Advertisement

ಜ್ಞಾನಭಾರತಿ ಆವರಣವಿನ್ನು ಮಾಡರ್ನ್

01:16 AM Aug 11, 2019 | Team Udayavani |

ಬೆಂಗಳೂರು: ರಾಜ್ಯದ ಅತಿ ದೊಡ್ಡ ಕ್ಯಾಂಪಸ್‌ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರು ವಿಶ್ವವಿದ್ಯಾಲಯದ “ಜ್ಞಾನಭಾರತಿ’ಯಲ್ಲಿ ಹಸಿರೀಕರಣ, ಸಿಸಿ ಕ್ಯಾಮೆರಾ ಅಳವಡಿಕೆ, ತಡೆಗೋಡೆ ನಿರ್ಮಾಣ, ಜಲಮೂಲಗಳ ಪುನಶ್ಚೇತನ ಸೇರಿ ಆಧುನಿಕ ಸ್ಪರ್ಶ ನೀಡಲು ಆಡಳಿತ ಮಂಡಳಿ ಮುಂದಾಗಿದೆ. ರೋಟರಿ ಕ್ಲಬ್‌ ಸಹಭಾಗಿತ್ವದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಜ್ಞಾನಭಾರತಿ ಆವರಣ “ಗ್ರೀನ್‌ ಹಾಗೂ ಸುಭದ್ರ ಕ್ಯಾಂಪಸ್‌’ ಆಗಲಿದೆ.

Advertisement

ಆ.11ರಂದು ಗ್ರೀನ್‌ ಕ್ಯಾಂಪಸ್‌ ಯೋಜನೆಗೆ ಅಧಿಕೃತ ಚಾಲನೆ ದೊರೆಯಲಿದ್ದು, 1300 ಎಕರೆ ವ್ಯಾಪ್ತಿಯ ಜ್ಞಾನಭಾರತಿ ಆವರಣದಲ್ಲಿ ಒಂದು ಲಕ್ಷ ಸಸಿ ನೆಡುವ ಉದ್ದೇಶವಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಹಲವು ಸಭೆಗಳನ್ನು ನಡೆಸಿರುವ ವಿವಿ ಆಡಳಿತ ಮಂಡಳಿ, ಸಸಿ ನೆಡಲು ಸ್ಥಳ ಗುರುತಿಸಲು ಡಿಜಿಟಲ್‌ ಸರ್ವೆ ನಡೆಸುತ್ತಿದೆ.

ಭದ್ರತೆಗೆ ವೀಕ್ಷಣಾ ಗೋಪುರ: ಈ ಮಧ್ಯೆ, ವಿವಿ ಆವರಣದಲ್ಲಿ ಶ್ರೀಗಂಧ, ತೇಗ ಸೆರಿ ಹಲವು ಬೆಲೆಬಾಳುವ ಮರಗಳಿವೆ. ಜತೆಗೆ, ನೂರಾರು ನವಿಲು, ಮೊಲ, ಮುಂಗಸಿಗಳಂತಹ ವನ್ಯ ಜೀವಿಗಳಿವೆ. ವಿವಿ ಆವರಣದಲ್ಲಿ ಅಪರಿಚಿತರು ವಿದ್ಯಾರ್ಥಿಗಳ ಮೊಬೈಲ್‌ ಕಸಿದು ಪರಾರಿಯಾದ ಘಟನೆಗಳು ಕೂಡ ನಡೆದಿವೆ. ಹಾಗಾಗಿ ಭದ್ರತೆ ದೃಷ್ಟಿಯಿಂದ ನಾಲ್ಕು ಮೂಲೆಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸುವುದು ಹಾಗೂ 100 ಸಿಸಿ ಕ್ಯಾಮೆರಾ ಅಳವಡಿಸುವುದು ಈ ಯೋಜನೆಯಲ್ಲಿ ಸೇರಿದೆ.

ಕ್ಯಾಪಸ್‌ನಲ್ಲಿದ್ದ 12 ಬೋರ್‌ವೆಲ್‌ಗ‌ಳಲ್ಲಿ ಅಂತರ್ಜಲ ಬತ್ತಿದೆ. ಹೀಗಾಗಿ, ಈ ಜಲಮೂಲಗಳ ಪುನರುಜ್ಜೀವನ, 20 ಹೊಸ ಎಕೋ ಪಾಂಡ್‌ಗಳ ನಿರ್ಮಾಣ, 10 ಹೊಸ ಚೆಕ್‌ ಡ್ಯಾಂ ನಿರ್ಮಾಣ ಕೂಡ ನಡೆಯಲಿದೆ. ಒತ್ತುವರಿ ತಡೆಯಲು ಕಾಂಪೌಂಡ್‌ ಇಲ್ಲದ ಗಡಿ ಗುರುತಿಸಿ ತಡೆಗೋಡೆ ನಿರ್ಮಿಸಲು ತೀರ್ಮಾನಿಸಿದೆ. ಏಕೆಂದರೆ, ಪ್ರಸ್ತುತ 1300 ಎಕರೆ ವ್ಯಾಪ್ತಿಯ ಜ್ಞಾನಭಾರತಿ ಕ್ಯಾಂಪಸ್‌ ಆವರಣ ಶೇ.60ರಷ್ಟು ಭಾಗ ಕಾಂಪೌಂಡ್‌ ಹೊಂದಿದೆ. ಬಾಕಿ 5 ಕಿ.ಮೀ ಗಡಿಗೆ ಕಾಂಪೌಂಡ್‌ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.

ಇದರೊಂದಿಗೆ ಎರಡು ತ್ಯಾಜ್ಯ ನೀರು ಸಂಸ್ಕರಣೆ ಘಟಕ ನಿರ್ಮಿಸಲಿದ್ದು, ಪ್ರತಿ ಘಟಕದಲ್ಲಿ ಒಂದು ದಶಲಕ್ಷ ಲೀ. ತ್ಯಾಜ್ಯ ನೀರು ಸಂಸ್ಕರಣೆ ಮಾಡಿ, ಈ ನೀರನ್ನು ಎರಡು ಓವರ್‌ ಹೆಡ್‌ ಟ್ಯಾಂಕ್‌ಗಳಲ್ಲಿ ಶೇಖರಿಸಿ, ಕ್ಯಾಂಪಸ್‌ನಲ್ಲಿ ನೆಡುವ ಗಿಡಗಳಿಗೆ ಪೂರೈಸಲು ಯೋಜನೆ ರೂಪಿಸಲಾಗಿದೆ.

Advertisement

ವಿವಿಯನ್ನು ಅಂತಾರಾಷ್ಟ್ರೀಯ ದರ್ಜೆಗೆ ಏರಿಸುವ ದೃಷ್ಟಿಯಿಂದ ಹಲವಾರು ಮಹತ್ವದ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಯೋಜನೆಗಳಿಗೆ ಸಿಂಡಿಕೇಟ್‌ ಅನುಮೋದನೆ ದೊರೆತಿದ್ದು, ಯೋಜನಾ ವೆಚ್ಚ 25 ಕೋಟಿ ರೂ.ಗಳನ್ನು ರೋಟರಿ ಸಂಸ್ಥೆ ಭರಿಸುತ್ತಿದೆ.
-ಡಾ.ಕೆ.ಆರ್‌.ವೇಣುಗೋಪಾಲ್‌, ಕುಲಪತಿ

ಕ್ಯಾಂಪಸ್‌ ಅಭಿವೃದ್ಧಿಗೆ ರೋಟರಿ ಸಂಸ್ಥೆ ಕೈಜೋಡಿಸಿದ್ದು, ಎರಡು ವರ್ಷಗಳಲ್ಲಿ ಕ್ಯಾಂಪಸ್‌ನ ಸ್ವರೂಪವನ್ನೇ ಬದಲಿಸುವ ಉದ್ದೇಶವಿದೆ. ಜ್ಞಾನಭಾರತಿಯನ್ನು ಪರಿಸರ ಸ್ನೇಹಿ ಕ್ಯಾಂಪಸ್‌ ಮಾಡುವ ಜತೆಗೆ ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಲಾಗುವುದು.
-ಡಾ. ಕೆ.ಸಿ.ಜಯರಾಮು, ಬೆಂಗಳೂರು ಜಿಲ್ಲಾ ರೋಟರಿ ಅಧ್ಯಕ್ಷ

* ಲೋಕೇಶ್‌ ರಾಮ್‌

Advertisement

Udayavani is now on Telegram. Click here to join our channel and stay updated with the latest news.

Next