ಎಂಆರ್‌ಪಿಎಲ್ ಸಂಸ್ಥೆಯಲ್ಲಿ ಈಚೆಗೆ ನಡೆದ ನೇಮಕಾತಿಯಲ್ಲಿ ಸ್ಥಳೀಯರಿಗೆ ಅವಕಾಶ ಸಿಕ್ಕಿಲ್ಲ ಎಂಬ ಆರೋಪಗಳಿವೆ. ಕೇಂದ್ರ ಸ್ವಾಮ್ಯದ ಎಲ್ಲ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶದಲ್ಲಿ ಆದ್ಯತೆ ನೀಡಲು ಅಥವಾ ಆ ವಿಚಾರದಲ್ಲಿ ಅನ್ಯಾಯದ ಆರೋಪ ಬಂದಾಗ ಪರಿಹಾರ ಸೂಚಿಸಲು ಈಗಿರುವ ಕಾನೂನಿನಲ್ಲಿ ಅವಕಾಶವಿಲ್ಲ.
Advertisement
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಭೂಮಿ ಪಡೆದು ಕೈಗಾರಿಕೆ ಸ್ಥಾಪಿಸಿರುವ ಅನೇಕ ಕಂಪೆನಿಗಳಿವೆ. ಇವು ಸ್ಥಳೀಯರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ನಿಯಮಾವಳಿಯ ನೆಪ ಹೇಳುತ್ತವೆ ಎಂಬ ಆರೋಪವಿದೆ. ಎಂಆರ್‌ಪಿಎಲ್ ನಲ್ಲಿ ಈಚೆಗೆ ನಡೆದ 184 ನೇಮಕಾತಿಯಲ್ಲಿ ರಾಜ್ಯದ 13 ಮಂದಿ ಮಾತ್ರ ಆಯ್ಕೆಯಾಗಿದ್ದಾರೆ. ಇದರಲ್ಲಿ ಕರಾವಳಿಯವರು ಮೂವರು ಮಾತ್ರ.
ರಾಜ್ಯದಲ್ಲಿರುವ ಕೇಂದ್ರ ಸ್ವಾಮ್ಯದ ಕಂಪೆನಿಗಳಲ್ಲಿ ಶೇ. 70ರಿಂದ ಶೇ. 80ರಷ್ಟು ಆದ್ಯತೆಯನ್ನು ಕನ್ನಡಿಗರಿಗೆ ನೀಡಬೇಕು ಎಂಬ ವಿಚಾರ ಇದ್ದರೂ ಕಾಯ್ದೆಯಾಗಿಲ್ಲ. ಎಂಆರ್‌ಪಿಎಲ್ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡದಿರುವುದನ್ನು ಆಕ್ಷೇಪಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಂಸ್ಥೆಗೆ ಪತ್ರ ಬರೆದಿದ್ದು, ಈಗಿನ ನೇಮಕಾತಿ ತಡೆ ಹಿಡಿಯಬೇಕೆಂದು ಸೂಚಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದ್ದಾರೆ. ನೇಮಕಾತಿ ವಿಚಾರ ತನಿಖೆ: ಎಂಆರ್‌ಪಿಎಲ್
ಇತ್ತೀಚೆಗೆ ನಡೆದ ನೇಮಕಾತಿ ವಿಚಾರದಲ್ಲಿ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಕೆಲವು ವಿಚಾರಗಳನ್ನು ಪ್ರಸ್ತಾವಿಸಿದ್ದಾರೆ. ಹೀಗಾಗಿ ಮುಖ್ಯ ವಿಚಕ್ಷಣ ಅಧಿಕಾರಿ ಮೂಲಕ ತನಿಖೆ ನಡೆಸಲಾಗುತ್ತಿದೆ ಎಂದು ಎಂಆರ್‌ಪಿಎಲ್ ಆಡಳಿತ ಮಂಡಳಿ ತಿಳಿಸಿದೆ.
ಎಂಆರ್‌ಪಿಎಲ್ ರಾಜ್ಯಕ್ಕೆ ಮಹತ್ವದ ಕೊಡುಗೆ ನೀಡುತ್ತ ಬಂದಿದೆ. ಕಂಪೆನಿಯ ಆಡಳಿತೇತರ ವಿಭಾಗದ ಒಟ್ಟು ಸಿಬಂದಿಯಲ್ಲಿ ಶೇ. 90ಕ್ಕೂ ಹೆಚ್ಚು ಮಂದಿ, ಕಂಪೆನಿಯ ಒಟ್ಟು ಸಂಕೀರ್ಣದಲ್ಲಿ ಶೇ. 70ರಷ್ಟು ಉದ್ಯೋಗಿಗಳು ಕರ್ನಾಟಕದವರು. ದ್ವಿತೀಯ ಶ್ರೇಣಿಯ ಶ್ರಮಿಕ ವರ್ಗದವರಲ್ಲಿ ಶೇ. 80ರಷ್ಟು ರಾಜ್ಯದವರು. ಅಲ್ಲದೆ ವ್ಯಾಪಾರಿಗಳು, ಪೂರೈಕೆದಾರರು, ಗುತ್ತಿಗೆದಾರರು, ಸಲಹೆಗಾರರು ಮತ್ತಿತರ ಆಯ್ಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುತ್ತ ಬರಲಾಗಿದೆ. ಜತೆಗೆ ಸ್ಥಳೀಯವಾಗಿ ಸಿಎಸ್‌ಆರ್ ನೆರವು ಕೂಡ ನೀಡಲಾಗುತ್ತಿದೆ ಎಂದು ಎಂಆರ್‌ಪಿಎಲ್ ಆಡಳಿತ ಮಂಡಳಿ ತಿಳಿಸಿದೆ.