Advertisement

ಜೆಜೆಎಂ ಸಮಗ್ರ ತಾಂತ್ರಿಕ ಜ್ಞಾನ ಅಗತ್ಯ; ಸಿಇಒ ಪ್ರಿಯಾಂಕಾ

06:25 PM May 13, 2022 | Team Udayavani |

ಕಾರವಾರ: ಕೇಂದ್ರ ಮತ್ತು ರಾಜ್ಯ ಸರಕಾರದ ಬಹು ನಿರೀಕ್ಷಿತ ಯೋಜನೆಯಾಗಿರುವ ಜಲ ಜೀವನ ಮಿಷನ್‌ನ ಯಶಸ್ವಿ ಅನುಷ್ಠಾನಕ್ಕೆ ತಾಲೂಕು ಹಾಗೂ ಗ್ರಾಮ ಪಂಚಾಯತಿ ಹಂತದ ಸ್ಥಳೀಯ ಮಟ್ಟದ ಅನುಷ್ಠಾನ ಅಧಿಕಾರಿಗಳಿಗೆ ಯೋಜನೆ ಕುರಿತಾದ ಸಮಗ್ರ ತಾಂತ್ರಿಕ ಜ್ಞಾನದ ಅವಶ್ಯಕತೆಯಿದೆ ಎಂದು ಜಿಪಂ ಸಿಇಒ ಪ್ರಿಯಾಂಕಾ ಅಭಿಪ್ರಾಯಪಟ್ಟರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಜಿಪಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಯೋಗದಲ್ಲಿ ಜಲ ಜೀವನ ಮಿಷನ್‌ ಯೋಜನೆಯಡಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಉಪ ವಿಭಾಗದ ಶಾಖಾಧಿಕಾರಿಗಳಿಗಾಗಿ ಗುರುವಾರ ಆಯೋಜಿಸಿದ್ದ ತಾಂತ್ರಿಕ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮನೆ ಮನೆಗೆ ಗಂಗೆ ತಲುಪಿಸುವ ಸದುದ್ದೇಶದಿಂದ ಜಿಲ್ಲೆಯಲ್ಲಿ ಜೆಜೆಎಂ ಯೋಜನೆಯಡಿ 2020-21ರಿಂದ 2022-23ನೇ ಸಾಲಿನವರೆಗೆ ಸುಮರು 887 ಕೋಟಿ ರೂ. ವೆಚ್ಚದಲ್ಲಿ ಒಟ್ಟು 607 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರಕಾರದಿಂದ ತಲಾ ಶೇ. 42.5ರಷ್ಟು ಅನುದಾನದೊಂದಿಗೆ ಸುಮುದಾಯದಿಂದ ಶೇ. 10, ಗ್ರಾಪಂನಿಂದ ಶೇ. 5ರಷ್ಟು ವಂತಿಗೆಯೊಂದಿಗೆ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಈ ಬೃಹತ್‌ ಗಾತ್ರದ ಯೋಜನೆ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಮತ್ತು ಉಪ ವಿಭಾಗದ ಶಾಖಾಧಿಕಾರಿಗಳಿಗೆ ವಹಿಸಲಾಗಿದ್ದು, ಜೆಜೆಎಂನ ಪರಿಣಾಮಕಾರಿ ಅನುಷ್ಠಾನದಲ್ಲಿ ಈ ಸಂಬಂಧಿಸಿದ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ.

ಹೀಗಾಗಿ ಯೋಜನೆಯ ಅಡೆತಡೆಗಳ ನಿವಾರಣೆ ದೃಷ್ಟಿಯಿಂದ ಈ ತರಬೇತಿಯಲ್ಲಿ ಪ್ರತಿಯೊಬ್ಬರೂ ತಾಂತ್ರಿಕ ಜ್ಞಾನ ಅರಿತುಕೊಳ್ಳಬೇಕು. ಜೊತೆಗೆ ಪ್ರತಿಯೊಬ್ಬ ಅಧಿಕಾರಿಯೂ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಸೂಚಿಸಿದರು.

Advertisement

ಉದ್ಘಾಟನಾ ಕಾರ್ಯಕ್ರಮದ ನಂತರ ಜಿಪಂ ಸಿಇಒ ಪ್ರಿಯಾಂಗಾ ಎಂ. ಅವರು ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಪ್ರಕಾಶ್‌ ಹಾಗೂ ರಾಘವೇಂದ್ರ ನಾಯ್ಕ ಅವರು ತರಬೇತಿ ನೀಡಿದರು. ಅಲ್ಲದೆ ತರಬೇತಿ ವೇಳೆ ನೀರಿನ ಗುಣಮಟ್ಟದ ಬಗ್ಗೆ ಪರೀಕ್ಷೆ ಮಾಡಿ ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ವಿವರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಜೆಜೆಎಂ ಯೋಜನೆ ಅನುಷ್ಠಾನಗೊಳಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ತಾಲೂಕು ಹಾಗೂ ಗ್ರಾಪಂಗಳಿಗೆ ಜಲೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಾಗಾರದಲ್ಲಿ ಜಿಪಂನ ಅಭಿವೃದ್ಧಿ ವಿಭಾಗದ ಉಪ ಕಾರ್ಯದರ್ಶಿ ಡಿ.ಎಂ. ಜಕ್ಕಪ್ಪಗೋಳ್‌, ಮುಖ್ಯ ಯೋಜನಾಧಿಕಾರಿ ವಿನೋದ್‌ ಅಣೆಕರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಪ್ರಕಾಶ ಸೇರಿದಂತೆ ಜಿಲ್ಲೆಯ ಎಲ್ಲ ತಾಪಂನ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒಗಳು, ಕಾರ್ಯಕ್ರಮದ ಆಯೋಜಕರಾದ ಜೆಜೆಎಂನ ಡಿಪಿಎಂ ವೆಂಕಟೇಶ ಜಿ. ನಾಯ್ಕ, ತಾಲೂಕು ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next