುಸಿತಗೊಂಡು ಕಾಮಗಾರಿಯಾದರೂ ಇನ್ನೂ ಎಲ್ಲ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಿಲ್ಲ. ಮುಂದಿನ ಮಳೆಗಾದಲ್ಲಿ ಈ ರಸ್ತೆ ಉಳಿಯುವ ಬಗ್ಗೆ ಜನರಿಗೆ ಮತ್ತೆ ಸಂಶಯ ಕಾಡುತ್ತಿದೆ. ಈ ರಸ್ತೆಗೆ ಬದಲಾಗಿ ಇನ್ನೊಂದು ಪರ್ಯಾಯ ರಸ್ತೆ ನಿರ್ಮಾಣ ಅಗತ್ಯ ಇದೆ.
– ರಮೇಶ್
ಜೋಡುಪಾಲ
ತೇಜೇಶ್ವರ್ ಕುಂದಲ್ಪಾಡಿ