ಅರಂತೋಡು: ವರ್ಷದ ಹಿಂದೆ ಜಲಪ್ರಳಯವಾಗಿ ನಾಲ್ಕು ಜನರ ಸಾವಿಗೆ ಕಾರಣವಾದ ಜೋಡುಪಾಲ ಹಾಗು 2ನೇ ಮೊಣ್ಣಂಗೇರಿ ಮಾಣಿ-ಮೈಸೂರು ರಾಷ್ಟ್ರಿಯ ಹೆದ್ದಾರಿಯ ಬದಿ ಕುಸಿಯುತ್ತಿದ್ದು ಆತಂಕಕ್ಕೆ ಎಡೆಮಾಡಿದೆ. ಈ ಕಾರಣದಿಂದ ಮಾಣಿ ಮೈಸೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕೆ ತೊಡಕಾಗುವ ಸಾಧ್ಯತೆ ದಟ್ಟವಾಗಿದೆ.
ಕೊಡಗು ಜಿಲ್ಲೆಯಲ್ಲಿ ಸದ್ಯ ಭಾರೀ ಮಳೆ ಸುರಿಯುತ್ತಿದ್ದು ಗುಡ್ಡಕುಸಿತ, ರಸ್ತೆಕುಸಿತ ಸಂಭವಿಸುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡಿದೆ.
ಜೋಡುಪಾಲ ಹಾಗೂ 2ನೇ ಮೊಣ್ಣಂಗೇರಿ ಬಳಿ ರಸ್ತೆ ಕುಸಿತದಿಂದ ಮೋರಿಯೇ ತುಂಡಾಗಿ ಕೆಳಗೆ ಉರುಳಿ ಬಿದ್ದಿದೆ. ಕಳೆದ ವರ್ಷ ಕೂಡ ಇದೇ ಸ್ಥಳದಲ್ಲಿ ರಸ್ತೆ ಬದಿ ಕುಸಿದಿತ್ತು. ಆ ಬಳಿಕ ರಸ್ತೆ ಬದಿಯನ್ನು ದುರಸ್ತಿ ಮಾಡಲಾಗಿತ್ತು. ಕೆಲವೊಂದು ಕಡೆ ರಸ್ತೆಗಳು ಬಿರುಕು ಬಿಡುತ್ತಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ಥವಾಗಿದ್ದು, ತಗ್ಗುಪ್ರದೇಶ ಕಡೆಗೆ ನೀರು ನುಗ್ಗುತ್ತಿದೆ. ಆಶ್ಲೇಷ ಅಬ್ಬರಕ್ಕೆ ಕಾವೇರಿ ಉಗಮ ತಾಣ ಬ್ರಹ್ಮಗಿರಿ ಬೆಟ್ಟದ ಭಾಗ ಕುಸಿದು ಅರ್ಚಕರ ಕುಟುಂಬದ ಮನೆ ನೆಲಸಮವಾಗಿರುವ ಘಟನೆ ಸಹಜವಾಗಿಯೇ ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡುವಂತೆ ಮಾಡಿದೆ.