Advertisement
ಉದ್ಯೋಗ ಕ್ಷೇತ್ರದಲ್ಲಿ ಅದೆಷ್ಟೋ ವಿಭಿನ್ನ ತೆರನಾದ ಕೆಲಸಗಳಿವೆ. ಅವುಗಳಲ್ಲೊಂದು ಆಹಾರ ವಿಮರ್ಶಕ ಅಂದರೆ ಫುಡ್ ಕ್ರಿಟಿಕ್! ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಸಿನಿಮಾ ವಿಮರ್ಶೆಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ನೋಡಿರಬಹುದು. ಹೊಸ ಸಿನಿಮಾ ಚೆನ್ನಾಗಿದೆಯಾ ಇಲ್ಲವಾ? ಸಿನಿಮಾದ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ. ಅದೇ ರೀತಿ ಒಬ್ಬ ಆಹಾರ ವಿಮರ್ಶಕ ಹೋಟೆಲ್, ಖಾನಾವಳಿಗಳ ಫುಡ್ ಮೆನು ಹೇಗಿದೆ, ಅಲ್ಲಿನ ಸ್ಪೆಷಾಲಿಟಿ ಏನು? ಎಂಬಿತ್ಯಾದಿ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತಾನೆ. ಅಡುಗೆಗೆ ಸಂಬಂಧಿಸಿದ ಕಾರ್ಯಕ್ರಮಗಳು ದೃಶ್ಯ ಮಾಧ್ಯಮಗಳಲ್ಲಿ ಹೆಚ್ಚು ವೀಕ್ಷಕರನ್ನು ಆಕರ್ಷಿಸಿರುವುದು ಈ ಕ್ಷೇತ್ರದ ಜನಪ್ರಿಯತೆಯನ್ನು ಸೂಚಿಸುತ್ತದೆ. ‘ಮಾಸ್ಟರ್ ಶೆಫ್’ ರಿಯಾಲಿಟಿ ಶೋ ಜಗತ್ತಿನಾದ್ಯಂತ ಜನಮನ್ನಣೆ ಪಡೆದಿರುವುದನ್ನು ನಾವಿಲ್ಲಿ ನೆನೆಯಬಹುದು.
ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಬೇಕಾದ ವಿದ್ಯಾರ್ಹತೆ ಎಂದರೆ ಜರ್ನಲಿಸಮ್ ಅಥವಾ ಹೊಟೇಲ್ ಮ್ಯಾನೇಜ್‌ಮಂಟ್‌ನಲ್ಲಿ ಪದವಿ. ಪತ್ರಿಕೋದ್ಯಮ ಹಿನ್ನೆಲೆ ಇದ್ದರೆ ಬರವಣಿಗೆ ಕಲಿತಿರುತ್ತಾರೆ ಮತ್ತು ರುಚಿ ಪ್ರಪಂಚದ ಅನುಭವವನ್ನು ಜನರಿಗೆ ಮುಟ್ಟಿಸಲು ಸಮರ್ಥರಾಗಿರುತ್ತಾರೆ ಎನ್ನುವುದು ಅದಕ್ಕೆ ಕಾರಣ. ಹೊಟೇಲ್ ಮ್ಯಾನೇಜ್‌ಮೆಂಟ್ ಪದವಿ ಪಡೆದವರು ಹೊಟೇಲ್ ಉದ್ಯಮದ ಮೂಲಸೂತ್ರಗಳನ್ನು ಅರಿತಿರುತ್ತಾರೆ. ಅದರ ಜತೆಗೆ ಕ್ರಿಯಾಶೀಲ ಬರವಣಿಗೆಯನ್ನು ಕಲಿತರೆ ಉತ್ತಮ ಫುಡ್ ಕ್ರಿಟಿಕ್ ಆಗಿ ಬೆಳೆಯಬಲ್ಲರು. ಇವರು ಡಿಪ್ಲೊಮ ಇನ್ ಫುಡ್ ಪ್ರಿಸರ್ವೇಷನ್, ಪಿ.ಜಿ. ಡಿಪ್ಲೊಮ ಇನ್ ಕುಕರಿ ಆ್ಯಂಡ್ ಕ್ಯಾಟರಿಂಗ್ ಕೂಡ ಮಾಡಬಹುದು. ಅವಕಾಶಗಳು
ಪ್ರವಾಸೋದ್ಯಮ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರಗಳು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವುದರಿಂದ ಮತ್ತು ಎಲ್ಲೆಡೆ ಆಹಾರ ಕೇಂದ್ರಗಳು ತೆರೆಯುತ್ತಿರುವುದರಿಂದ ಫುಡ್ ಕ್ರಿಟಿಕ್‌ಗಳಿಗೆ ಬೇಡಿಕೆಯಿದೆ. ಮಾಧ್ಯಮಗಳಲ್ಲಿ ಆಹಾರ ವಿಮರ್ಶಕರಿಗೆ ಅವಕಾಶಗಳು ತೆರೆದುಕೊಳ್ಳುತ್ತಿವೆ. ದಿನಪತ್ರಿಕೆ, ವಾರಪತ್ರಿಕೆ, ಆಹಾರದ ವಿಷಯಗಳಿಗೆಂದೇ ಮೀಸಲಾದ ನಿಯತಕಾಲಿಕೆಗಳು, ಪ್ರವಾಸಿ ಕೈಪಿಡಿಗಳು, ದೃಶ್ಯ ಮಾಧ್ಯಮ ಮತ್ತು ಇಂಟರ್‌ನೆಟ್ ಕಂಪನಿಗಳಲ್ಲಿ ಫುಡ್‌ಕ್ರಿಟಿಕ್‌ಗಳು ಕೆಲಸ ಮಾಡಬಹುದು. ಇದಷ್ಟೇ ಅಲ್ಲದೆ ಫುಡ್ ಎಡಿಟರ್, ಫ್ರೀಲಾನ್ಸ್ ಫುಡ್ ರೈಟರ್, ರೆಸ್ಟೋರೆಂಟ್ ರಿವ್ಯೂವರ್, ಸ್ಟಾಫ್ ಫುಡ್ ರೈಟರ್, ಫುಡ್ ಕಾಲಮಿಸ್ಟ್ ಆಗಿಯೂ ಇವರು ಕೆಲಸ ಮಾಡಬಹುದು. ಅಲ್ಲದೆ ಟಿ.ವಿ ಕಾರ್ಯಕ್ರಮಗಳನ್ನೂ ನಡೆಸಿಕೊಡಬಹುದು.
Related Articles
ಇಂದಿನ ಮಾಹಿತಿಯುಗದಲ್ಲಿ ಹೋಟೆಲ್ ಇರಲಿ, ದರ್ಶಿನಿ ಇರಲಿ ಯಾವುದೇ ತಿನಿಸಿನ ಕೇಂದ್ರಗಳಿಗೆ ಭೇಟಿ ನೀಡುವ ಮುನ್ನ ಜನರು ಇಂಟರ್‌ನೆಟ್‌ನಲ್ಲಿ ಆ ಸ್ಥಳದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳನ್ನು, ಅನಿಸಿಕೆಗಳನ್ನು ಹುಡುಕಾಡುತ್ತಾರೆ. ಇಲ್ಲಿ ಆಹಾರ ವಿಮರ್ಶಕನ ಅಭಿಪ್ರಾಯ ಬಹಳ ಮುಖ್ಯವಾಗುತ್ತದೆ. ಜವಾಬ್ದಾರಿ ಇರುವುದರಿಂದ, ನಿಖರವಾದ, ಪ್ರಾಮಾಣಿಕ, ಪೂರ್ವಗ್ರಹ ಪೀಡಿತವಲ್ಲದ ವಿಮರ್ಶೆಯನ್ನು ಆಹಾರ ವಿಮರ್ಶಕ ನೀಡಬೇಕಾಗುತ್ತದೆ. ಇದು ಕೇವಲ ಓದುಗರಿ ಗಷ್ಟೇ ಅಲ್ಲ, ಈ ಕ್ಷೇತ್ರದಲ್ಲಿ ವಿಮರ್ಶಕನಿಗೂ ನೆರವಾಗುತ್ತದೆ. ಆಹಾರದ ಬಗ್ಗೆ ಫುಡ್ ಕ್ರಿಟಿಕ್ ನೀಡುವ ವರದಿ ಖಂಡಿತ ಸಾರ್ವಜನಿಕ ವಿಮರ್ಶೆಗೊಳಪಡುತ್ತದೆ. ಆದುದರಿಂದ ಆತನಿಗೆ ಸಾರ್ವಜನಿಕರಿಗೆ ಏನು ಇಷ್ಟವಾಗುತ್ತದೆ ಎನ್ನುವುದರ ಅಂದಾಜಿರಬೇಕು. ಜೊತೆಗೆ ಪಾಕ ಕಲೆಯ ಬಗ್ಗೆ ಮಾಹಿತಿ ಇರಬೇಕು. ಹೊಸರುಚಿಗಾಗಿ ಹಾತೊರೆಯುವ, ಹುಡುಕಾಟದ ಮನೋಭಾವವಿರಬೇಕು.
Advertisement
ಬೇಕಾದ ಕೌಶಲ್ಯಗಳು– ಓದುಗರ ನಿರೀಕ್ಷೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಆಹಾರದ ಗುಣಮಟ್ಟ, ರೆಸ್ಟೋರೆಂಟ್‌ನ ಸೇವಾ ಮನೋಭಾವವನ್ನು ಓದುಗರಿಗೆ ತಲುಪಿಸುವ ಉತ್ಸಾಹ ಇರಬೇಕು, ತಿಳಿವಳಿಕೆ ಇರಬೇಕು.
– ಸೃಜನಶೀಲ ಬರವಣಿಗೆ
– ಹೊಸ ಹೊಸ ಜಾಗಗಳಿಗೆ ಹೋಗುವುದು, ಅಲ್ಲಿನ ಆಹಾರ ಪದ್ಧತಿಯನ್ನು ತಿಳಿದುಕೊಳ್ಳುವ ಆಸಕ್ತಿ — ರಘು ವಿ., ಪ್ರಾಂಶುಪಾಲರು