ಬಾಗಲಕೋಟೆ: ವಿದ್ಯಾಗಿರಿಯ ಬಿವಿವಿ ಸಂಘದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫೆ. 27 ಮತ್ತು 28ರಂದು ನಡೆಯಲಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ನಿರ್ವಹಣೆಗಾಗಿ ರಚಿಸಲಾದ ವಿವಿಧ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಉದ್ಯೋಗ ಮೇಳದ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವ್ಯವಸ್ಥಾಪಕ ಸಮಿತಿ ರಚಿಸಲಾಗಿದ್ದು, ಅದರಂತೆ ಹಣಕಾಸು ಸಮಿತಿ, ಮೂಲ ಸೌಕರ್ಯ, ಪ್ರಚಾರ, ಊಟ ಮತ್ತು ಉಪಹಾರ, ವಸತಿ, ಉದ್ಯೋಗ ಆಕಾಂಕ್ಷಿಗಳ, ನೋಂದಣಿ ಮತ್ತು ಮೇಲ್ವಿಚಾರಣೆ, ಸ್ಟಾಲ ನಿರ್ವಹಣೆ, ಸಾರಿಗೆ ಸಂಪರ್ಕ ಸೇರಿದಂತೆ ವಿವಿಧ ರೀತಿಯ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿಯೊಂದು ಸಮಿತಿಗೆ ನೀಡಿರುವ ಜವಾಬ್ದಾರಿ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದರು.
ಪ್ರಚಾರ ಸಮಿತಿ ಮತ್ತು ಪ್ರಕಟಣೆಗೆ ಜಿಲ್ಲಾ ವಾರ್ತಾಧಿಕಾರಿಗಳ ನೇತೃತ್ವದ ಸಮಿತಿ ರಚಿಸಲಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ, ಬಿಸಿಎಂ ಅಧಿಕಾರಿ, ಜಂಟಿ ಕೃಷಿ ನಿರ್ದೇಶಕರು, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಸೇರಿದಂತೆ ಆರ್‌ಸೆಟ್ ಸಂಸ್ಥೆಯ ನಿರ್ದೇಶಕರು, ಕೆಎಸ್‌ಆರ್ ಟಿಸಿ ವಿಭಾಗೀಯ ನಿಯಂತ್ರಣಕರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಈ ಸಮಿತಿಯವರು ಉದ್ಯೋಗ ಮೇಳದ ಬಗ್ಗೆ ಸೂಕ್ತ ಪ್ರಚಾರ ಕಾರ್ಯ ಕೈಗೊಳ್ಳಲು ತಿಳಿಸಿದರು.
ಉದ್ಯೋಗದಾತರ ಮತ್ತು ಉದ್ಯೋಗ ಆಕಾಂಕ್ಷಿಗಳ ಸಂಪರ್ಕ ಸಮಿತಿಯನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನೇತೃತ್ವದಲ್ಲಿ ರಚಿಸಲಾಗಿದ್ದು, ಜಿಲ್ಲೆಯ ಉದ್ಯೋಗದಾತರನ್ನು ಸಂಪರ್ಕಿಸಿ ಭಾಗವಹಿಸುವಂತೆ ಮಾಡಬೇಕು. ಅವರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆ ಮಾಡಲು ತಿಳಿಸಿದರು. ನೋಂದಣಿ ಮತ್ತು ಮೇಲ್ವಿಚಾರಣೆಗಾಗಿ ಜಿಪಂ ಮುಖ್ಯ ಯೋಜನಾಧಿಕಾರಿಗಳ ನೇತೃತ್ವದ ಸಮಿತಿ ರಚಿಸಿದ್ದು, ಈ ಸಮಿತಿಯು ನೋಂದಾಯಿತ ಉದ್ಯೋಗದಾತರ ವಿವರವನ್ನು ಸಲ್ಲಿಸುವುದು, ನೊಂದಣಿ ಸ್ಟಾಲ್‌ಗಳಲ್ಲಿ ಅರ್ಜಿ ವಿತರಣೆ, ಮಾರ್ಗದರ್ಶನ ನೀಡುವ ಕೆಲಸವಾಗಬೇಕು ಎಂದರು.
ಸ್ಟಾಲ್‌ಗಳ ವಿತರಣೆ ಮತ್ತು ನಿರ್ವಹಣೆ ಸಮಿತಿಗೆ ಜಿಲ್ಲಾ ಉದ್ಯೋಗಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಉದ್ಯೋಗದಾತರುಗಳಿಗೆ ಸ್ಟಾಲ್ ವ್ಯವಸ್ಥೆ, ಸ್ಟಾಲ್‌ಗಳಲ್ಲಿ ಎಲ್ಲ ರೀತಿಯ ಸೌಲಭ್ಯ ಪೂರೈಸುವ ಕೆಲಸವಾಗಬೇಕು. ಸಂದರ್ಶನ ನಡೆಸಲು ಪ್ರತ್ಯೆಕ ಕೊಠಡಿಗಳ ವ್ಯವಸ್ಥೆ ಕಲ್ಪಿಸುವ ಕಾರ್ಯವಾಗಬೇಕು. ಉದ್ಯೋಗ ಆಕಾಂಕ್ಷಿಗಳ ಮತ್ತು ಗಣಕ ವಿಭಾಗ ಸಮಿತಿಗೆ ಎನ್‌ಐಸಿಯ ಜಿಲ್ಲಾ ಮಾಹಿತಿ ಅಧಿಕಾರಿಗಳನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಉದ್ಯೋಗದಾತರಿಗೆ ಮತ್ತುಉದ್ಯೋಗ ಆಕಾಂಕ್ಷಿಗಳಿಗೆ ಬಲ್ಕ್ ಎಸ್‌ಎಂಎಸ್ ಮತ್ತು ಮೇಲ್ ಕಳುಹಿಸುವುದು, ಆನ್‌ಲೈನ್, ಆಪ್‌ಲೈನ್ ನೋಂದಣಿಗೆ ಕ್ರಮ ವಹಿಸಲು ತಿಳಿಸಿದರು.
ಪ್ರತಿಯೊಂದು ಸಮಿತಿಯವರು ತಮ್ಮ ತಮ್ಮ ಹಂತದಲ್ಲಿ ಪ್ರತ್ಯೇಕ ಸಭೆ ನಡೆಸಿ ಯೋಜನೆ ರೂಪಿಸುವ ಮೂಲಕ ಉದ್ಯೋಗ ಮೇಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಗ್ರಾಮೀಣ ಭಾಗದ ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗುವಂತೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಲು ಬಸ್‌ಗಳ ವ್ಯವಸ್ಥೆ ಮಾಡುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ತರಬೇತಿ ಐಎಎಸ್ ಅಧಿಕಾರಿ ಗರಿಮಾ ಪನ್ವಾರ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ವಿ.ಎಸ್. ಹಿರೇಮಠ, ಎನ್‌ಐಸಿಯ ಜಿಲ್ಲಾ ಮಾಹಿತಿ ಅಧಿಕಾರಿ ಗಿರಿಯಾಚಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ|ಅರುಣಕುಮಾರ ಗಾಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಬಿರಾದಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.