ಜೋಧ್‌ಪುರ : ಡಾ. ಭೀಮರಾವ್ ಅಂಬೇಡ್ಕರ್ ಅವರಿಗೆ ಅಗೌರವ ತೋರುವ ಟ್ವೀಟ್ ಮಾಡಿದ್ದಾರೆ ಎನ್ನಲಾದ ಭಾರತೀಯ ಕ್ರಿಕೆಟ್ ತಂಡದ ವೇಗದ ಎಸೆಗಾರ ಹಾರ್ದಿಕ್ ಪಾಂಡ್ಯ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ರಾಜಸ್ಥಾನ ಪೊಲೀಸರಿಗೆ ಜೋಧ್‌ಪುರ ಕೋರ್ಟ್ ಆದೇಶ ನೀಡಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಹಾರ್ದಿಕ್ ಪಾಂಡ್ಯ ಮಾಡಿದ್ದರೆಂಬ ಟ್ವೀಟ್‌ನಲ್ಲಿ ಈ ರೀತಿ ಬರೆಯಲಾಗಿತ್ತು : “ಯಾವ ಅಂಬೇಡ್ಕರ್ ??? ತದ್ವಿರುದ್ಧ ಕಾನೂನನ್ನು, ಸಂವಿಧಾನವನ್ನು ಅಥವಾ ದೇಶದಲ್ಲಿ ಮೀಸಲಾತಿ ಎಂಬ ರೋಗವನ್ನು ಹರಡಿದವರೇ ?”
ವರದಿಗಳ ಪ್ರಕಾರ ಪಾಂಡ್ಯ ವಿರುದ್ಧ ಎಫ್ಐಆರ್ ದಾಖಲಿಸಿರುವವರು ರಾಜಸ್ಥಾನದ ಜಾಲೋರ್ ಜಿಲ್ಲೆಯ ರಾಷ್ಟ್ರೀಯ ಭೀಮ ಸೇನೆ ಸದಸ್ಯರೂ ವಕೀಲರೂ ಆಗಿರುವ ಡಿ ಆರ್ ಮೇಘವಾಲ್ ಎಂಬವರು. ಇವರು ತಮ್ಮ ಅರ್ಜಿಯನ್ನು ಎಸ್‌ಸಿ/ಎಸ್‌ಟಿ ಕಾಯಿದೆಯಡಿ ಸಲ್ಲಿಸಿದ್ದಾರೆ.
ಮೇಘವಾಲ್ ಅವರು ಪಾಂಡ್ಯ ವಿರುದ್ಧ ಎಫ್ಐಆರ್ ದಾಖಲಿಸಲು ಮೊದಲು ರಾಜಸ್ಥಾನದ ಲೂನಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು. ಆದರೆ ಅಲ್ಲಿನ ಅಧಿಕಾರಿಗಳು ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದರು. ಅನಂತರ ಅವರು ಜೋಧ್‌ಪುರ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.
ಭಾರತೀಯ ಕ್ರಿಕೆಟ್ ತಂಡ ಸವ್ಯಸಾಚಿಯಾಗಿರುವ ಹಾರ್ದಿಕ್ ಪಾಂಡ್ಯ ಅವರನ್ನು ಸಾಮಾನ್ಯವಾಗಿ ಕಪಿಲ್ ದೇವ್‌ಗೆ ಹೋಲಿಸಲಾಗುತ್ತದೆ. ಪಾಂಡ್ಯ ಅವರು ಈಚೆಗೆ ಮುಂಬಯಿ ಇಂಡಿಯನ್ಸ್ ಐಪಿಎಲ್ ತಂಡಕ್ಕೆ 11 ಕೋಟಿ ರೂ.ಗೆ ಸೇಲಾಗಿದ್ದರು.