Advertisement

ಮೋಹ-ಪ್ರಭಾವಗಳಿಗೆ ಒಳಗಾಗದ ಶತಮಾನದ ಸಂತ

12:43 AM Jan 04, 2023 | Team Udayavani |

ನಡೆದಾಡುವ ದೇವರು ಎಂದೇ ಭಕ್ತರ ಹೃದಯ ಮಂದಿರದಲ್ಲಿ ಪವಿತ್ರ ಸ್ಥಾನ ಪಡೆದಿರುವ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಧ್ರುವತಾರೆಯಾಗಿ ಧಾರ್ಮಿಕ, ಸಾಮಾಜಿಕ ಇನ್ನಿತರ ಕ್ಷೇತ್ರಗಳಿಗೆ ಬೆಳಕು ನೀಡಿದವರು. ನುಡಿದಂತೆ ನಡೆದವರು, ಸರಳತೆ, ಸೂಕ್ಷ್ಮತೆ, ಅರಿಷಡ್ವರ್ಗಗಳನ್ನು ಮೆಟ್ಟಿ ನಿಂತು, ಜ್ಞಾನವನ್ನು ಪಸರಿಸಿ ಮಾದರಿಯಾದ ವರು. ಹಣ-ಪಟ್ಟದ ಮೋಹಗಳಿಗೆಂದು ಒಳಗಾಗದೆ ಸಾರ್ಥಕ ಬದುಕು ಕಂಡ ಶತಮಾನದ ಸಂತ.

Advertisement

ಮಹಾನ್‌ ಸಂತರನ್ನು ಕಳೆದುಕೊಂಡು ರಾಜ್ಯದಲ್ಲೀಗ ಒಂದು ರೀತಿಯಲ್ಲಿ ಅನಾಥ ಭಾವ ಆವರಿಸಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಅವರ ಭಕ್ತಗಣ ಪಾರ್ಥಿವ ಶರೀರದ ದರ್ಶನ ಮಾಡಿದೆ. ಮಂಗಳವಾರ ಸಂಜೆ ಸಿದ್ಧೇಶ್ವರ ಶ್ರೀಗಳು ಪಂಚಭೂತದಲ್ಲಿ ಲೀನರಾಗಿದ್ದಾರೆ.

ಸಿದ್ಧೇಶ್ವರ ಶ್ರೀಗಳ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅಧ್ಯಯನ, ಜ್ಞಾನ, ಸರಳತೆ, ಸದಾ ಸತ್‌ಚಿಂತನೆ, ಉತ್ತಮ ಸಮಾಜ, ರಾಷ್ಟ್ರ ನಿರ್ಮಾಣಕ್ಕೆ ಪ್ರೇರಣೆ, ಅಧ್ಯಾತ್ಮವೇ ಸಿದ್ಧೇಶ್ವರ ಶ್ರೀಗಳ ಸಂಪತ್ತು ಆಗಿತ್ತು. ಯಾವುದೇ ಮೋಹ, ಪ್ರಭಾವ, ಒತ್ತಡ, ಆಸೆ ಇದಾವುದೂ ಅವರ ಬಳಿ ಸುಳಿಯದ ರೀತಿಯಲ್ಲಿ ಬದುಕಿ ತೋರಿಸಿದ ಮಹಾನ್‌ ಯೋಗಿ. ಸಿರಿವಂತಿಕೆಯ ಪೂರ್ವಾಶ್ರಮ ತೊರೆದು ಧಾರ್ಮಿಕ ಸಂಪತ್ತನ್ನು ಅಪ್ಪಿಕೊಂಡಿದ್ದರು. ಗುರುಗಳಿಂದ ಆಶೀರ್ವಾದ-ಪ್ರಸಾದ ರೂಪದಲ್ಲಿ ಪಡೆದ ಜ್ಞಾನಯೋಗಾ ಶ್ರಮಕ್ಕೆ ತಮ್ಮೊಳಗಿನ ಅಗಾಧ ಜ್ಞಾನವನ್ನು ಧಾರೆ ಎರೆಯುವ ಮೂಲಕ ಆಶ್ರಮ ಹಾಗೂ ನಾಡಿಗೆ ಹೊಸಶಕ್ತಿ ತುಂಬುವ ಕಾರ್ಯ ಮಾಡಿದ್ದರು.

ರಾಜ್ಯ-ದೇಶದಲ್ಲಿ ಸಾಕಷ್ಟು ಜನ ಮಠಾಧೀಶರು, ಪ್ರವಚನಕಾರರು ಪ್ರವಚನಗಳನ್ನು ನೀಡುತ್ತಾರೆ. ಆದರೆ ಯಾವುದೇ ರೀತಿಯ ಫಲಾಪೇಕ್ಷೆ ಇಲ್ಲದೆ ಪ್ರವಚನ ಆಲಿಸಲೆಂದು ಬಂದ ಎಲ್ಲ ವಯೋಮಾನದವರಿಗೂ ಮನನ ಆಗುವಂತೆ ಸಮಗ್ರ ಹಾಗೂ ಸಮಷ್ಟಿ ಚಿಂತನೆಯಡಿ ವಿಷಯ ಮಂಡನೆಯ ಪ್ರವಚನ ನೀಡಿಕೆಯಲ್ಲಿ ಸಿದ್ಧೇಶ್ವರ ಶ್ರೀಗಳಿಗೆ ಸಿದ್ಧೇಶ್ವರ ಶ್ರೀಗಳು ಮಾತ್ರ ಸಾಟಿ ಎನ್ನವುದು ನಿರ್ವಿವಾದದ ಮಾತು. ಅವರೆಂದು ವಿಷಯವನ್ನು ವಿಜೃಂಭಿಸಲಿಲ್ಲ, ಪಕ್ಷಪಾತ ತೋರಲಿಲ್ಲ, ಯಾರನ್ನೋ ಓಲೈಸುವುದಕ್ಕೆ, ನೋವಿಸುವುದಕ್ಕೆ ಯತ್ನಿಸಲಿಲ್ಲ. ಬದಲಾಗಿ ಪ್ರೇರೇಪಿಸು ವುದಕ್ಕೆ, ಬದುಕು-ಸಮಾಜ ಸುಧಾರಣೆಗೆ ಶಕ್ತಿ ತುಂಬುವುದಕ್ಕೆ ಪ್ರವಚನ ವೇದಿಕೆಯನ್ನು ಸಮರ್ಥ ರೀತಿಯಲ್ಲಿ ಬಳಕೆ ಮಾಡಿಕೊಂಡ ಕಾಯಕ ಯೋಗಿ ಅವರಾಗಿದ್ದರು.

ನಾಡು, ದೇಶ ಹಾಗೂ ವಿದೇಶಗಳಲ್ಲಿ ಪ್ರವಚನ ನೀಡಿಕೆ ಕಾಯಕದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದರೂ ಸಿದ್ಧೇಶ್ವರ ಶ್ರೀಗಳೆಂದೂ ಹಣವನ್ನು ತಮ್ಮ ಕೈಯಿಂದ ಮುಟ್ಟಲಿಲ್ಲ. ಭಕ್ತರಿಂದ ಇದನ್ನು ನೀಡಿ ಎಂದು ಬೇಡಲಿಲ್ಲ, ಕಾರು ಖರೀದಿಸಬೇಕೆಂಬ ಸಣ್ಣ ಚಿಂತನೆಯನ್ನು ಮಾಡಲಿಲ್ಲ. ಭಕ್ತರು ಕಾರು ನೀಡಲು ಮುಂದಾದರು ಬೇಡವೆಂದರು, ಸರಕಾರ ಆಶ್ರಮಕ್ಕೆ ಅನುದಾನ ನೀಡಲು ಮುಂದಾದರೂ ಅದರ ಅಗತ್ಯ ತಮಗಿಲ್ಲವೆಂದು ಸಣ್ಣ ಅಂಕುಶದ ಸ್ಥಿತಿಗೂ ಅವಕಾಶ ನೀಡದೆ ಸುದೀರ್ಘ‌ ಏಳೆಂಟು ದಶಕಗಳು ಧಾರ್ಮಿಕ ಕ್ಷೇತ್ರದಲ್ಲಿ ತಾವು ತೊಟ್ಟ ಶ್ವೇತವಸ್ತ್ರಗಳಂತೆ ಶುಭ್ರರೂಪದಲ್ಲಿ ಬಾಳಿ ತೋರಿದ ಮಹಾನ್‌ ಸಂತರಾಗಿದ್ದಾರೆ.

Advertisement

ತಮಗೇನು ಬೇಕು ಎಂಬುದನ್ನು ಸಣ್ಣ ರೂಪದಲ್ಲಿಯೂ ಕೇಳಲಿಲ್ಲ. ಬದಲಾಗಿ 82 ವರ್ಷಗಳ ಸಾರ್ಥಕ ಜೀವನದ ಪ್ರತೀ ಕ್ಷಣವೂ ಸಮಾಜ, ನಾಡು, ರಾಷ್ಟ್ರ, ಭಕ್ತ ಸಮೂಹದ ಹಿತಕ್ಕಾಗಿ ಚಿಂತಿಸಿ, ಭಕ್ತರು, ನಾಡು- ದೇಶದ ಸಾಧನೆ, ಹಿರಿಮೆಯಲ್ಲಿಯೇ ಸಂತಸ ಕಂಡ ಮಹಾನ್‌ ಚೇತನ.

Advertisement

Udayavani is now on Telegram. Click here to join our channel and stay updated with the latest news.

Next